ಉಡುಪಿ: ಸಮುದ್ರ ತೀರದಲ್ಲಿ ಆಗಾಗ ಮೀನುಗಳ ರಾಶಿ ಸಿಗುವುದು ಸಾಮಾನ್ಯ. ಅದೇ ರೀತಿ ತೊಟ್ಟಂ ಕಡಲ ತಡಿಯಲ್ಲಿ ರಾಶಿ ರಾಶಿ ಮೀನುಗಳು ಕಂಡುಬಂದಿದ್ದು ಮತ್ಸ್ಯಪ್ರಿಯರಿಗೆ ಸುಗ್ಗಿಯಾಗಿದೆ.
ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ಇಂದು ಮಧ್ಯಾಹ್ನದ ವೇಳೆ ರಾಶಿ ರಾಶಿ ಬೂತಾಯಿ ಮೀನುಗಳು ಸಮುದ್ರದ ಅಲೆಗಳೊಂದಿಗೆ ತೀರಕ್ಕೆ ಬಂದು ಬಿದ್ದಿವೆ. ಮೀನುಗಳು ದಡಕ್ಕೆ ಬಂದು ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮೀನುಗಳನ್ನು ಹಿಡಿಯಲು ಮುಗಿಬಿದ್ದಿದ್ದಾರೆ.
ಸಮುದ್ರದಲ್ಲಿ ಪಶ್ಚಿಮದ ಕಡೆಯಿಂದ ಪೂರ್ವದ ಕಡೆಗೆ ಬೂತಾಯಿ ಮೀನುಗಳ ರಾಶಿ ಪಥ ಬದಲಿಸಿದ್ದರಿಂದ ಅಲೆಗಳೊಂದಿಗೆ ಸಮುದ್ರ ತೀರಕ್ಕೆ ಬಂದು ಬಿದ್ದಿವೆ. ಕಡಲ ದಡದ ಉದ್ದಕ್ಕೂ ಸುಮಾರು 500 ಕೆಜಿ ಗೂ ಹೆಚ್ಚು ಮೀನುಗಳು ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಈ ಹಿಂದೆ ಉಡುಪಿಯ ಬೆಂಗ್ರೆ, ಪಡುಕೆರೆ, ಎರ್ಮಾಳು ಸೇರಿದಂತೆ ಹಲವು ಕಡೆಗಳಲ್ಲಿ ಈ ರೀತಿಯಾಗಿ ಮೀನುಗಳು ರಾಶಿ ರಾಶಿಯಾಗಿ ತೀರಕ್ಕೆ ಬಂದು ಬೀಳುತ್ತಿದ್ದವು. ಈಗ ತೊಟ್ಟಂ ಕಡಲ ತೀರಕ್ಕೆ ದೋಣಿಗಳ ಎಂಜಿನ್ ಶಬ್ದದಿಂದ ಮೀನುಗಳು ಬಂದು ಬಿದ್ದಿರಬಹುದು ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.