ಮುಂಬಯಿನಲ್ಲಿರುವ ಧಾರಾವಿ ಕೊಳಗೇರಿ ವಿಶ್ವದ ಅತೀ ದೊಡ್ಡ ಕೋಳಗೇರಿಗಳಲ್ಲಿ ಒಂದಾಗಿದೆ. ಇದು 520 ಎಕರೆ ವಿಸ್ತೀರ್ಣವಿದ್ದು ಇಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಪ್ರತಿ ಚದರ ಕಿಲೋ ಮೀಟರ‍್ ಗೆ 2,77,136 ಜನಸಾಂದ್ರತೆ ಹೊಂದಿರುವ ಧಾರಾವಿ ಪ್ರಪಂಚದ ಅತಿ ದಟ್ಟ ಜನಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.
ಧಾರಾವಿಯು ಬ್ರಿಟಿಷರ ಆಳ್ವಿಕೆಯಲ್ಲಿ ಕೈಗಾರಿಕೆಗಳಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರಿಗಾಗಿ 1884ರಲ್ಲಿ ನಿರ್ಮಾಣಗೊಂಡಿತು. ಕೈಗಾರಿಕೆಗಳು ಹೆಚ್ಚಿದಂತೆ ಹಳ್ಳಿಗಾಡಿನಿಂದ ಜನ ಇಲ್ಲಿಗೆ ಬರತೊಡಗಿದರು. ಅಷ್ಟೇ ಅಲ್ಲದೇ ದೇಶದ ಮೂಲೆ ಮೂಲೆಯಿಂದಲೂ ಜನರು ಇಲ್ಲಿ ಬಂದು ನೆಲೆಸಿದ್ದರಿಂದ ಇದು ಇಂದು ವಿಭಿನ್ನ ಸಂಸ್ಕೃತಿಗಳಿಂದ ಕೂಡಿದೆ. ಚರ್ಮೋತ್ಪನ್ನ, ಉಡುಪು ಮತ್ತು ಕುಂಬಾರಿಕೆಯ ಸಣ್ಣ ಕೈಗಾರಿಕೆಗಳಿಗೆ ಇದು ಪ್ರಸಿದ್ದವಾಗಿದೆ.
ಆಸ್ಕರ್ ವಿಜೇತ ಚಿತ್ರ ಸ್ಲಮ್ ಡಾಗ್ ಮಿಲಿಯನೇರ್ ಹಾಗೂ ಹಲವಾರು ಹಿಂದಿ ಚಿತ್ರಗಳು ಈ ಕೊಳಗೇರಿಯಲ್ಲಿ ಚಿತ್ರೀಕರಣಗೊಂಡಿವೆ. ನೈರ್ಮಲ್ಯದ ವಿಚಾರದಲ್ಲಿ ಈ ಕೊಳಗೇರಿಯು ಅತ್ಯಂತ ಹಿಂದೆ ಉಳಿದಿದ್ದು ಅನೇಕ ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ವಿಶೇಷವೆಂದರೆ ಈ ಎಲ್ಲಾ ಕಾರಣಗಳಿಂದ ಧಾರಾವಿಯು ಪ್ರಮುಖ ಪ್ರವಾಸೀ ತಾಣವಾಗಿಯೂ ರೂಪುಗೊಂಡಿದೆ.