ಮಂಗಳೂರು: ಕಳೆದ ಜುಲೈ 26ರಂದು ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿಕೊಡಲು ಮುಂದಾಗಿದೆ. ಪ್ರವೀಣ್ ಮೃತಪಟ್ಟ ಸಂದರ್ಭದಲ್ಲಿ ಮನೆ ಕಟ್ಟಿಕೊಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಮನೆ ನಿರ್ಮಾಣ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ಪ್ರವೀಣ್ ನಟ್ಟರು ಸ್ವತಃ ಮನೆ ಕಟ್ಟುವ ಕನಸು ಹೊಂದಿದ್ದರು. ಈ ವಿಷಯವನ್ನು ಪ್ರವೀಣ್ ನೆಟ್ಟಾರು ಮೃತಪಟ್ಟ ಸಂದರ್ಭದಲ್ಲಿ ಪತ್ನಿ ತಿಳಿಸಿದ್ದರು. ಈ ವೇಳೆ ಮನೆ ಕಟ್ಟಿ ಕೊಡುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದರು. ಅದರಂತೆ ನಳಿನ್ ಕುಮಾರ್ ಕಟೀಲ್ ಧಾರ್ಮಿಕ ವಿಧಿ ವಿಧಾನದಂತೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಪ್ರವೀಣ್ ಅವರ ಹಳೆಯ ,ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ 2,700 ಚದರ ಅಡಿಯ ಮನೆ ನಿರ್ಮಾಣ ಆಗಲಿದ್ದು, ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಮನೆಯನ್ನು ಪೂರ್ಣ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪ್ರವೀಣ್ ಅವರ ತಂದೆ, ತಾಯಿ, ಪತ್ನಿ ಸೇರಿದಂತೆ ಸಾಕಷ್ಟು ಮಂದಿ ಉಪಸ್ಥಿತರಿದ್ದರು. ಇದೇ ಪ್ರವೀಣ್ ಸಮಾಧಿಗೆ ನಮನ ಸಲ್ಲಿಸಲಾಯಿತು.