ಮಂಗಳೂರು: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ಸಿಗಬೇಕು ಎಂದು ಜಿಲ್ಲೆಯ ಬಿಜೆಪಿ ಶಾಸಕರು ವಿರೋಧ ಪಕ್ಷದಲ್ಲಿದ್ದಾಗ ಒತ್ತಾಯಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದಿದ್ದರು, ತುಳುವಿನ್ನು ಎರಡನೇ ಅದಿಕೃತ ಭಾಷೆಯನ್ನಾಗಿ ಮಾನ್ಯತೆ ನೀಡಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ಈ ಕುರಿತು ಅಧ್ಯಯನ ಸಮಿತಿ ರಚಿಸಿದ್ದು, ತುಳುನಾಡಿನ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಿದು’ ಎಂದರು.
ತುಳುವಿಗೆ ಪ್ರತ್ಯೇಕ ಅಕಾಡೆಮಿ ಇದ್ದು, ತುಳುವಿನಲ್ಲಿ ಸಾಕಷ್ಟು ಸಾಹಿತ್ಯವೂ ರಚನೆಯಾಗಿದೆ. ಅನೇಕ ಸಾಹಿತಿಗಳೂ ತುಳು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತುಳು ಯಕ್ಷಗಾನಗಳಿವೆ. ಇಷ್ಟೆಲ್ಲಾ ಇರುವಾಗ ಪ್ರತ್ಯೇಕ ಅಧ್ಯಯನ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ ಎಂದರು.
ತುಳುನಾಡಿನವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಈ ಬಗ್ಗೆ ಸರ್ಕಾರ ಇನ್ನೂ ಖಚಿತವಾದ ತೀರ್ಮಾನ ಕೈಗೊಳ್ಳದೇ ಇರುವುದು ತುಳುವರಿಗೆ ಮಾಡಿರುವ ಮೋಸ’ ಎಂದು ಆರೋಪಿಸಿದರು. ತುಳುವಿಗೆ ನಿಜಕ್ಕೂ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೇರವಾಗಿ ಘೋಷಣೆ ಮಾಡಲು ಇರುವ ಸಮಸ್ಯೆಯಾದರೂ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸುಖಾಸುಮ್ಮನೆ ಜನರಲ್ಲಿ ಗೊಂದಲ ಮೂಡಿಸಬಾರದು. ಬಿಜೆಪಿ ನೇತೃತ್ವದ ಸರ್ಕಾರ ಈ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸದಿದ್ದರೆ, ಕಾಂಗ್ರೆಸ್ ಸರ್ಕಾರ ಬಂದಾಗ ಈ ತೀರ್ಮಾನ ಕೈಗೊಳ್ಳಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಉಮರ್ ಫಾರೂಕ್, ಬದ್ರುದ್ದೀನ್, ಮುಸ್ತಫಾ, ಜಬ್ಬಾರ್, ಅಬ್ದುಲ್ ಖಾದರ್ ಹಾಜರಿದ್ದರು.