ವಾಣಿಜ್ಯ ಜಾಹಿರಾತು
ರಾತ್ರಿ ಮಿತವಾಗಿ ಅಲ್ಲದೆ ಬೇಗ ಊಟ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ರಾತ್ರಿ ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ನೀವು ಅತಿಯಾಗಿ ಆಹಾರ ಸೇವಿಸಿದರೆ ಸರಿಯಾಗಿ ಜೀರ್ಣವಾಗದೆ ತೊಂದರೆಯಾಗಬಹುದು. ಹಾಗೆಯೇ ಬೇಗ ಊಟ ಮಾಡುವುದರಿಂದ ಮಲಗುವ ಮುನ್ನವೇ ಆಹಾರ ಜೀರ್ಣವಾಗಲು ಮತ್ತು ತೂಕ ಕಡಿಮೆಮಾಡಿಕೊಳ್ಳಲು ಸಹಾಯವಾಗುತ್ತದೆ. ಆರೋಗ್ಯ ತಜ್ಞರು 7 ಗಂಟೆಯ ಮೊದಲು ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ.
ಏನೆಲ್ಲ ತೊಂದರೆ?
- ನೀವು ಅತಿಯಾಗಿ ತಿಂದರೆ, ನಿಮ್ಮ ಹೃದಯ ಸಾಮಾನ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. 6 ಗಂಟೆಯ ನಂತರ ಹೆಚ್ಚಿನ ಕ್ಯಾಲರಿಯುಳ್ಳ ಊಟ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
- ರಾತ್ರಿ ಮಿತಿಮೀರಿ ಆಹಾರ ಸೇವಿಸಿದರೆ ನಿದ್ರಾಹೀನತೆಗೆ ಕಾರಣವಾಗುತ್ತದೆ. ಮಲಗುವ ಮುನ್ನ ಬಹುತೇಕ ಆಹಾರ ಜೀರ್ಣವಾಗಿದ್ದರೆ ಉತ್ತಮ ನಿದ್ದೆ ಹಿಡಿಯುತ್ತದೆ. ಇಲ್ಲವಾದರೆ ಉತ್ತಮ ನಿದ್ದೆ ಅಡ್ಡಿಯಾಗಿ ಮರುದಿನದ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಒತ್ತಡ, ಆಯಾಸ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
- ರಾತ್ರಿ ತಡವಾಗಿ ಆಹಾರ ಸೇವಿಸಿದರೆ ಬೆಳಗ್ಗೆ ಹಸಿವಾಗುವುದು ತಡವಾಗಬಹುದು. ಹೆಚ್ಚು ಆಹಾರ ಸೇವಿಸಿದ್ದರೆ ಸರಿಯಾಗಿ ಜೀರ್ಣವಾಗದೆ ಬೆಳಗ್ಗಿನ ಉಪಹಾರ ಬಿಡಬೇಕಾದ ಪರಿಸ್ಥಿತಿ ಬರಬಹುದು. ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ನಿರ್ಲಕ್ಷ್ಯ ವಹಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.
- ರಾತ್ರಿ ತಡವಾಗಿ ಅಲ್ಲದೆ ಹೆಚ್ಚಿನ ಆಹಾರ ಸೇವಿಸುವುದರಿಂದ ಜಠರಗರುಳಿನ ಕಾಯಿಲೆ, ಜಠರದುರಿತ, ಗ್ಯಾಸ್ಟ್ರಿಕ್ ಹುಣ್ಣು, ಎಂಟರೈಟಿಸ್, ಮಲಬದ್ಧತೆ ಮತ್ತು ಕರುಳಿನ ಕ್ಯಾನ್ಸರ್‍ಗೂ ಕಾರಣವಾಗಬಹುದು. ರಾತ್ರಿ ಬೇಗ ಊಟ ಮಾಡುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ರೋಗಗಳ ಅಪಾಯ ಕಡಿಮೆ ಮಾಡಲು ಸಹಾಯವಾಗುತ್ತದೆ.
ವಾಣಿಜ್ಯ ಜಾಹಿರಾತು