ವಾಣಿಜ್ಯ ಜಾಹಿರಾತು

ಮಂಗಳೂರು: ಎನ್‌ಇಪಿ ಪದವಿ ಫಲಿತಾಂಶದಲ್ಲಿ ಎದುರಾದ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಸೆಮಿಸ್ಟರ್‌ನ ಉತ್ತರ ಪತ್ರಿಕೆಯನ್ನು “ಡಿಜಿಟಲ್‌ ಮೌಲ್ಯಮಾಪನ’ ಮಾಡಲು ಮಂಗಳೂರು ವಿಶ್ವವಿದ್ಯಾನಿಲಯ ಮಹತ್ವದ ತೀರ್ಮಾನ ಕೈಗೊಂಡಿದೆ.

ಫೆಬ್ರವರಿಯಲ್ಲಿ ನಡೆಯುವ ಪರೀಕ್ಷೆಯನ್ನು ಹೊರತುಪಡಿಸಿ, ಮೇಯಲ್ಲಿ ನಡೆಯುವ ಪರೀಕ್ಷೆಯ ಉತ್ತರಪತ್ರಿಕೆಗಳು ಡಿಜಿಟಲ್ ಸ್ವರೂಪದಲ್ಲಿಯೇ ಮೌಲ್ಯ ಮಾಪನ ಮಾಡಲು ವಿಶ್ವ ವಿದ್ಯಾನಿಲಯ ತೀರ್ಮಾನಿಸಿದೆ.

ಮೈಸೂರು ಹಾಗೂ ಕುವೆಂಪು ವಿಶ್ವ ವಿದ್ಯಾನಿಲಯಗಳಲ್ಲಿ ಈಗಾಗಲೇ ಡಿಜಿಟಲ್‌ ಮೌಲ್ಯಮಾಪನವನ್ನು ಜಾರಿಯಲ್ಲಿದೆ. ಇದೀಗ ಮಂಗಳೂರು ವಿವಿಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ. ಪರೀಕ್ಷೆ ನಡೆದ ಬಳಿಕ ವಿವಿಗೆ ಬರುವ ಎಲ್ಲ ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್ ಮಾಡಿ ಯುಯು ಸಿಎಂ ಎಸ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

ಮೌಲ್ಯ ಮಾಪನ ಮಾಡುವವರ ಮ್ಯಾಪಿಂಗ್ ಮಾಡಲಾಗುತ್ತದೆ. ಅದರ ಆಧಾರದಲ್ಲಿ ಅವರಿಗೆ “ಕೋಡ್‌’ ಹಾಗೂ “ರಿಮೋಟ್‌ ಆಯಕ್ಸೆಸ್‌’ ನೀಡಲಾಗುತ್ತದೆ. ಹೀಗಾಗಿ ಸಂಬಂಧ ಪಟ್ಟ ಪ್ರಾಧ್ಯಾಪಕರು ಆಯಾಯ ಕಾಲೇಜಿನಲ್ಲಿಯೇ ಮೌಲ್ಯ ಮಾಪನ ಮಾಡಲು ಸಾಧ್ಯವಾಗುತ್ತದೆ.

ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಡಿಜಿಟಲ್‌ ಮಾದರಿಯಲ್ಲಿ ಮಾಡುವಾಗ ಅತ್ಯುನ್ನತ ತಂತ್ರಜ್ಞಾನದ ಸಾಫ್ಟ್ವೇರ್‌ ಸಹಾಯದಿಂದ ನಡೆಸಲು ಚಿಂತನೆ ನಡೆಸಲಾಗಿದೆ. ಇದರಂತೆ ಉಪನ್ಯಾಸಕರ ಮನೆಯ ಕಂಪ್ಯೂಟರ್‌/ಲ್ಯಾಪ್‌ಟಾಪ್‌ ಗಳಲ್ಲಿ “ಫೇಸ್‌ ರೆಕಗ್ನಿಷನ್‌’ ಸಾಫ್ಟ್‌ವೇರ್‌ ಹಾಕಿ ಉತ್ತರಪತ್ರಿಕೆಯನ್ನು ಮನೆಯಲ್ಲಿಯೇ ಮೌಲ್ಯಮಾಪನ ಮಾಡುವಾಗ ಎಲ್ಲ ಅಪ್‌ಡೇಟ್‌ಗಳು ಕೇಂದ್ರ ಕಚೇರಿಯಲ್ಲಿ ಸಂಗ್ರಹವಾಗಿರುವಂತೆ ವ್ಯವಸ್ಥೆ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ.

ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರುವ ಸಮಸ್ಯೆಗೆ ಪರಿಹಾರ ಡಿಜಿಟಲ್‌ ಮೌಲ್ಯಮಾಪನದಿಂದ ದೊರೆಯಲಿದೆ. ಜತೆಗೆ ಯುಯುಸಿಎಂಎಸ್‌ ಬಂದ ನಂತರ ಎದುರಾಗಿರುವ “ಕೋಡಿಂಗ್‌’ ಹಾಗೂ “ಡಿಕೋಡಿಂಗ್‌’ ಸಮಸ್ಯೆಗೂ ಈ ಮೂಲಕ ಪರಿಹಾರ ಸಿಗಲಿದೆ. ಯಾಕೆಂದರೆ ಡಿಜಿಟಲ್‌ ಮೌಲ್ಯಮಾಪನದಲ್ಲಿ ಕೋಡಿಂಗ್‌-ಡಿಕೋಡಿಂಗ್‌ ಇರುವುದಿಲ್ಲ. ಆದರೆ ಡಿಜಿಟಲ್‌ ಮೌಲ್ಯಮಾಪನ ಆಗಬೇಕಾದರೆ ಕಾಲೇಜಿನಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಉತ್ತಮವಾಗಿ ಇರಬೇಕು ಹಾಗೂ ಉಪನ್ಯಾಸಕರಿಗೆ ವಿಶೇಷ ತರಬೇತಿಯೂ ಅಗತ್ಯ. ಕಂಪ್ಯೂಟರ್‌ ಹಾಗೂ ಲ್ಯಾಬ್‌ ಸಹಿತ ವಿವಿಧ ಮೂಲಭೂತ ವ್ಯವಸ್ಥೆಗಳು ಸರಿ ಇರಬೇಕು. ಬಹುಮುಖ್ಯವಾಗಿ ಈಗಾಗಲೇ ತಾಂತ್ರಿಕ ಎಡವಟ್ಟುಗಳಿಗೆ ಕಾರಣವಾಗಿರುವ ಯುಯುಸಿಎಂಎಸ್‌ನಲ್ಲಿ ಮುಂದೆ ತಾಂತ್ರಿಕ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ದೊಡ್ಡ ಸವಾಲು ಇದೆ.

ಪದವಿ ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್‌ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿದ್ದರೂ ವಿವಿಧ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದರೆ ಮುಂಬರುವ ಸೆಮಿಸ್ಟರ್ ನ ಮೌಲ್ಯಮಾಪನವನ್ನು ಡಿಜಿಟಲ್‌ ಸ್ವರೂಪದಲ್ಲಿಯೇ ನಡೆಸಲು ಈಗಾಗಲೇ ಸೂಚನೆ ಬಂದಿದೆ. ಇದರಂತೆ ಸಿದ್ಧತೆ ನಡೆಸಲಾಗುವುದು ಎಂದು ಮಂಗಳೂರು ವಿವಿಯ ಪ್ರೊ. ಪಿ.ಎಲ್‌.ಧರ್ಮ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.