ಅತಿಯಾದ ಭಯ ‘ಫೋಬಿಯಾ’!!

3

ಮನುಷ್ಯರೆಂದ ಮೇಲೆ ಕೋಪ-ತಾಪ, ಭಯ, ಆತಂಕಗಳು ಸಾಮಾನ್ಯ ಅಲ್ಲವೇ? ಪ್ರಪಂಚದಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಯಾವುದೇ ಭಯವನ್ನು ಅನುಭವಿಸದೇ ಜೀವಿಸುತ್ತಾನೆ ಎಂದರೆ ಅದು ಸಾಧ್ಯವೇ? ನನ್ನ ಅನುಭವ ‘ಇಲ್ಲ’ ಎನ್ನುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಯ ಎನ್ನುವ ಅಂಶ ಕಾಡದೇ ಇರದು.

ಮಕ್ಕಳಿಗೆ ಕತ್ತಲ ಕೋಣೆಯ ಗುಮ್ಮನ ಭಯ, ಯುವಕರಿಗೆ ತಂದೆ-ತಾಯಿಯ ಕಣ್ಣುತಪ್ಪಿಸಿ ಮಾಡುವ ಕೆಲಸದಲ್ಲಿ ಸಿಕ್ಕಿಬಿದ್ದರೇ? ಎನ್ನುವ ಭಯ, ವಯಸ್ಕರಲ್ಲಿ ಓದು ಮುಗಿದು ತಮಗೆ ಸರಿಹೊಂದುವ ಕೆಲಸ ಸಿಗುವುದೋ- ಇಲ್ಲವೋ ಎಂಬ ಭಯ, ಹಿರಿಯರಲ್ಲಿ ಸಂಸಾರದ ನಿರ್ವಹಣೆಯ ಭಯ, ವೃದ್ಧರಲ್ಲಿ ಕಾಯಿಲೆ, ಸಾವು-ನೋವಿನ ಭಯ ಇನ್ನೂ ಇತ್ಯಾದಿ ಭಯ-ಭೀತಿಗಳು. ಈ ಉದಾಹರಣೆಗಳನ್ನೆಲ್ಲಾ ಬರೆಯುವಾಗ ನನಗೆ ಆಶ್ಚರ್ಯದೊಂದಿಗೆ ಭಯವೂ ಆಯಿತು! ಕಾರಣ, ಅದೆಷ್ಟು ಬಗೆಯ ಭೀತಿಗಳಿಗೆ ನಾವು ಹುಟ್ಟಿನಿಂದ ಸಾವಿನವರೆಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ ಎಂದು.

ಆದರೂ ಒಬ್ಬ ವ್ಯಕ್ತಿಯು ಅದೆಷ್ಟು ಭಯಗಳನ್ನು ಮೀರಿ ಜೀವನದಲ್ಲಿ ಮುಂದೆ ಬರಲು ತವಕಿಸುತ್ತಾನೆ. ಬಹಳಷ್ಟು ಭೀತಿಗಳು ಹಲವು ಬಗೆಯ ಅನುಭವಗಳನ್ನು ಕೊಡುತ್ತವೆ. ಹೆಚ್ಚಿನ ಭಯಗಳು ನಮ್ಮ ಜೀವನದಲ್ಲಿ ಅನಿವಾರ್ಯತೆಯನ್ನು ಪಡೆದಿರುತ್ತದೆ. ಅದನ್ನೆಲ್ಲಾ ಮೀರಿ ನಡೆದರಷ್ಟೇ ನಮ್ಮ ಜೀವನದ ಪ್ರಯಾಣ ಮುನ್ನಡೆಯುವಂತಾಗುತ್ತದೆ.
ಈ ಭೀತಿಯ ಕಾರಣದಿಂದಾಗಿ ಅವನ್ನು ಎದುರಿಸಿ ಸಫಲರಾಗಿ ಉತ್ತುಂಗಕ್ಕೇರುವ ಘಟನೆಗಳು ನಮ್ಮಲ್ಲಿ ಬೇಕಾದಷ್ಟಿವೆ. ಅಂತೆಯೇ ಭಯವನ್ನು ಎದುರಿಸಲಾಗದೇ ಸಾವಿಗೆ ಶರಣಾದ ಉದಾಹರಣೆಗಳೂ ನಮ್ಮಲ್ಲಿವೆ.

