ಉಪ್ಪಿನಂಗಡಿ: ಮನೆಗೆ ಬೀಗ ಹಾಕಿ ಹೋಗಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣಗಳು ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಕಡಬ ತಾಲ್ಲೂಕು ಗೋಳಿತ್ತೊಟ್ಟು ಗ್ರಾಮದ ಕಲಾಯಿಲ್ ಎಂಬಲ್ಲಿ ನಡೆದಿದೆ.
ಫಾ. ಜಿಜನ್ ಅಬ್ರಹಾಂ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದು ಮನೆಯಲ್ಲಿದ್ದ ಟಿ.ವಿ., ರಿಮೋಟ್, ಅಡುಗೆ ಅನಿಲ ಸಿಲಿಂಡರ್, ಸ್ಟೌಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ.
’ಫಾ. ಜಿಜನ್ ಮಾವ ಸ್ಕರಿಯಾ ಜೊತೆಯಲ್ಲಿ ವಾಸವಿದ್ದರು. ಅನಾರೋಗ್ಯ ಪೀಡಿತ ಮಾವನನ್ನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಳರೋಗಿಯಾಗಿ ಗುರುವಾರ ದಾಖಲು ಮಾಡಿದ್ದರು. ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳನ್ನು ಕೊಣಾಲು ಗ್ರಾಮದ ಆರ್ಲ ಮನೆಯಲ್ಲಿ ಬಿಟ್ಟು ಬಂದಿದ್ದರು. ಮಾವನ ಆರೈಕೆಗಾಗಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿದ್ದರು. ಶನಿವಾರ ಮನೆಗೆ ವಾಪಸ್ ಆಗಿ ನೋಡಿದಾಗ ಮುಂಬಾಗಿಲು ಅರ್ಧ ತೆರೆದಿದ್ದು, ಮನೆಯೊಳಗಿದ್ದ ಕಬ್ಬಿಣದ ಕಪಾಟುಗಳ ಬಾಗಿಲುಗಳು ತೆರೆದಿದ್ದವು. ಕಪಾಟಿನಲ್ಲಿದ್ದ ಬಟ್ಟೆ ಬರೆಗಳು ಹಾಗೂ ಸೊತ್ತುಗಳು ಚೆಲ್ಲಾಪಿಲ್ಲಿಯಾದ್ದವು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
’ಮನೆಯಲ್ಲಿದ್ದ ಚಿನ್ನದ ನಾಲ್ಕು ಸರಗಳು, ಎರಡು ಬಳೆಗಳು, 10 ಜೊತೆ ಕಿವಿ ಓಲೆಗಳು, ಎರಡು ಉಂಗುರ, ಒಂದು ನೆಕ್ಲೇಸ್, ಎರಡು ಬ್ರಾಸ್ಲೆಟ್ ಸೇರಿದಂತೆ, ಒಟ್ಟು 186 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ. ಇದರ ಅಂದಾಜು ಮೌಲ್ಯ ₹ 4.65 ಲಕ್ಷ ಎಂದು ಅಂದಾಜಿಸಲಾಗಿದೆ.
ಮನೆಯ ಹಾಲ್‌ನಲ್ಲಿದ್ದ 52 ಇಂಚಿನ ಟಿ.ವಿ ಮತ್ತು ರಿಮೋಟ್, ಹೆಡ್ ಫೋನ್ ಸೆಟ್, ಅಡುಗೆ ಕೋಣೆಯಲ್ಲಿದ್ದ ಎಚ್.ಪಿ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌ ಕಪಾಟಿನಲ್ಲಿರಿಸಿದ್ದ % 50 ಸಾವಿರ ನಗದು ಕೂಡ ಕಳವಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ₹ 5.87 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.