ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಆ ನಗು. ನಗು ಸುಂದರವಾಗಿರಬೇಕಾದರೆ ನೀವು ಬಿಳುಪಾದ ಹಲ್ಲುಗಳನ್ನು ಹೊಂದಿರಬೇಕು. ಬಿಳುಪಾದ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಆರೋಗ್ಯಕರ ಹಲ್ಲುಗಳು ಮತ್ತು ಹಲ್ಲನ್ನು ಹೆಚ್ಚು ಬಿಳುಪಾಗಿಸಲು ಇಲ್ಲಿವೆ ಕೆಲವು ಸಲಹೆಗಳು. ಇವುಗಳನ್ನು ನೀವು ಅಳವಡಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ನಿಮ್ಮ ಬಾಯಿ ಸ್ವಚ್ಛತೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಹಲ್ಲುಗಳು, ನಾಲಿಗೆ ಮತ್ತು ಒಸಡನ್ನು ಪ್ರತಿನಿತ್ಯ ಸ್ವಚ್ಛವಾಗಿರುವಂತೆ ಮಾಡುವುದು ಅಗತ್ಯ. ಆಹಾರ ತಿಂದ ಬಳಿಕ ಬಾಯಿ ತೊಳೆಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ ಜತೆಗೆ ಪ್ರತಿನಿತ್ಯ 2 ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಿ.
ಹಲ್ಲನ್ನು ಸ್ವಚ್ಛವಾಗಿರಿಸುವುದರ ಜತೆಗೆ ಹಲ್ಲು ಸದೃಢವಾಗಿರುವುದೂ ಸಹ ಅಷ್ಟೇ ಮುಖ್ಯ. ಕಿತ್ತಳೆ, ನಿಂಬೆಹಣ್ಣಿನಂತಹ ವಿಟಮಿನ್ ಸಿ ಯುಕ್ತ ಹಣ್ಣುಗಳು ಒಸಡುಗಳಿಗೆ ಪೌಷ್ಟಿಕಾಂಶವನ್ನು ನೀಡುತ್ತದೆ. ಜತೆಗೆ ನಿಂಬೆ ಹಣ್ಣಿನಿಂದ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲು ಬಿಳುಪು ಪಡೆಯುತ್ತದೆ.
ನಿಮ್ಮ ಹಲ್ಲುಗಳನ್ನು ಬಿಳುಪಾಗಿಸುವ ಮತ್ತು ಸದೃಢವಾಗಿರುವಂತೆ ಮಾಡುವ ಹಣ್ಣುಗಳು
ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣುಗಳಲ್ಲಿ ಮಲಿಕ್ ಆಸಿಡ್ ಕಂಡು ಬರುತ್ತದೆ. ಇದು ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿ ಹಣ್ಣುಗಳನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಉಜ್ಜುವ ಮೂಲಕ ಹಲ್ಲುಗಳನ್ನು ಬಿಳುಪಾಗಿಸಬಹುದಾಗಿದೆ.
ಬಾಳೆಹಣ್ಣು
ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಬಾಳೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಂ, ಮೆಗ್ನೀಶಿಯಂ ಮತ್ತು ಮ್ಯಾಂಗನೀಸ್ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಜ್ಜುವ ಮೂಲಕ ಹಲ್ಲುಗಲನ್ನು ಬಿಳುಪಾಗಿಸಲು ಸಹಾಯ ಮಾಡುತ್ತದೆ.
ಸೇಬು ಹಣ್ಣು
ಸಾಮಾನ್ಯವಾಗಿ ಆರೋಗ್ಯ ಸುಧಾರಣೆ ಜತೆಗೆ ಪೌಷ್ಟಿಕಾಂಶವನ್ನು ಪಡೆಯಲು ದಿನಕ್ಕೊಂದು ಸೇಬುಹಣ್ಣನ್ನು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಇದು ನಿಮ್ಮ ಹಲ್ಲಿನ ಆರೋಗ್ಯವನ್ನೂ ಸುಧಾರಿಸುತ್ತದೆ. ಹಣ್ಣುಗಳ ಜತೆಗೆ ಕ್ಯಾರೆಟ್, ಬಿಟ್ರೂಟ್ ಹೀಗೆ ನಾನಾ ತರಕಾರಿಗಳನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.