ಆದರೆ ಇಲ್ಲಿ ನಾವು ಎಷ್ಟು ಧೈರ್ಯವಾಗಿ ಧೃತಿಗೆಡದೇ ಅಂತಹ ಸಂದರ್ಭವನ್ನು ಎದುರಿಸಿದ್ದೇವೆ ಎನ್ನುವುದು ಗಮನಿಸಬೇಕಾದ ಅಂಶ. ಅದಲ್ಲದೇ ಈ ಎಲ್ಲಾ ಭಯಗಳು ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಕಂಡುಬರುವಂಥದ್ದು. ಈ ಭಯಗಳೆಲ್ಲಾ ನಮಗೆ ಸಾಮಾನ್ಯವಾಗಿ ಕಂಡರೂ, ಕೆಲವರ ಮಟ್ಟಿಗೆ ಅದು ಅಸಹಜವಾಗಿ ಅವರ ಜೀವನದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.

ಹಾಗಾದರೆ ಅಸಹಜ ಭೀತಿ ಎಂದರೆ?
ಮನ:ಶಾಸ್ತ್ರದ ಪ್ರಕಾರ ಒಂದು ಘಟನೆ\ಸಂದರ್ಭ ಮತ್ತು ಒಂದು ವಸ್ತುವಿನ ಬಗ್ಗೆ ಅತಿಯಾದ, ಅಸಹಜವಾದ, ತೀವ್ರತರವಾದ ತರ್ಕ ವಿರುದ್ಧದ ಭಯವು (ಘಾಸಿಗೊಳಿಸಬಹುದಾದ\ ಘಾಸಿಗೊಳಿಸದೇ ಇರದ) ನಮ್ಮನ್ನು ಮತ್ತೆ ಮತ್ತೆ ಕಾಡುವುದೋ ಅದೇ ಅಸಹಜ ಭೀತಿ.
ಈ ಭೀತಿಯನ್ನು ಆಂಗ್ಲಭಾಷೆಯಲ್ಲಿ ಫೋಬಿಯಾ ಎನ್ನುತ್ತಾರೆ.

ಮನ:ಶಾಸ್ತ್ರದ ಪ್ರಕಾರ ಈ ಭೀತಿಯನ್ನು ಮೂರು ವಿಧದಲ್ಲಿ ವಿಂಗಡಿಸಲಾಗಿದೆ.
ಅವು:

೧) ವಿಶಿಷ್ಟ/ ನಿರ್ದಿಷ್ಟ ಭೀತಿ(Specific phobia)

೨)ಸಾಮಾಜಿಕ ಭೀತಿ(Social phobia)

೩)ಬಯಲು ಭೀತಿ(agora phobia)

ಈ ಭೀತಿಯ ವಿಂಗಡಣೆಗಳನ್ನು ವಿವರವಾಗಿ ತಿಳಿಸುವುದಾದರೆ,
ಮೊದಲನೆಯದಾಗಿ:
ನಿರ್ದಿಷ್ಟ ಭೀತಿ
ಇದನ್ನು ಸಾಮಾನ್ಯ ಭೀತಿ ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಘಟನೆ\ಸಂದರ್ಭ ಮತ್ತು ಒಂದು ನಿರ್ದಿಷ್ಟ ವಸ್ತುವಿನ ಬಗೆಗೆ ಅಸಹಜವಾದ, ತೀವ್ರತರನಾಗಿ ಮತ್ತೆ ಮತ್ತೆ ಕಾಡುವಂತಹ ಭೀತಿಯೇ ನಿರ್ದಿಷ್ಟ ಭೀತಿ.
ಕೆಲವೊಂದು ವಸ್ತುಗಳ ಮತ್ತು ಘಟನೆಗಳ ಮೇಲೆ ಹಲವು ಬಗೆಯ ನಿರ್ದಿಷ್ಟ ಭೀತಿಗಳನ್ನು ಕಾಣಬಹುದಾಗಿದೆ.

ಅವು:
೧) ಪ್ರಾಣಿ ಭೀತಿ(Animal phobia)
ನಾಯಿ, ಹಾವು, ಕ್ರಿಮಿ-ಕೀಟ, ಇಲಿ ಇತ್ಯಾದಿಗಳ ಭೀತಿ.

