ಮಂಗಳೂರು: ‘ಅಬ್ಬಕ್ಕ ಉತ್ಸವಕ್ಕೆ ಈ ವರ್ಷ ಸರ್ಕಾರ ಕೇವಲ ₹ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಇದು ದೇಶಕ್ಕಾಗಿ ಹೋರಾಟ ಮಾಡಿದ ವೀರರಾಣಿಗೆ ಸರ್ಕಾರ ಮಾಡಿರುವ ಅವಮಾನ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2008ರಲ್ಲಿ ಆರಂಭವಾದ ಅಬ್ಬಕ್ಕ ಉತ್ಸವಕ್ಕೆ ಸರ್ಕಾರ ₹ 25 ಲಕ್ಷ ಅನುದಾನ ನೀಡಿತ್ತು. ಬಳಿಕ ಪ್ರತಿ ವರ್ಷವೂ ಅನುದಾನವನ್ನು ₹ 5 ಲಕ್ಷದಷ್ಟು ಹೆಚ್ಚಳ ಮಾಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಕೇವಲ ₹ 10 ಲಕ್ಷ ಅನುದಾನ ನೀಡಿದ್ದು, ಸರ್ಕಾರದ ದಾರಿದ್ರ್ಯವನ್ನು ಎತ್ತಿತೋರಿಸುತ್ತಿದೆ’ ಎಂದು ತಿಳಿಸಿದರು.
‘ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಅಗತ್ಯ ಸೇವೆಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆಸ್ಪತ್ರೆಗೆ 108 ಆಂಬುಲೆನ್ಸ್ 20 ನಿಮಿಷದ ಒಳಗೆ ತಲುಪುವಂತಾಗಬೇಕು ಎಂದು 800 ವಾಹನ ಒದಗಿಸಿದ್ದೆವು. ಆಂಬುಲೆನ್ಸ್ ತಲುಪಲು 20 ನಿಮಿಷಕ್ಕಿಂತ ಸ್ವಲ್ಪ ತಡವಾದರೂ ವಿವರಣೆ ಕೇಳುತ್ತಿದ್ದೆವು. ಈಗ ಅಂಬುಲೆನ್ಸ್‌ಗೆ ಕರೆ ಮಾಡಿ ಗಂಟೆಗಟ್ಟಲೆ ಕಾಯಬೇಕು. ಜನ 108ಕ್ಕೆ ಕರೆ ಮಾಡುವುದನ್ನೇ ಮರೆತೇ ಬಿಟ್ಟಿದ್ದಾರೆ. ಹೊಸ ಆಂಬುಲೆನ್ಸ್ ಖರೀದಿ ಇಲ್ಲವೇ ಇಲ್ಲ. ಇದ್ದ ಆಂಬುಲೆನ್ಸ್‌ಗೆ ಚಾಲಕರೇ ಇಲ್ಲ’ ಎಂದರು.
‘ಕೆಎಸ್‍ಆರ್‌ಟಿಸಿಯು ರಾಜ್ಯದಲ್ಲಿ ಹೊಸ ಬಸ್ ಒದಗಿಸುವುದಿರಲಿ, ಇರುವ ಬಸ್‌ಗಳಿಗೆ ಚಾಲಕರ ಕೊರತೆ ಎದುರಾಗಿದೆ. ಕರಾವಳಿ ಜನರಿಗೆ ಪಡಿತರ ವಿತರಣೆಯಲ್ಲಿ ಕುಚಲಕ್ಕಿ ನೀಡುವ ಭರವಸೆಯನ್ನು ಈಡೇರಿಸುವುದಕ್ಕೂ ಈ ಸರ್ಕಾರದಿಂದ ಆಗಿಲ್ಲ’ ಎಂದು ಆರೋಪಿಸಿದರು.