ವಾಣಿಜ್ಯ ಜಾಹಿರಾತು

ಸುಳ್ಯಪದವು: ಸರಕಾರಿ ದಾಖಲೆ, ಸೌಲಭ್ಯಗಳಿಗಾಗಿ ಜನರನ್ನು ಅಲೆದಾಡುವಂತೆ ಮಾಡಬಾರದು. ಸರಿಯಾದ ಸಮಯಕ್ಕೆ ಅರ್ಹರಿಗೆ ದಾಖಲೆ ಮತ್ತು ಸೌಲಭ್ಯಗಳನ್ನು ತಲುಪಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಬಡಗನ್ನೂರು ಗ್ರಾ.ಪಂ. ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತಾನಾಡಿದರು.

94ಸಿ, 94ಸಿಸಿ ಸಮರ್ಪಕವಾಗಿ, ಕಾನೂನು ಬದ್ಧವಾಗಿರುವ ಬಹುತೇಕ ಕಡತಗಳು ವಿಲೇವಾರಿ ಆಗಿದೆ. ವಿಲೇವಾರಿ ಮಾಡಲು ಅವಕಾಶ ಇರುವ ಎಲ್ಲಾ ಕಡತಗಳು ಕೂಡಲೇ ವಿಲೇವಾರಿ ಮಾಡಬೇಕು. ಕಾನೂನುಬದ್ಧವಾಗಿ ಇದ್ದ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಬೇಕು ಎಂದ ಅವರು ಅಕ್ರಮ ಸಕ್ರಮ, 94 ಸಿ ಹಕ್ಕು ಪತ್ರ ನೀಡಿದ ಮೇಲೆ ಆರ್‌ಟಿಸಿ ಮತ್ತು 9/11ನಲ್ಲಿ ದಾಖಲಾತಿ ಮಾಡಬೇಕು.ಮತ್ತೆ ಜನರನ್ನು ಅಲೆದಾಡುವಂತೆ ಮಾಡಬಾರದು ಎಂದು ಸೂಚಿಸಿದರು.

ಒಂದೊಂದು ಭಾಗದ ಎಲ್ಲಾ ಅಕ್ರಮ ಸಕ್ರಮ ಕಡತಗಳನ್ನು ತಯಾರಿಸಿ ಪಂಚಾಯತ್‌ನಲ್ಲಿ ಪ್ರಚುರಪಡಿಸಬೇಕು. ಆಕ್ಷೇಪಣೆ ಇದ್ದರೆ ಅದನ್ನು ಅಕ್ರಮ ಸಕ್ರಮ ಸಮಿತಿಯ ಮುಂದೆ ಇಟ್ಟು ಅಲ್ಲಿ ವಿಲೇವಾರಿ ಆಗಬೇಕು. ಅದಕ್ಕೆ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿ ಖಡಕ್ ಆದೇಶ ನೀಡಿದರು. ಒಂದು ತಿಂಗಳಲ್ಲಿ ಎಲ್ಲಾ ಅಕ್ರಮ ಸಕ್ರಮ ಅರ್ಜಿಗಳ ಕಡತಗಳನ್ನು ತಯಾರು ಮಾಡಿ ಸಮಿತಿಯ ಮುಂದೆ ಕಡ್ಡಾಯವಾಗಿ ಇಡಬೇಕು ಎಂದು ಅವರು ಹೇಳಿದರು.

ಅರಣ್ಯದ ಮೂಲಕ ಹಾದು ಹೋಗುವ ಈಗಾಗಲೇ ಇರುವ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಜಿಲ್ಲಾಧಿಕಾರಿ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದರು. ಕಿಂಡಿ ಅಣೆಕಟ್ಟುಗಳ ಕಸ, ಮರ ಇದ್ದರೆ ಅದನ್ನು ತೆರವು ಮಾಡಲು ಕ್ರಿಯಾ ಯೋಜನೆ ರೂಪಿಸಲು ಕ್ರಮ ಮಾಡಲು ಸೂಚನೆ ನೀಡಲಾಯಿತು.
ಬಡಗನ್ನೂರು ಪಟ್ಟೆ ಎಂಬಲ್ಲಿ ವೆಂಟೆಡ್ ಡ್ಯಾಂ ನಿರ್ವಹಣೆಯ ಬಗ್ಗೆ ಚರ್ಚೆ ನಡೆದು ವೆಂಟೆಡ್ ಡ್ಯಾಂ ನಿರ್ವಹಣೆಗೆ ಸ್ಥಳಿಯರು ಮತ್ತು ಗ್ರಾಮ ಪಂಚಾಯತ್ ಸೇರಿ ಕ್ರಿಯಾ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾಮದ ಕಚ್ಚಾ ರಸ್ತೆಗಳ ಅಭಿವೃದ್ಧಿ ಬಗ್ಗೆ ಒಂದು ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ಶಾಸಕರಿಗೆ ಸಲ್ಲಿಸಿ ಅನುದಾನದ ಲಭ್ಯತೆಗೆ ಅನುಸಾರವಾಗಿ ಅನುದಾನ ನೀಡಲಾಗುವುದು.

ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕರ್ನಾಟಕದಲ್ಲಿ ಅಧ್ಯಯನ ಮಾಡುತ್ತಿರುವ ಕೇರಳದ ಭಾಗದ ಗಡಿಗ್ರಾಮದ ಎಸ್‌ಸಿ ಎಸ್‌ಟಿ ಮಕ್ಕಳಿಗೆ ಕರ್ನಾಟಕದಲ್ಲಿ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂಬ ಬಗ್ಗೆ ಚರ್ಚೆ ನಡೆಯಿತು‌. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. ಮುಗುಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಕೂಡಲೇ ಕ್ರಮಕ್ಕೆ ಸೂಚಿಸಲಾಯಿತು. ಕಲ್ಲುಗುಡ್ಡೆ, ಕರ್ಪುಡಿಕಾನ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುತಿದೆ ಎಂದು ಸಾರ್ವಜನಿಕರು ದೂರಿದರು. ಈ ಕುರಿತು ಪತಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಶಾಸಕ‌ ಸಂಜೀವ ಮಠಂದೂರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ಪುತ್ತೂರು ಡಿವೈಎಸ್‌ಪಿ ಗಾನಾ ಪಿ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ, ತಹಶೀಲ್ದಾರ್ ಟಿ. ರಮೇಶ್ ಬಾಬು, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.