೨)ಸಾಂದರ್ಭಿಕ ಭೀತಿ(Situational phobia)
ಈ ಭೀತಿಯು ಕೆಲವೊಂದು ಸಂದರ್ಭಗಳಿಗೆ ಅವಲಂಬಿತವಾಗಿವೆ.
ಉದಾ-ಕಾರಿನಲ್ಲಿ ಓಡಾಡುವ ಭೀತಿ(ಇನ್ನಿತರ ವಾಹನಗಳಲ್ಲಿ ಓಡಾಡುವಾಗಿನ ಭೀತಿ, ಸೇತುವೆಯನ್ನು ದಾಟುವಾಗಿನ ಭೀತಿ, ಮುಚ್ಚಿದ ಕೋಣೆಯಲ್ಲಿ ಅಥವಾ ಕತ್ತಲೆ ಕೋಣೆಯಲ್ಲಿ ಇದ್ದಾಗ ಕಾಡುವ ಭೀತಿ, ಲಿಫ್ಟ್ ಅನ್ನು ಬಳಸುವಾಗ ಕಾಡುವ ಭೀತಿ ಇತ್ಯಾದಿ ಎಲ್ಲವೂ ಸಾಂದರ್ಭಿಕ ಭೀತಿಗಳಾಗಿವೆ.

೩)ನೈಸರ್ಗಿಕ-ಪರಿಸರ ಭೀತಿಗಳು(Natural environment phobias)
ನೀರಿನ ಪ್ರವಾಹ, ಸುಂಟರಗಾಳಿ, ಅತೀ ಎತ್ತರವಾದ ಬೆಟ್ಟ-ಗುಡ್ಡಗಳನ್ನು ಕಂಡಾಗ ಆಗುವಂತಹ ಭೀತಿ.

೪)ರಕ್ತ-ಚುಚ್ಚುಮದ್ದು-ಗಾಯದ ಭಯ(Blood injection-injury phobias)
ರಕ್ತವನ್ನು ಕಂಡಾಗ, ಗಾಯವನ್ನು ಕಂಡಾಗ, ಕೆಲವೊಂದು ವೈದ್ಯಕೀಯ ಪರೀಕ್ಷೆಗೊಳಪಟ್ಟಾಗ (ಉದಾ: ರಕ್ತದ ಮಾದರಿಯನ್ನು ಕೊಡುವಾಗ, ಚುಚ್ಚುಮದ್ದು ನೀಡುವಾಗ ಆಗುವಂತಹ ಭಯ)

೫) ಇನ್ನಿತರ ಭೀತಿಗಳು(other phobias)
ಅತಿಯಾದ ಭಯಂಕರ ಶಬ್ದಗಳನ್ನು ಕೇಳಿದಾಗ, ಅತೀ ಎತ್ತರದ ಪ್ರದೇಶದಲ್ಲಿ ನಿಂತು ಕೆಳಗಡೆ ನೋಡುವಾಗ, ಮುಖವಾಡಗಳನ್ನು ಧರಿಸಿದ-ವೇಷಭೂಷಣಗಳನ್ನು ಹಾಕಿಕೊಂಡ ವ್ಯಕ್ತಿಯನ್ನು ಕಂಡಾಗ ಪಡುವಂತಹ ಭೀತಿ.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ನಿರ್ದಿಷ್ಟ ಭೀತಿಯನ್ನೂ ಹೊಂದಿರಬಹುದು.


ಎರಡನೆಯದಾಗಿ:
ಸಾಮಾಜಿಕ ಭೀತಿ(social phobia)
ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ನಿರ್ದಿಷ್ಟ ಸಾಮಾಜಿಕ ಸಂದರ್ಭಗಳಲ್ಲಿಆವರಿಸಿಕೊಳ್ಳುವ ಭೀತಿಯೇ ಸಾಮಾಜಿಕ ಭೀತಿ.
ಉದಾ: ಸಭೆಯನ್ನುದ್ದೇಶಿಸಿ ಮಾತನಾಡುವುದು, ಸಾರ್ವಜನಿಕ ಮೂತ್ರಾಲಯಗಳನ್ನು ಬಳಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವಾಗ ಇತ್ಯಾದಿ.
ಇವೆಲ್ಲದರಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಭಯ ಅತೀ ಸಾಮಾನ್ಯವಾಗಿ ಕಂಡುಬರುವಂತಹ ಸಾಮಾಜಿಕ ಭೀತಿಯಾಗಿದೆ.

