ಕತಾರ್: ತೀವ್ರ ಕುತೂಹಲ ಕೆರಳಿಸಿದ್ದ 2022ರ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊರಾಕೊ ವಿರುದ್ಧ 2-0 ಅಂತರದಲ್ಲಿ ಗೆಲುವು ಪಡೆದ ಫ್ರಾನ್ಸ್, ಸತತ ಎರಡನೇ ಬಾರಿ ಮಹತ್ವದ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಡಿಸೆಂಬರ್ 18 ರಂದು ಭಾನುವಾರ ಪ್ರಶಸ್ತಿಗಾಗಿ ನಡೆಯುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್ ತಂಡಗಳು ಮುಖಾಮುಖಿಯಾಗಿ ಸೆಣೆಸಾಡಲಿವೆ.
2002ರ ಬ್ರೆಜಿಲ್ ತಂಡದ ಬಳಿಕ ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ ತಂಡದೊಂದು ಸತತ ಎರಡನೇ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಕೀರ್ತಿಗೆ ಫ್ರಾನ್ಸ್ ಭಾಜನವಾಗಿದೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಬ್ರೆಜಿಲ್(1962) ಹಾಗೂ ಇಟಲಿ(1938) ತಂಡಗಳ ಬಳಿಕ ಪ್ರಶಸ್ತಿ ಉಳಿಸಿಕೊಂಡ ಮೂರನೇ ತಂಡ ಎಂಬ ಸಾಧನೆಗೆ ಫ್ರಾನ್ಸ್ ಪಡೆಯಲಿದೆ.
ಫಿಫಾ ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಪ್ರಾನ್ಸ್ ಅದ್ಭುತ ಪ್ರದರ್ಶನ ತೋರಿತ್ತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿಯೂ ಉತ್ತಮ ಆಟವನ್ನು ಪ್ರದರ್ಶಿಸಿತು. ಪಂದ್ಯದ ಆರಂಭಿಕ 5ನೇ ನಿಮಿಷದಲ್ಲಿಯೇ ಫ್ರಾನ್ಸ್ ತಂಡದ ಖಾತೆಯನ್ನು ಥಿಯೊ ಹೆರ್ನಾಂಡ್ಜ್ ತೆರೆದರು. ಇದರ ಹೊರತಾಗಿಯೂ ಪಂದ್ಯದಲ್ಲಿ ಶೇ.60 ರಷ್ಟು ಚೆಂಡಿನ ಮೇಲೆ ನಿಯಂತ್ರಣವನ್ನು ಮೊರಾಕೊ ಸಾಧಿಸಿದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಪಂದ್ಯದ ಕೊನೆಯ 79ನೇ ನಿಮಿಷದಲ್ಲಿ ಹೆಚ್ಚುವರಿ ಆಟಗಾರ ರಾಂಡಲ್ ಕೊಲೊ ಗಳಿಸಿದ ಮೌಲ್ಯಯುತ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಗೆಲುವಿನ ನಗೆ ಬೀರಿತು.
ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ಆಫ್ರಿಕಾ ಖಂಡದ ತಂಡ ಎಂಬ ಕೀರ್ತಿಗೆ ಭಾಜನವಾಗಿದ್ದ ಮೊರಾಕೊ, ಸೆಮಿಫೈನಲ್ ಪಂದ್ಯದಲ್ಲಿ ನಿರಾಶೆ ಅನುಭವಿಸಿತು. ಇದೀಗ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ಮೊರಾಕೊ ತಂಡ ಶನಿವಾರ ಕ್ರೊಯೆಷ್ಯಾ ವಿರುದ್ಧ ಸೆಣಸಲಿದೆ. ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕ್ರೊಯೇಷ್ಯಾ ಸೋಲು ಅನುಭವಿಸಿತ್ತು.