ವಾಣಿಜ್ಯ ಜಾಹಿರಾತು
ಉತ್ತರಪ್ರದೇಶ: ಕಾನ್ಪುರದಲ್ಲಿ ೮ ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿಶೀಟರ್ ವಿಕಾಸ್ ದುಬೆಯನ್ನು ಇಂದು ಬೆಳಿಗ್ಗೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆಯನ್ನ ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೇ ಉತ್ತರ ಪ್ರದೇಶದ ಎಸ್‌ ಟಿಎಫ್ ಪಡೆ ಕಾನ್ಪುರ ತಲುಪುತ್ತಿದ್ದಂತೆ, ಎಸ್ ಟಿಎಫ್ ಪಡೆಯ ವಾಹನವೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆರೋಪಿಯನ್ನು ಹಿಡಿಯಲು ಸಾಧ್ಯವಾಗದ ಪೊಲೀಸರು ಎನ್ ಕೌಂಟರ್ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. 
ಘಟನೆಯ ಹಿನ್ನೆಲೆ
ವಿಕಾಸ್ ದುಬೆ ಉತ್ತರಪ್ರದೇಶದ ಕಾನ್ಪುರ ಸಮೀಪ ಬಿಕ್ರು ಗ್ರಾಮದಲ್ಲಿ ಸುಮಾರು 60 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಆದರೇ ಅಂದು ವಿಕಾಸ್ ದುಬೆ ಹಾಗೂ ಆತನ ಸಹಚರರು ಅಡಗುತಾಣದ ರೂಫ್  ಟಾಪ್ ನಿಂದ ಗುಂಡಿನ ದಾಳಿ ನಡೆಸಿ ಡಿಎಸ್ ಪಿ  ಸೇರಿದಂತೆ 8 ಪೊಲೀಸರನ್ನು ಹತ್ಯೆ ಮಾಡಿದ್ದರು. ಘಟನೆಯ ನಂತರ ವಿಕಾಸ್ ದುಬೆ ಪರಾರಿಯಾಗಿದ್ದ. ಪ್ರಕರಣ ಕೈಗೆತ್ತಿಕೊಂಡ ಉತ್ತರ ಪ್ರದೇಶ ವಿಶೇಷ ಪೊಲೀಸ್ ಪಡೆ ವಿಕಾಸ್ ದುಬೆಯ ಐವರು ಸಹಚರರನ್ನು ಎನ್ ಕೌಂಟರ್ ಮಾಡಿತ್ತು, ತಪ್ಪಿಸಿಕೊಂಡಿದ್ದ ವಿಕಾಸ್ ದುಬೆ ಗುರುವಾರ (9-7-2020) ರಂದು ಉಜ್ಜೈನಿಯಲ್ಲಿ ಬಂಧಿತನಾಗಿದ್ದ. ಇಂದು ಕಾನ್ಪುರಕ್ಕೆ ತೆರಳುತ್ತಿದ್ದಾಗ ಎಸ್ ಟಿಎಫ್ ವಾಹನ ಮಗುಚಿ ಬಿತ್ತು. ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಎನ್ ಕೌಂಟರ್ ಮೂಲಕ ಆತನನ್ನು ಹೊಡೆದುರುಳಿಸಿದ್ದಾರೆ.
ಆದರೆ ವಿಕಾಸ್ ದುಬೆಯ ಎನ್ ಕೌಂಟರ್ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ. ಹಾಗಾಗಿ ತನಿಖೆಯ ಬಳಿಕವೇ ನಿಖರ ಮಾಹಿತಿ ಲಭಿಸಬೇಕಾಗಿದೆ.
ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.