ಮೂರನೆಯದಾಗಿ,
ಬಯಲು ಭೀತಿ(Agora phobia)
ಇತಿಹಾಸದ ಪ್ರಕಾರ ಈ Agora ಅನ್ನುವ ಶಬ್ದವು ಗ್ರೀಕ್ ಭಾಷೆಯಿಂದ ಬಂದಿದ್ದು, “ಸಾರ್ವಜನಿಕ ಸ್ಥಳ” ಎನ್ನುವ ಅರ್ಥವನ್ನು ಕೊಡುತ್ತದೆ.

ಈ Agora phobia (ಬಯಲು ಭೀತಿ)ಯಲ್ಲಿ ಸಾಮಾನ್ಯವಾಗಿ ವ್ಯಕ್ತಿಯು ರಸ್ತೆಗಳು-ಬೀದಿಗಳು, ಜನರಿಂದ ತುಂಬಿರುವ ಸ್ಥಳಗಳು ಅಂದರೆ ಶಾಪಿಂಗ್ ಮಾಲ್ ಗಳು, ಚಲನಚಿತ್ರ ಮಂದಿರಗಳು ಇತ್ಯಾದಿಗಳಿಂದ ದೂರವಿರಲು ಬಯಸುತ್ತಾನೆ.
ಅದಲ್ಲದೆ ಲಿಫ್ಟ್ ನ ಒಳಗಡೆ ತುಂಬಾ ಜನರು ಸೇರಿದ್ದಲ್ಲಿ, ಮಾರ್ಕೆಟ್ ಗಳಲ್ಲಿ ಮನೆಯನ್ನು ಬಿಟ್ಟು ದೂರ ಹೋಗುವುದು ಇತ್ಯಾದಿಗಳಿಗೆ ಸಂಬಂಧಿಸಿದ ಸಂದರ್ಭಗಳು ಬಂದಲ್ಲಿ ತಮಗೆ ಮಾನಸಿಕ ಹಾಗೂ ದೈಹಿಕವಾಗಿ ಬಿಡಿಸಿಕೊಳ್ಳಲು ಆಗದೇ ಇರುವಂತಹ ಸ್ಥಳಗಳಿಂದ ಮತ್ತು ಸಂದರ್ಭಗಳಿಂದ ದೂರ ಉಳಿಯಲು ಇಚ್ಚಿಸುತ್ತಾನೆ.

ಇನ್ನೊಂದು ಅಂಶವೆಂದರೆ, ತಮ್ಮ ದೇಹದಲ್ಲಿ ಏನಾದರೂ ಸಣ್ಣಪುಟ್ಟ ಬದಲಾವಣೆಗಳಾದರೂ ಅದರಿಂದ ಭೀತಿಗೊಂಡು, ಅಂತಹ ಏನೇ ಸಂದರ್ಭಗಳಿದ್ದರೂ, ಅದರ ಹತ್ತಿರ ಸುಳಿದಾಡಲೂ ಹೋಗುವುದಿಲ್ಲ.
ಉದಾ: ಯೋಗ, ವ್ಯಾಯಾಮ ಮಾಡುವುದು, ದೆವ್ವ-ಭೂತಗಳಿಗೆ ಸಂಬಂಧಪಟ್ಟ ಚಲನಚಿತ್ರಗಳನ್ನು ನೋಡುವುದು, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಇತ್ಯಾದಿ.

ಅತಿಯಾದ ಬಯಲು ಭೀತಿ ಉಳ್ಳವರು ತಮ್ಮ ತಮ್ಮ ಮನೆಗಳಲ್ಲೇ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗ ಅಥವಾ ತಮ್ಮ ಸ್ವಂತ ಮನೆಯಿಂದಲೇ ಹೊರಗೆ ಕಾಲಿಡುವುದಕ್ಕೆ ಹಿಂಜರಿಯುತ್ತಾರೆ.

