ಭಾರತೀಯ ಟೆಲಿಕಾಂ ಆಪರೇಟರ್ ಏರ್‌ಟೆಲ್‌ನಲ್ಲಿ ಡಿಜಿಟಲ್ ಕೊಡುಗೆಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಗೂಗಲ್ 1 ಬಿಲಿಯನ್ ಡಾಲರ್ ( ಸುಮಾರು ರೂ. 7,510 ಕೋಟಿ) ವರೆಗೆ ಹೂಡಿಕೆ ಮಾಡಲು ನಿರ್ಧರಿಸಿದೆ. 300 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್‌ನಲ್ಲಿ 1.28% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು 700 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಗೂಗಲ್ ಹೇಳಿದೆ ಹಾಗೂ ವಾಣಿಜ್ಯ ಒಪ್ಪಂದಗಳಿಗಾಗಿ 300 ಮಿಲಿಯನ್ ಡಾಲರ್ ಗೂ ಹೆಚ್ಚಿನ ಹಣ ಹೂಡಿಕೆ ಮಾಡುವುದಾಗಿ ತಿಳಿಸಿದೆ.
ಏರ್‌ಟೆಲ್‌ನಲ್ಲಿ 700 ಮಿಲಿಯನ್ ಡಾಲರ್ (ಸುಮಾರು ರೂ. 5,255 ಕೋಟಿ) ಇಕ್ವಿಟಿ ಹೂಡಿಕೆಯನ್ನು ರೂ. ಪ್ರತಿ ಷೇರಿಗೆ 734ರಂತೆ ಮತ್ತು 300 ಮಿಲಿಯನ್ ಡಾಲರ್ (ಸುಮಾರು ರೂ. 2,250 ಕೋಟಿ) ವಾಣಿಜ್ಯ ಒಪ್ಪಂದಗಳನ್ನು ಜಾರಿಗೆ ತರಲು ಹೂಡಿಕೆ ಮಾಡಲಿದೆ.
ನವೀನ ಮತ್ತು ಕೈಗೆಟುಕುವ ಕಾರ್ಯಕ್ರಮಗಳ ಮೂಲಕ ಗ್ರಾಹಕರಿಗೆ ಏರ್‌ಟೆಲ್‌ನ ವ್ಯಾಪಕ ಕೊಡುಗೆಗಳನ್ನು ಒದಗಿಸಲು ತಾವು ಕೆಲಸ ಮಾಡುವುದಾಗಿ ಎರಡು ಸಂಸ್ಥೆಗಳು ಹೇಳಿವೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್ ಮತ್ತು ಆಲ್ಫಾಬೆಟ್‌ನ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ , ‘ ಏರ್‌ಟೆಲ್ ಭಾರತದ ಡಿಜಿಟಲ್ ಭವಿಷ್ಯವನ್ನು ರೂಪಿಸುವ ಪ್ರಮುಖ ಪ್ರವರ್ತಕವಾಗಿದೆ. ಸಂಪರ್ಕವನ್ನು ವಿಸ್ತರಿಸುವ ಮತ್ತು ಹೆಚ್ಚಿನ ಭಾರತೀಯರಿಗೆ ಸಮಾನವಾಗಿ ಇಂಟರ್ನೆಟ್ ಸೌಲಭ್ಯ ಒದಗಿಸುವ ದೃಷ್ಟಿಯಲ್ಲಿ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.
‘ಏರ್‌ಟೆಲ್ ಮತ್ತು ಗೂಗಲ್ ನವೀನ ಉತ್ಪನ್ನಗಳ ಮೂಲಕ ಭಾರತದ ಡಿಜಿಟಲ್ ಲಾಭಾಂಶವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ, ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಆಳ ಮತ್ತು ಅಗಲವನ್ನು ಹೆಚ್ಚಿಸಲು ಗೂಗಲ್ ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
— Bharti Airtel (@airtelnews) January 28, 2022
ಈಕ್ವಿಟಿ ಡೀಲ್‌ಗಳು ಮತ್ತು ಟೈ-ಅಪ್‌ಗಳ ಮೂಲಕ ಐದರಿಂದ ಏಳು ವರ್ಷಗಳಲ್ಲಿ ತನ್ನ ಡಿಜಿಟಲೀಕರಣ ನಿಧಿಯ ಮೂಲಕ ಭಾರತದಲ್ಲಿ $10 ಶತಕೋಟಿ (ಸುಮಾರು ರೂ. 75,060 ಕೋಟಿ) ಹೂಡಿಕೆ ಮಾಡುವ ಬಗ್ಗೆ ಗೂಗಲ್ ಎರಡು ವರ್ಷಗಳ ಹಿಂದೆಯೇ ಘೋಷಿಸಿತ್ತು.