ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಶಾಕ್ ನೀಡಿದ್ದು, ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿದೆ.
ನಗರದಲ್ಲಿ ಸೋಮವಾರ ಕೆಇಆರ್‌ಸಿ ಆಯೋಗದ ನಿಯೋಜಿತ ಅಧ್ಯಕ್ಷ ಹಾಗೂ ಸದಸ್ಯರಾದ ಎಚ್.ಎನ್.ಮಂಜುನಾಥ್, 2022-23ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿ, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 35 ಪೈಸೆ ಏರಿಕೆ (ಶೇ.4.33) ಮಾಡಿರುವುದನ್ನು ಪ್ರಕಟಿಸಿದ್ದಾರೆ.
ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಅಥವಾ ಅದರ ನಂತರ ಮೊದಲ ಮೀಟರ್ ಓದುವ ದಿನಾಂಕದಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ತಿಳಿಸಿದೆ.
ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಳವಾಗಿದೆ. ಫಿಕ್ಸೆಡ್ ದರವನ್ನು 10 ರಿಂದ 30 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ.
ರಾಜ್ಯದಲ್ಲಿರುವ ಐದು ಎಸ್ಕಾಂಗಳು 11,320 ಕೋಟಿ ರೂ.ಗಳ ಕಂದಾಯ ಕೊರತೆಗೆ ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಅಂದರೆ ಶೇ.23.83 ರಷ್ಟು ಹೆಚ್ಚಳ ಮಾಡುವಂತೆ ಕೋರಿದ್ದವು. ಈ ಬಗ್ಗೆ ಸವಿಸ್ತರವಾಗಿ ವಿಚಾರಣೆ ಮಾಡಿದ ಕೆಇಆರ್ ಸಿ ಆಯೋಗ, ಆರ್ಥಿಕ ವರ್ಷ 2022-23ಕ್ಕೆ ಅನ್ವಯವಾಗುವಂತೆ ಈ ಪರಿಷ್ಕೃತ ದರವನ್ನು ಜಾರಿ ಮಾಡಿದೆ.
2022-23ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ 2159.48 ಕೋಟಿ ರೂ.ಗಳನ್ನು ಮರು ಪಡೆಯಲು ದರ ಹೆಚ್ಚಳ ಅನಿವಾರ್ಯವಾಗಿದೆ. ಸದರಿ ಮೊತ್ತವು ಆರ್ಥಿಕ ವರ್ಷ 2020-21ರ ಕೊರತೆಯ ಮೊತ್ತ ರೂ. 1700.49 ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದು ಕೆಇಆರ್‌ಸಿ ಹೇಳಿದೆ.