ಮೇಲ್ನೋಟಕ್ಕೆ ಸಾಮಾಜಿಕ ಭೀತಿ ಮತ್ತು ಬಯಲು ಭೀತಿ ಒಂದೇ ಲಕ್ಷಣಗಳನ್ನು ಹೊಂದಿದ್ದರೂ, ಸಾಮಾಜಿಕ ಭೀತಿಯಲ್ಲಿ ಹೊಂದಿರುವಂತಹ ಸಾಮಾಜಿಕ ಸಂವಹನದ ಸಾಧ್ಯತೆಗಳು ಬಯಲು ಭೀತಿಯಲ್ಲಿ ಇರಲಾರದು. ಬಯಲುಭೀತಿಯಲ್ಲಿ ಸಂವಹನದ ಯಾವುದೇ ಪ್ರಕ್ರಿಯೆಗಳು ಇರಲಾರದು.

ಈ ಮೂರು ವಿಧದ ಭೀತಿಗಳನ್ನು ಹೊಂದಿರುವವರಲ್ಲಿ ಕೇವಲ ಈ ರೋಗ ಮಾತ್ರವಲ್ಲದೇ ಇದರ ಜೊತೆ ಜೊತೆಗೇ ಶೇಕಡಾ 50ರಿಂದ 60ರಷ್ಟು ಜನರು ಖಿನ್ನತೆ, ಆತಂಕ, ಮಧ್ಯಪಾನ-ಮಾದಕ ವ್ಯಸನಗಳಿಂದ ರೋಗಗಳಿಗೆ ತುತ್ತಾಗಿರುತ್ತಾರೆ.

ಸಾಧಾರಣವಾಗಿ 15ರಿಂದ 40 ವರ್ಷದವರೆಗಿನ ಜನರಲ್ಲಿ ಈ ಭೀತಿಯ ಕಾಯಿಲೆಯನ್ನು ಕಾಣಬಹುದಾಗಿದೆ. ಅದರಲ್ಲೂ ನಿರ್ದಿಷ್ಟ ಭೀತಿ ಮತ್ತು ಸಾಮಾಜಿಕ ಭೀತಿ ಹೆಣ್ಣು ಮಕ್ಕಳಲ್ಲಿ ಹೆಚ್ಚಿನ ತೀವ್ರತರ ರೂಪದಲ್ಲಿ ಕಂಡುಬರುವಂತಹ ಕಾಯಿಲೆ ಎನ್ನುವುದು ಮನ:ಶಾಸ್ತ್ರಜ್ಞರ ಅಂಬೋಣ.

ಕಾರಣಗಳು

 • ಅನುವಂಶಿಕ ಅಂಶಗಳು:
  ವರದಿಗಳ ಪ್ರಕಾರ ನಿರ್ದಿಷ್ಟ ಭೀತಿಯಲ್ಲಿ ಅನುವಂಶಿಕ ಅಂಶಗಳ ಪ್ರಭಾವ ಹೆಚ್ಚಾಗಿ ಕಂಡುಬರುವುದು.
 • ಜೀವರಾಸಾಯನಿಕ ವೈಪರೀತ್ಯಗಳು:
  ಅಧ್ಯಯನಗಳ ಪ್ರಕಾರ ಎರಡು ಪ್ರಾಥಮಿಕ ನರಪ್ರೇಕ್ಷಕ(primary neurotransmitters)ಗಳ ಪ್ರಭಾವದಿಂದ ಈ ಭೀತಿಗಳು ಕಂಡುಬರುತ್ತವೆ.
  ಅವು: ನೊರೆಪೈನ್ಫ್ರೈನ್ (Norepinephrine) ಮತ್ತು ಸಿರೋಟೋನಿನ್(Serotonin)
 • ಅಸಹಜ ನೊರೆಪೈನ್ಫ್ರೈನ್ ಚಟುವಟಿಕೆಗಳು Locus Coeruleus ನಲ್ಲಿ ಕಂಡುಬಂದಾಗ ಥಟ್ಟನೇ ಕಾಡುವ ಭೀತಿಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಮಿದುಳಿನ Hippocampus, amygdala ಭಾಗಗಳ ಚಟುವಟಿಕೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಭಯದ ಸಂಕೀರ್ಣ ವ್ಯವಸ್ಥೆಗಳು ಚುರುಕುಗೊಂಡು ವ್ಯಕ್ತಿಯಲ್ಲಿ ಭಯದ ಲಕ್ಷಣಗಳನ್ನು ಉತ್ಪತ್ತಿ ಮಾಡುತ್ತವೆ.

ಅರಿವಿನ ಅಂಶಗಳು ಕೂಡ ರೋಗದ ಪ್ರಾರಂಭ ಹಾಗೂ ನಿರ್ವಹಣೆಯಲ್ಲಿ ಬಹಳ ಮಹತ್ತರ ಪಾತ್ರವನ್ನು ನಿರ್ವಹಿಸುತ್ತವೆ. ಅನುವಂಶಿಕ ಮತ್ತು ಭಯದ ಅಸ್ಥಿರಗಳು ಭೀತಿಯ ವೇಗ ಮತ್ತು ಶಕ್ತಿಯಲ್ಲಿ ಮುಖ್ಯ ಪಾತ್ರ ವಹಿಸಿಕೊಂಡಿವೆ.

ಚಿಕಿತ್ಸೆಗಳು
ಈ ವಿಧದ ರೀತಿಯ ಭೀತಿ ಕಾಯಿಲೆಗಳಿಗೆ ಅದರದ್ದೇ ಆದ ವಿವಿಧ ರೂಪದ ಚಿಕಿತ್ಸಾ ರೂಪವಿರುವುದು. ನಿರ್ದಿಷ್ಟ ಭೀತಿಯ ಕಾಯಿಲೆಯಲ್ಲಿ ಒಡ್ಡುವಿಕೆಯ ಚಿಕಿತ್ಸೆಗೆ(exposure therapy) ಬಹಳ ಒತ್ತನ್ನು ಕೊಡಲಾಗುವುದು.
ಸಣ್ಣ ಕ್ರಿಮಿ-ಕೀಟ, ಪ್ರಾಣಿಗಳ ಭೀತಿಯಿದ್ದಲ್ಲಿ, ಮುಚ್ಚಿದ ಕೊಠಡಿಯ ಭೀತಿಯಿದ್ದಲ್ಲಿ, ಈ ಒಡ್ಡುವಿಕೆಯ ಚಿಕಿತ್ಸೆಯು ಬಹಳ ಪರಿಣಾಮಕಾರಿಯಾಗಿರುವುದು.
ಈ ಚಿಕಿತ್ಸೆಯಲ್ಲಿ ಪ್ರಚೋದಕಗಳಿಗೆ ಆಯಾಯ ಘಟನೆಗಳ/ವಸ್ತುಗಳ ಮೇಲೆ ನಿಯಂತ್ರಣವನ್ನು ಒಡ್ಡಲಾಗುವುದು. ಹೀಗೆ ವ್ಯವಸ್ಥಿತ ಪ್ರಚೋದಕಗಳನ್ನು ಅಥವಾ ಘಟನೆಗಳನ್ನು ರೋಗಿಯ ಮುಂದೆ ಒಡ್ಡುವುದರಿಂದ ಅವನಲ್ಲಿರುವ ಭೀತಿಯನ್ನು ಹೊರತೆಗೆಯಲು ಸಹಕರಿಸಲಾಗುವುದು.
ಇತ್ತೀಚೆಗಿನ ಮುಂದುವರಿದ ಚಿಕಿತ್ಸಾ ಕ್ರಮದಲ್ಲಿ ಚಿಕಿತ್ಸಕರು ವಾಸ್ತವವಾದ ಪರಿಸರದಲ್ಲೇ ರೋಗಿಗೆ ಚಿಕಿತ್ಸೆಯನ್ನು ಕೊಡುವಂತಹ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಅಲ್ಲದೇ, ಇದರಿಂದ ಇನ್ನಷ್ಟು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.

