ಮುಂಬೈ :ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ದೇಶದ ಪ್ರಖ್ಯಾತ ಸ್ಟಾಕ್ ಬ್ರೋಕರ್ ಸಂಸ್ಥೆ ‘ಅಪ್ ಸ್ಟಾಕ್ಸ್’ ತಂತ್ರಜ್ಞಾನವನ್ನು ಹ್ಯಾಕರ್ ಗಳು ಭೇದಿಸಿದ್ದಾರೆ ಎಂದು ವರದಿಯಾಗಿದೆ.ಆಧಾರ್ , ಪಾನ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಸೇರಿದಂತೆ ಗ್ರಾಹಕರಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಹ್ಯಾಕರ್ಗಳು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.ಸುಮಾರು 25 ಲಕ್ಷದಷ್ಟು ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹ್ಯಾಕರ್ಗಳು ‘ಅಪ್ ಸ್ಟಾಕ್ಸ್’ ನ ಡೇಟಾಬೇಸ್ ನಿಂದ ಕದ್ದು ತೆಗೆದುಕೊಂಡಿದ್ದಾರೆ ಎಂಬ ವರದಿಗೆ ಪ್ರತಿಕಿಯಿಸಿರುವ ಸಂಸ್ಥೆ,ಅನಾಮಿಕ ವ್ಯಕ್ತಿಗಳು ಕಂಪನಿ ಯ ಡೇಟಾಬೇಸ್ ಸಿಸ್ಟಮ್ಗೆ ಅನುಮತಿಯಿಲ್ಲದೆ ಪ್ರವೇಶಿಸಿರುವುದನ್ನು ಕಂಡು ಕೊಂಡ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದಿದೆ.ಅಷ್ಟೇ ಅಲ್ಲದೆ, ಗ್ರಾಹಕರು ತಮ್ಮ ಷೇರು ಮತ್ತು ಹಣಕಾಸಿನ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಈಡಾಗುವ ಅಗತ್ಯವಿಲ್ಲ.ತಮ್ಮ ಹಣ ಮತ್ತು ಷೇರು, ಷೇರು ಮಾರುಕಟ್ಟೆಯ ನಿಯಂತ್ರಿತ ಸಂಸ್ಥೆಗಳ ಅಧೀನದಲ್ಲಿ ಇರುವುದರಿಂದ ಸುರಕ್ಷಿತವಾಗಿರುತ್ತದೆ ಎಂದು ಕಂಪನಿ ತನ್ನ ಅಂತರ್ಜಾಲದಲ್ಲಿ ಬರೆದುಕೊಂಡಿದೆ.
‘ಅಪ್ ಸ್ಟಾಕ್ಸ್’ ಷೇರುಮಾರುಕಟ್ಟೆಯಲ್ಲಿ ಟ್ರೇಡ್ ಬ್ರೋಕಿಂಗ್ ಕಂಪನಿಯಾಗಿದ್ದು ಹೆಚ್.ಡಿ.ಎಫ್.ಸಿ. , ಐ. ಸಿ.ಐ.ಸಿ ಐ. , ಶೇರ್ ಖಾನ್ , ಏಂಜಲ್ ಬ್ರೋಕಿಂಗ್ , ಝೆರೋಧ ಮೊದಲಾದ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ಫೇಸ್ಬುಕ್ , ಲಿಂಕ್ಡ್ ಇನ್ ನಂತಹ ದೈತ್ಯ ಸಂಸ್ಥೆಗಳೂ ಸೇರಿ ಅನೇಕ ಕಂಪೆನಿಗಳಲ್ಲಿ ಕಳೆದ ಕೆಲವು ವಾರಗಳಿಂದ ಈ ರೀತಿಯ ಗ್ರಾಹಕರ ವಯಕ್ತಿಕ ಮಾಹಿತಿಗಳ ಸೋರಿಕೆಯಂತಹ ಅನೇಕ ಪ್ರಕರಣಗಳು ವರದಿಯಾಗಿದ್ದು ಸರಕಾರ ಈ ಕುರಿತು ಕಠಿಣ ಕಾನೂನುಗಳನ್ನು ತರುವಲ್ಲಿ ಇನ್ನಷ್ಟು ಗಂಭೀರವಾಗಿ ಆಲೋಚಿಸಬೇಕಾಗಿದೆ.