ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆಗೈದವರ ಪಟ್ಟಿಯೇ ನಮ್ಮ ಮುಂದಿದೆ. ಈ ಸಾಧಕರು ನಮ್ಮೆಲ್ಲರ ಹೆಮ್ಮೆ.ತರಗತಿ ಪಠ್ಯ ಮಾತ್ರ ಅಲ್ಲದೆ ಪರಿಣತರಿಂದ ಟ್ಯೂಷನ್ ತೆಗೆದುಕೊಂಡು ದಿನದ ಸಂಪೂರ್ಣ ವೇಳೆಯನ್ನು ಓದಿಗಾಗೇ ವ್ಯಯಿಸಿ ರ್ಯಾಂಕ್ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡವರ ಸಾಧನೆಯ ಶ್ರೇಯಸ್ಸು ಖಂಡಿತ ಅವರಿಗೆ ಮತ್ತು ಅವರ ಪೋಷಕರಿಗೆ ಸಲ್ಲಲೇಬೇಕು.
ಇಲ್ಲೊಬ್ಬ ಸಾಧಕನಿದ್ದಾನೆ , ಹೆಸರು ರಾಕೇಶ್ ಕುಮಾರ್ .ಕೃಷಿಕ ಕುಟುಂಬ. ಕೃಷಿ ಎಂದ ಮೇಲೆ ಕೇಳಬೇಕೆ , ವರ್ಷವಿಡೀ ಕೃಷಿ ಚಟುವಟಿಕೆ ಇದ್ದೆ ಇರುತ್ತದೆ. ಲಿಟಲ್ ಸ್ಟಾರ್ಸ್ ಇಂಡಿಯನ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತಿದ್ದ ಈ ಪ್ರತಿಭಾವಂತ ೧೦ ನೇ ತರಗತಿಯಲ್ಲಿ ಗಳಿಸಿದ್ದು 82%. ಈತನ ಪ್ರತಿಭೆಗೆ ಪುರಸ್ಕಾರವಾಗಿ ಪ್ರತಿಷ್ಠಿತ ಆಳ್ವಾಸ್ ಕಾಲೇಜು ನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಸಿಗುತ್ತದೆ. .ತೋಟದ ಕೆಲಸ, ಹೈನುಗಾರಿಕೆಯಲ್ಲಿ ಅಪ್ಪನಿಗೆ ಜೊತೆ ನೀಡುತ್ತಿದ್ದ ರಾಕೇಶ ಓದನ್ನು ಕೂಡ ಅಷ್ಟೇ ಪ್ರೀತಿಸುತ್ತಿದ್ದ.ಕೃಷಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಓದಿಗಾಗಿಯೇ ಸಮಯ ಮೀಸಲಿಟ್ಟು ಕೇವಲ ತರಗತಿ ಪಾಠಗಳನ್ನು ಕೇಳಿಸಿಕೊಂಡು ಕಾಲೇಜು ಪಾಠ ಮತ್ತು ರಿವಿಷನ್ಸ್ ಹೊರತಾಗಿ ಯಾವುದೇ ಟ್ಯೂಷನ್ ಕ್ಲಾಸಿಗೆ ಹೋಗದೆ ಇವತ್ತು ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 96.83 % ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ.
ಪ್ರಸ್ತುತ CET ಎಕ್ಸಾಮ್ ಗೆ ತಯಾರಿ ನಡೆಸುತ್ತಿರುವ ರಾಕೇಶ , ಇಂಜಿನಿಯರಿಂಗ್ ಮಾಡುವ ಕನಸು ಹೊಂದಿದ್ದಾನೆ. ಹಾಗೆಯೆ ಹೈನುಗಾರಿಕೆ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ ಇದೆಯಂತೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಿಜಾರು ಗ್ರಾಮದ ನಿವಾಸಿ ಮಹಾಬಲ ಶೆಟ್ಟಿ ಮತ್ತು ಮಲ್ಲಿಕಾ ಶೆಟ್ಟಿಯವರ ಸುಪುತ್ರ. ಕೃಷಿ ವಲಯದತ್ತ ಆಸಕ್ತಿ ವಹಿಸಲು ಮೀನಾ ಮೇಷ ಎಣಿಸುತ್ತಿರುವ ಯುವ ಜನತೆಗೆ ರಾಕೇಶ ಮಾದರಿ. ಈತನ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎನ್ನುವ ಹಾರೈಕೆ ನಮ್ಮದು.