ಲುಸೈಲ್: ಫಿಫಾ ಫುಟ್‌ಬಾಲ್ ಫೈನಲಿನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಕನಸು ಕೊನೆಗೂ ನನಸಾಗಿದೆ.
2018ರ ಚಾಂಪಿಯನ್ ಫ್ರಾನ್ಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿತು. 1986ರ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು. ತಂಡಕ್ಕಿದು 3ನೇ ವಿಶ್ವಕಪ್ ಗೆಲವಾಗಿದ್ದು, ಸತತ 2ನೇ ಬಾರಿ ವಿಶ್ವಕಪ್ ಗೆಲ್ಲುವ ಫ್ರಾನ್ಸ್‌ನ ಕನಸು ಈ ಮೂಲಕ ಭಗ್ನಗೊಂಡಿದೆ.
1978, 1986ರಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. 2014ರಲ್ಲಿ ಜರ್ಮನಿ ವಿರುದ್ಧ ಫೈನಲ್‌ನಲ್ಲಿ ಅರ್ಜೆಂಟೀನಾ ಸೋತಿತ್ತು. ಈಗ 36 ವರ್ಷದ ಬಳಿಕ ಮೂರನೇ ಬಾರಿ ಚಾಂಪಿಯನ್ ಪಟ್ಟವನ್ನು ಅರ್ಜೆಂಟೀನಾ ಅಲಂಕರಿಸಿದೆ.
ಫ್ರಾನ್ಸ್ ವಿರುದ್ಧದ ಪಂದ್ಯ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು. 23ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್ ಮೂಲಕ ಮೊದಲ ಗೋಲು ಹೊಡೆದರು. ಇದರ ಬೆನ್ನಲ್ಲೇ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಹೊಡೆದರು. 80ನೇ ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಪೆನಾಲ್ಟಿ ಮೂಲಕ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿತ್ತು.
ಈ ಫಿಫಾ ವಿಶ್ವಕಪ್‌ನಲ್ಲಿ 8 ಗೋಲು ಬಾರಿಸಿದ ಫ್ರಾನ್ಸ್ ಆಟಗಾರ ಕಿಲಿಯಾನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎಂಬಾಪೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದರಾದರೂ ತಂಡವನ್ನು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಲು ವಿಫಲವಾದರು. ಇನ್ನುಳಿದಂತೆ ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಟ್ ಗೋಲ್ಡನ್ ಗ್ಲೌಸ್ ಪಡೆದುಕೊಂಡರೆ, ಅರ್ಜೆಂಟೀನಾದ 21 ವರ್ಷದ ಎನ್ಜೊ ಫೆರ್ನಾಂಡೆಜ್ ಟೂರ್ನಿಯ ಶ್ರೇಷ್ಠ ಕಿರಿಯ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ವಿಶ್ವಕಪ್ ಗೆದ್ದ ಅರ್ಜೆಂಟೀನಾ ತಂಡ ಬರೋಬ್ಬರಿ 42 ಮಿಲಿಯನ್ ಡಾಲರ್(ಅಂದಾಜು 347 ಕೋಟಿ ರು.) ಬಹುಮಾನದ ಮೊತ್ತ ತನ್ನದಾಗಿಸಿಕೊಂಡರೆ, ರನ್ನರ್-ಅಪ್ ಫ್ರಾನ್ಸ್ 30 ಮಿಲಿಯನ್ ಡಾಲರ್(ಅಂದಾಜು 248 ಕೋಟಿ ರು.) ನಗದು ಬಹುಮಾನ ಪಡೆಯಿತು.