ಇನ್ನು ಸಾಮಾಜಿಕ ಭೀತಿಯ ಚಿಕಿತ್ಸೆಯಲ್ಲಿ ವರ್ತನೆಯ ಚಿಕಿತ್ಸೆ(Behaviour therapy) ಮತ್ತು ಅರಿವಿನ-ವರ್ತನೆಯ ಚಿಕಿತ್ಸೆ(Cognitive-behaviour theraphy )ಯನ್ನು ನೀಡಲಾಗುವುದು. ಈ ಚಿಕಿತ್ಸೆಯ ಮುಖ್ಯ ಉದ್ದೇಶ ರೋಗಿಯ ಆಂತರಿಕ ಯೋಚನೆಗಳನ್ನು ಮತ್ತು ತೀವ್ರತರವಾದ ನಂಬಿಕೆಗಳನ್ನು ತಾರ್ಕಿಕವಾಗಿ ಮರುವಿಶ್ಲೇಷಣೆಯನ್ನು ಮಾಡಲು ಪ್ರಯತ್ನ ಪಡುವುದಾಗಿದೆ. ಅಲ್ಲದೇ, ಈ ಪ್ರಕ್ರಿಯೆಯಲ್ಲಿ ಸ್ವಯಂ ಪ್ರಶ್ನಿಸುವಿಕೆಗೆ
ಉದಾ: ಹೆದರಿಕೊಳ್ಳುವುದು ಒಂದು ರೀತಿಯ ದಡ್ಡತನವಲ್ಲವೇ? ಎಂಬಿತ್ಯಾದಿ ಸಕಾರಾತ್ಮಕ ಅಂಶಗಳುಳ್ಳ ಪ್ರಶ್ನೆಗಳನ್ನು ತನಗೆ ತಾನೇ ಹಾಕಿಕೊಂಡು ಅದನ್ನೇ ಹೆದರಿಕೊಳ್ಳುವ ಸಂದರ್ಭದಲ್ಲಿ ಮನಸ್ಸಿನಲ್ಲೇ ಪುನರುಚ್ಛರಿಸುತ್ತಿರುವುದು.

ಇನ್ನು ಕೊನೆಯದಾಗಿ ಬಯಲು ಭೀತಿಯ ಚಿಕಿತ್ಸೆ. ಇದರಲ್ಲೂ ಒಡ್ಡುವಿಕೆಯ ಚಿಕಿತ್ಸೆಯನ್ನು ನೀಡಲಾಗುವುದು. ಆದರೆ ಕೆಲವೊಮ್ಮೆ ಈ ಚಿಕಿತ್ಸೆಯ ಫಲಿತಾಂಶವನ್ನು ಪಡೆಯಲು 4ರಿಂದ 6 ವರ್ಷಗಳವರೆಗಿನ ಕಾಯುವಿಕೆಯ ಅಗತ್ಯವಿರುವುದು.

ಈ ಎಲ್ಲಾ ಚಿಕಿತ್ಸಾ ಕ್ರಮಗಳ ಜೊತೆ ಜೊತೆಗೆ ಖಿನ್ನತೆ ವಿರೋಧಿ ಶಮನಕಾರಿಗಳನ್ನು ನೀಡಿ, ರೋಗಿಯಲ್ಲಿರುವ ಭೀತಿ ಹಾಗೂ ಅದರೊಂದಿಗೆ ಕಾಣಬರುವಂತಹ ಇನ್ನಿತರ ಕಾಯಿಲೆಗಳಿಂದ ಖಿನ್ನತೆ, ಆತಂಕ, ಮದ್ಯ ಮತ್ತು ಮಾದಕ ವ್ಯಸನಗಳಿಗೂ ಔಷಧೋಪಚಾರ, ಆಪ್ತಸಮಾಲೋಚನೆಗಳನ್ನು ಮಾಡಿ ರೋಗಿಯು ಸಹಜ ಜೀವನವನ್ನು ನಡೆಸುವಲ್ಲಿ ಸಹಾಯವಾಗುವುದು.

ವಾಣಿಜ್ಯ ಜಾಹಿರಾತು

3 COMMENTS

 1. Covid-19 ಈ ಕಾಲದಲ್ಲಿ ಅತಿಯಾದ ಭಯ ದಿನೇ ದಿನೇ ಕಾಡುತ್ತಿದೆ.ನಿಮ್ಮ‌ಈ ಲೇಖನ ಓದಿದ ನಂತರ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಳ್ಳಲೇಬೇಕು ಮನೋಭಾವನೆ ಹೆಚ್ಚಾಗಿದೆ. ಧನ್ಯವಾದಗಳು .Shree janya..

 2. Thank you for giving such an amazing information tips to follow we are so grateful appriciated please keep writing …….

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.