ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ಫೇಸ್‍ಬುಕ್, ಕಾರ್ಪೊರೇಟ್ ಕಂಪನಿಯ ಹೆಸರನ್ನು ಬದಲಾವಣೆ ಮಾಡಲಾಗಿದೆ. ಫೇಸ್’ಬುಕ್‍ನ ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಲಾಗಿದೆ ಎಂದು ಫೇಸ್‍ಬುಕ್‍ನ ಸಿಇಒ ಮಾರ್ಕ್ ಜುಕರ್ ಬರ್ಗ್ ಡೆವಲಪರ್ ಗಳ ವಾರ್ಷಿಕ ಸಮ್ಮೇಳನದಲ್ಲಿ ಘೋಷಣೆ ಮಾಡಿದ್ದಾರೆ.
ಫೇಸ್ ಬುಕ್ ಕಾರ್ಪೋರೇಟ್ ಕಂಪೆನಿಯ ಹೆಸರನ್ನು ಬದಲಾವಣೆ ಮಾಡಲಾಗಿದೆ. ಆದರೆ ನಮ್ಮ ಅಪ್ಲಿಕೇಷನ್‍ಗಳು ಹಾಗೂ ಅವರ ಬ್ರ್ಯಾಂಡ್‍ಗಳು ಬದಲಾಗುತ್ತಿಲ್ಲ ಎಂದು ಜುಕರ್ ಬರ್ಗ್ ಮಾಹಿತಿ ನೀಡಿದ್ದಾರೆ.
‘ಮೆಟಾ’ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ. ಸಾಮಾಜಿಕ ವಿಷಯಗಳ ಜತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ ಎಂದು ಮಾರ್ಕ್ ಜುಕರ್ ಬರ್ಗ್ ಹೇಳಿದ್ದಾರೆ. ಫೇಸ್‌ಬುಕ್ ಕಂಪೆನಿಗೆ ‘ಮೆಟಾ’ ಎಂಬ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ’ ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
Announcing @Meta — the Facebook company’s new name. Meta is helping to build the metaverse, a place where we’ll play and connect in 3D. Welcome to the next chapter of social connection. pic.twitter.com/ywSJPLsCoD
— Meta (@Meta) October 28, 2021
ಫೇಸ್‌ಬುಕ್ ತನ್ನ ಸ್ವಂತ ಫೇಸ್‌ಬುಕ್ ಮೆಟಾವರ್ಸ್ ಅನ್ನು ನಿರ್ಮಿಸುವ ಯೋಜನೆಯನ್ನು ಕಳೆದ ತಿಂಗಳು ಬಹಿರಂಗಪಡಿಸಿತ್ತು. ಮೆಟಾವರ್ಸ್ ಪದವನ್ನು ಡಿಜಿಟಲ್ ಜಗತ್ತಿನಲ್ಲಿ ವರ್ಚುವಲ್, ಸಂವಾದಾತ್ಮಕ ಜಾಗವನ್ನು ವಿವರಿಸಲು ಬಳಸಲಾಗುತ್ತದೆ. ಮೆಟಾವರ್ಸ್ ವಾಸ್ತವವಾಗಿ ವರ್ಚುವಲ್ ಜಗತ್ತು, ಅಲ್ಲಿ ಒಬ್ಬ ವ್ಯಕ್ತಿಯು ಭೌತಿಕವಾಗಿ ಇಲ್ಲದಿದ್ದರೂ ಸಹ ಅಸ್ತಿತ್ವದಲ್ಲಿರಬಹುದು. ಇದಕ್ಕಾಗಿ ವರ್ಚುವಲ್ ರಿಯಾಲಿಟಿ ಅನ್ನು ಬಳಸಲಾಗುತ್ತದೆ.
ಮೆಟಾವರ್ಸ್ ಎಂದರೇನು?
ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚ್ಯುವಲ್ ಪ್ರಪಂಚದ ಜನರನ್ನು ಉದ್ದೇಶಿಸಿ ಅಮೆರಿಕದ ಕಾದಂಬರಿಕಾರ ನೀಲ್ ಸ್ಟೆಫನ್ಸನ್ ಅವರು ಮೆಟಾವರ್ಸ್ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದರು.
ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ.