ಷೇರುಗಳಲ್ಲಿ ವ್ಯವಹಾರ ಮಾಡಲು ಒಂದಲ್ಲ ಒಂದು ಷೇರು ದಲ್ಲಾಳಿ (Broker)ಯನ್ನು ನಾವು ಅವಲಂಬಿಸಲೇ ಬೇಕಾಗುತ್ತದೆ. ಯಾಕೆಂದರೆ ಚಿಲ್ಲರೆ ಹೂಡಿಕೆದಾರರು ನೇರವಾಗಿ ಸ್ಟಾಕ್ ಎಕ್ಸ್ಚೇಂಜ್ ಗಳ ಸದಸ್ಯರಾಗಲು ಅವಕಾಶವಿಲ್ಲ. ಷೇರು ದಲ್ಲಾಳಿಗಳಿಗೆ ಸದಸ್ಯರಾಗುವ ಅವಕಾಶವಿದೆ. ದಲ್ಲಾಳಿಗಳು ಹೂಡಿಕೆದಾರರ ಪರವಾಗಿ ಷೇರುಗಳ ವಿನಿಮಯ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಹೂಡಿಕೆದಾರರಿಂದ ಸಣ್ಣ ಮೊತ್ತದ ಹಣವನ್ನು ದಲ್ಲಾಳಿ ಶುಲ್ಕ (brokerage) ಎಂದು ಪಡೆಯುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಬ್ರೋಕಿಂಗ್ ಕ್ಷೇತ್ರವು ಮಹತ್ತರವಾದ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ತಂತ್ರಜ್ಞಾನದ ಪ್ರಗತಿಯಿಂದ ಸಾಂಪ್ರದಾಯಿಕ ಬ್ರೋಕಿಂಗ್ ವ್ಯವಸ್ಥೆಯನ್ನು ಆಧುನಿಕ ಬ್ರೋಕಿಂಗ್ ವ್ಯವಸ್ಥೆಯು ಆವರಿಸಿಕೊಳ್ಳುತ್ತಿದೆ. ಸುಮಾರು ಹತ್ತು ವರ್ಷಗಳ ಕೆಳಗೆ ಹೂಡಿಕೆದಾರರು ಷೇರುಗಳ ಹೂಡಿಕೆ ಮಾಡಬೇಕಿದ್ದರೆ ಸಾಂಪ್ರದಾಯಿಕ ಬ್ರೋಕಿಂಗ್ ಸಂಸ್ಥೆಗಳ ಕಚೇರಿಗಳಿಗೆ ಅಲೆದು ವ್ಯವಹಾರ ಮಾಡಬೇಕಿತ್ತು. ಇಂತಹ ಹಳೆಯ ಮತ್ತು ಪರ್ಸಂಟೇಜ್ ಬ್ರೋಕರ್ ಗಳೆಂದು ಹಣೆಪಟ್ಟಿ ಹೊತ್ತಿದ್ದ ಮತ್ತು ಒಂದೊಮ್ಮೆ ಬ್ರೋಕಿಂಗ್ ಕ್ಷೇತ್ರದ ದಿಗ್ಗಜರು ಎನಿಸಿಕೊಂಡಿದ್ದ ಸಂಸ್ಥೆಗಳು ಆಧುನಿಕ ಡಿಸ್ಕೌಂಟ್ ಬ್ರೋಕಿಂಗ್ ಸಂಸ್ಥೆಗಳ ದಾಳಿಯಿಂದಾಗಿ ಸಂಕಷ್ಟದಲ್ಲಿವೆ. ಈ ಬದಲಾವಣೆಗಳಿಗೆ ತನ್ನನ್ನು ತಾನು ತ್ವರಿತವಾಗಿ ಒಗ್ಗಿಸಿಕೊಂಡ ಬ್ರೋಕಿಂಗ್ ಸಂಸ್ಥೆಗಳು ಮಾತ್ರ ಆಧುನಿಕತೆಯ ಗಾಳಿಗೆ ಅಳಿಯದೆ ಉಳಿದುಕೊಂಡಿವೆ.
ಮೊದಲಾಗಿ ಈ ಡಿಸ್ಕೌಂಟ್ ಬ್ರೋಕರುಗಳಿಗೂ ಸಾಂಪ್ರದಾಯಿಕ ಪರ್ಸಂಟೇಜ್ ಬ್ರೋಕರುಗಳಿಗೂ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳೋಣ. ಹಳೆಯ ಪರ್ಸಂಟೇಜ್ ಬ್ರೋಕಿಂಗ್ ಸಂಸ್ಥೆಗಳು ತಮ್ಮ ಗ್ರಾಹಕರು ಅರ್ಥಾತ್ ಹೂಡಿಕೆದಾರರು ಎಷ್ಟು ಮೌಲ್ಯದ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆಯೋ ಅದಕ್ಕೆ ಅನುಗುಣವಾಗಿ ದಲ್ಲಾಳಿ ಶುಲ್ಕವನ್ನು ವಸೂಲಿ ಮಾಡುತ್ತವೆ. ಇಲ್ಲಿ ಷೇರು ವ್ಯವಹಾರದ ಮೌಲ್ಯ ಹೆಚ್ಚಾದಂತೆ ಬ್ರೋಕರೇಜು ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ. ಅಂದರೆ ನಮಗೆ ಲಾಭವಾಗಲಿ ಅಥವಾ ನಷ್ಟವಾಗಲಿ ನಾವು ಹೆಚ್ಚು ಹೆಚ್ಚು ಷೇರುಗಳನ್ನು ಖರೀದಿ ಅಥವಾ ಮಾರಾಟ ಮಾಡಿದರೆ ಬ್ರೋಕಿಂಗ್ ಸಂಸ್ಥೆಗಳಿಗೆ ಆದಾಯ ಹೆಚ್ಚುತ್ತದೆ. ಅದಕ್ಕಾಗಿ ಅವರು ನಮಗೆ ಹೆಚ್ಚಿನ ವ್ಯವಹಾರ ನಡೆಸುವಂತೆ ದುಂಬಾಲು ಬೀಳುತ್ತಾರೆ. ಜೊತೆಗೆ ಅವರು ತಮ್ಮ ಗ್ರಾಹಕರಿಗೆ ಷೇರು ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುವ ಪ್ರತ್ಯೇಕ ವಿಭಾಗವನ್ನು ಇಟ್ಟುಕೊಂಡಿರುತ್ತಾರೆ. ಇದರ ಮೂಲಕ ಇಂತಹ ಬ್ರೋಕರುಗಳು ಯಾವ ಷೇರಿನ ಬೆಲೆ ಎಷ್ಟು ಹೆಚ್ಚು ಕಮ್ಮಿ ಆಗಬಹುದು. ಯಾವ ಷೇರುಗಳನ್ನು ಎಷ್ಟು ಸಮಯದವರೆಗೆ ಇಟ್ಟುಕೊಂಡರೆ ಎಷ್ಟು ಆದಾಯ ಬರಬಹುದು ಇತ್ಯಾದಿ ಸಲಹೆಗಳನ್ನು (Tips) ತಮ್ಮ ಗ್ರಾಹಕರಿಗೆ ನೀಡುತ್ತಿರುತ್ತಾರೆ. ಹೀಗಾಗಿ ಇಂತಹ ಷೇರು ದಲ್ಲಾಳಿ ಸಂಸ್ಥೆಗಳನ್ನು ಪೂರ್ಣ ಸೇವಾ (Full Service) ದಲ್ಲಾಳಿಗಳು ಅಂತಲೂ ಕರೆಯುತ್ತಾರೆ. ಇವರ ಶಾಖಾ ಕಛೇರಿಗಳು ಅಲ್ಲಲ್ಲಿ ಇರುತ್ತವೆ ಮತ್ತು ಇವು ದೊಡ್ಡ ದೊಡ್ಡ ಮೊತ್ತದ ಷೇರು ವ್ಯವಹಾರ ಮಾಡುವ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿದೆ. ಮತ್ತು ಇವರ ಗ್ರಾಹಕ ಸೇವೆಯು ಉನ್ನತ ಮಟ್ಟದ್ದಾಗಿದ್ದು ಗ್ರಾಹಕರ ಯಾವುದೇ ದೂರು ದುಮ್ಮಾನಗಳನ್ನು ಕ್ಲಪ್ತವಾಗಿ ಪರಿಹರಿಸಲು ಪ್ರಯತ್ನಿಸುತ್ತಾರೆ. ಆದರೆ ಇವರ ಷೇರು ದಲ್ಲಾಳಿ ದರವು ಸ್ವಲ್ಪ, ಅಧಿಕವಾಗಿದ್ದು ವಾರ್ಷಿಕ ನಿರ್ವಹಣಾ ವೆಚ್ಚವೂ ಹೆಚ್ಚಾಗಿರುತ್ತದೆ.
ಆದರೆ ಡಿಸ್ಕೌಂಟ್ ಬ್ರೊಕೇರುಗಳು ಹಾಗಲ್ಲ. ಅವರು ವ್ಯವಹಾರದ ಮೌಲ್ಯಕ್ಕನುಗುಣವಾಗಿ ಬ್ರೋಕರೇಜು ಹಾಕುವುದಿಲ್ಲ. ಷೇರು ವ್ಯವಹಾರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಒಂದು ನಿರ್ದಿಷ್ಟ ಮೊತ್ತದ ಬ್ರೊಕೆರೇಜನ್ನು ಹಾಕುತ್ತಾರೆ. ಉದಾಹರಣೆಗೆ ನೀವು 100 ರೂಪಾಯಿ ವ್ಯವಹಾರ ಮಾಡಿದರೂ ಒಂದು ಲಕ್ಷದ ರೂಪಾಯಿ ಮೌಲ್ಯದ ಷೇರು ವ್ಯವಹಾರ ಮಾಡಿದರೂ ಬ್ರೊಕೆರೇಜು ಮಾತ್ರ ಬದಲಾಗುವುದಿಲ್ಲ ಮತ್ತು ಇಂತಹ ಬ್ರೋಕರುಗಳಿಗೆ ಗ್ರಾಹಕರನ್ನು ಸೆಳೆಯುವ ಅಗತ್ಯವಿಲ್ಲವಾದ್ದರಿಂದ ಅವರು ಷೇರು ಮಾರುಕಟ್ಟೆಯ ಬಗ್ಗೆ ಸಲಹೆ (Tips)ಗಳನ್ನು ನೀಡುವುದಿಲ್ಲ. ಇವರ ಶಾಖಾ ಕಛೇರಿಗಳು ಎಲ್ಲಾ ಕಡೆಯೂ ಇರುವುದಿಲ್ಲ. ಕೆಲವೇ ಕೆಲವು ಆಯ್ದ ಮಹಾನಗರಗಳಲ್ಲಿ ಮಾತ್ರ ಇವರ ಕಚೇರಿಗಳು ಇರುತ್ತವೆ. ಹಾಗಾಗಿ ಇವರ ನಿರ್ವಹಣಾ ವೆಚ್ಚ ಕಡಿಮೆ ಇರುತ್ತದೆ್ ಮತ್ತು ಡಿಸ್ಕೌಂಟ್ ಬ್ರೋಕರುಗಳ ಹೆಚ್ಚಿನ ಎಲ್ಲ ವ್ಯವಹಾರಗಳು ಆನ್ಲೈನ್ ಮುಖಾಂತರವೇ ನಡೆಯುತ್ತದೆ. ಇದರಿಂದಾಗಿ ಅವರ ದೈನಂದಿನ ಖರ್ಚು ವೆಚ್ಚಗಳು ಕಡಿಮೆ ಇರುತ್ತವೆ. ಈ ಎಲ್ಲ ಕಾರಣದಿಂದಾಗಿ ಡಿಸ್ಕೌಂಟ್ ಬ್ರೋಕರು ಗಳು ಹಾಕುವ ಬ್ರೋಕರೇಜು, ಪರ್ಸಂಟೇಜ್ ಬ್ರೋಕರುಗಳ ಬ್ರೋಕರೇಜಿಗಿಂತ ತುಂಬಾ ಕಡಿಮೆ ಇರುತ್ತದೆ.
ಇವರ ಷೇರು ವ್ಯವಹಾರಗಳು ಶೇಕಡಾ 95ರಷ್ಟು ಮೊಬೈಲ್ ಆಪ್ ಗಳ ಅಥವಾ ಕಂಪ್ಯೂಟರ್ ಇಂಟರ್ಫೇಸ್ ಗಳ ಮುಖಾಂತರವೇ ನಡೆಯುತ್ತದೆ. ಹಾಗಾಗಿ ಇವರ ಗ್ರಾಹಕ ಸಂಬಂಧಿ ಸೇವೆಯು ಫುಲ್ ಸರ್ವಿಸ್ ಬ್ರೋಕರ್ ಗಳಷ್ಟು ಚೆನ್ನಾಗಿರುವುದಿಲ್ಲ.
ಈಗ ನಮ್ಮ ದೇಶದಲ್ಲಿ ಯಾವೆಲ್ಲ ಪ್ರಮುಖ ಡಿಸ್ಕೌಂಟ್ ಬ್ರೊಕೇರುಗಳು ಇದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
1. ಜಿರೋಧ (Zerodha): ಡಿಸ್ಕೌಂಟ್ ಬ್ರೊಕೇರುಗಳಲ್ಲೇ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದ ಬ್ರೋಕಿಂಗ್ ಕಂಪನಿ ಎಂದರೆ ಅದು ಜಿರೋಧ. 2010ರಲ್ಲಿ ಸ್ಥಾಪನೆಯಾದ ಈ ಕಂಪನಿ ಈಗ ಭಾರತದಲ್ಲೇ ಅತೀ ಹೆಚ್ಚು ಹೂಡಿಕೆದಾರರನ್ನು ತನ್ನ ಗ್ರಾಹಕರನ್ನಾಗಿ ಪಡೆದ ಕಂಪನಿಯಾಗಿದೆ. ಜಿರೋಧ ಕಂಪನಿಯು ತನ್ನ ಮೂಲಕ ಈಕ್ವಿಟಿ ಮತ್ತು ಮ್ಯೂಚುಯಲ್ ಫಂಡ್ ಗಳಲ್ಲಿ ದೀರ್ಘಕಾಲಕ್ಕೆ (ಡೆಲಿವರಿ) ಹೂಡಿಕೆ ಮಾಡುವ ಹೂಡಿಕೆದಾರರಿಗೆ ಯಾವುದೇ ಬ್ರೋಕರೇಜನ್ನು ಹಾಕುವುದಿಲ್ಲ ಮತ್ತು ಇಂಟ್ರಾ-ಡೇ (Intraday) ಒಂದೇ ದಿನದ ಒಳಗೆ ಖರೀದಿ ಮತ್ತು ಮಾರಾಟ) ವ್ಯವಹಾರ, ಡೇರಿವೆಟಿವೇಗಳು ಮುಂತಾದ ವ್ಯವಹಾರಗಳಿಗೆ ಒಂದು ನಿರ್ಧಿಷ್ಟ ದರ (flat rate) ನ್ನು ಬ್ರೋಕರೇಜಿನ ರೂಪದಲ್ಲಿ ಪಡೆಯುತ್ತದೆ. ತಾಂತ್ರಿಕವಾಗಿಯೂ ಜಿರೋಧ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಇತರರಿಗಿಂತ ತುಂಬಾ ಮುಂದೆ ಇದೆ. ಜಿರೋಧ ಕೈಟ್ (Kite) ಎನ್ನುವ ತಂತ್ರಾಶವು ಈಕ್ವಿಟಿ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುವ ಹೂಡಿಕೆದಾರರ ಅನುಕೂಲಕ್ಕಾಗಿ ಅಭಿವೃದ್ಧಿ ಮಾಡಲಾಗಿದೆ. ಕೈಟ್ ಅನ್ನು ಮೊಬೈಲ್ ಆಪ್ ಆಗಿಯೂ ಬಳಸಬಹುದು. ಇದಲ್ಲದೆ ಮ್ಯೂಚುಯಲ್ ಫಂಡ್ ಗಳ ವ್ಯವಹಾರಕ್ಕಾಗಿ ಜಿರೋಧ ಕಾಯಿನ್ (Coin) ಅನ್ನುವ ತಂತ್ರಾಶವೂ ಇದೆ. ಉಳಿದಂತೆ ಜಿರೋಧ Console , Pi , Sential ಇತ್ಯಾದಿ ತಂತ್ರಾಂಶಗಳು ಜಿರೋಧದ ಬತ್ತಳಿಕೆಯಲ್ಲಿವೆ.
2. ಅಪ್ಸ್ಟಾಕ್ಸ್ (Upstox): ಇದು ಕೂಡ ಅತೀ ವೇಗವಾಗಿ ಬೆಳೆಯುತ್ತಿರುವ ಇನ್ನೊಂದು ಡಿಸ್ಕೌಂಟ್ ಬ್ರೋಕಿಂಗ್ ಕಂಪನಿಯಾಗಿದೆ. ಇದು 2012ನೇ ಇಸವಿಯಲ್ಲಿ RKSV ಎನ್ನುವ ಹೆಸರಿನೊಂದಿಗೆ ಪ್ರಾರಂಭವಾಗಿದ್ದು 2015 ನೇ ಇಸವಿಯಲ್ಲಿ ಇದನ್ನು ಅಪ್ ಸ್ಟಾಕ್ಸ್ ಎಂದು ಹೆಸರು ಬದಲಾಯಿಸಲಾಗಿದೆ. ಟಾಟಾ ಸಮೂಹದ ದಿಗ್ಗಜರಾದ ರತನ್ ಟಾಟಾ ರವರೂ ಇದರಲ್ಲಿ ಹಣ ಹೂಡಿಕೆ ಮಾಡಿದ್ದು, ಇದರ ಪಾಲುದಾರರಲ್ಲಿ ಒಬ್ಬರಾಗಿದ್ದಾರೆ. ಜಿರೋಧದ ನಂತರ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಬ್ರೋಕಿಂಗ್ ಕಂಪನಿ ಎಂಬ ಹೆಗ್ಗಳಿಕೆ ಅಪ್ ಸ್ಟಾಕ್ಸ್ ನದ್ದಾಗಿದೆ. ಇದರ ಬ್ರೋಕಿಂಗ್ ದರಗಳು ಜಿರೋಧ ದಂತೆಯೇ ಇವೆ. ಆದರೆ ಅಪ್ ಸ್ಟಾಕ್ಸ್ ಡೆಲಿವರಿ ಹೂಡಿಕೆಗೂ ಒಂದು ನಿರ್ಧಿಷ್ಟ ದರದ ಬ್ರೋಕರೇಜು ಹಾಕುತ್ತದೆ.
3. ಗ್ರೋ (Groww): ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇನ್ನೊಂದು ಡಿಸ್ಕೌಂಟ್ ಬ್ರೋಕಿಂಗ್ ಕಂಪೆನಿಗಳಲ್ಲಿ ಗ್ರೋ ಕೂಡ ಒಂದು. ಇದು 2016ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಇದು ಕೇವಲ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗಾಗಿ ಮೀಸಲಾಗಿತ್ತು. ಮುಂದೆ 2020ರ ಕೊರೊನ ಕಾಲಘಟ್ಟದಲ್ಲಿ ಡಿಸ್ಕೌಂಟ್ ಬ್ರೋಕಿಂಗ್ ಕಂಪನಿಗಳಿಗೆ ಬೇಡಿಕೆ ಹೆಚಾಗುತ್ತಿರುವುದನ್ನು ಮನಗಂಡು ಇದು ಕೂಡ ಷೇರುಗಳ ಬ್ರೋಕಿಂಗ್ ಕಂಪನಿಯಾಗಿ ಬದಲಾವಣೆಗೊಂಡಿತು. ಪ್ರಸ್ತುತ Groww ದಲ್ಲಿ 90 ಲಕ್ಷಕ್ಕಿಂತಲೂ ಅಧಿಕ ಗ್ರಾಹಕರಿದ್ದಾರೆ. ಗ್ರೋ ಎಂಬ ಮೊಬೈಲ್ ಆಪ್ ಷೇರುಗಳಿಗೆ ಮತ್ತು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಸಾಧನವಾಗಿದೆ. ಗ್ರೋ ಡೆಲಿವರಿ ವ್ಯವಹಾರಕ್ಕೂ, ಇಂಟ್ರಾ-ಡೇ ವ್ಯವಹಾರಕ್ಕೂ ಒಂದೇ ತೆರನಾದ ಬ್ರೋಕರೇಜ್ ಹಾಕುತ್ತದೆ. ಸದ್ಯಕ್ಕೆ ಪ್ರತಿ ಯಶಸ್ವಿ ಷೇರು ವ್ಯವಹಾರಕ್ಕೆ ರೂಪಾಯಿ 20 ರಂತೆ ದಲ್ಲಾಳಿ ಶುಲ್ಕವನ್ನು ಗ್ರೋ ವಿಧಿಸುತ್ತದೆ. ಆದರೆ ಗ್ರೋದಲ್ಲಿ ಇರುವ ಪ್ರಮುಖ ಕೊರತೆಯೆಂದರೆ ಐಪಿಒದಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಗ್ರೋದಲ್ಲಿ ಯಾವುದೇ ಅವಕಾಶವಿಲ್ಲ.
4. 5 Paisa: ಬ್ರೋಕಿಂಗ್ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆಯುತ್ತಿರುವ ಸಂಸ್ಥೆಗಳಲ್ಲಿ 5paisa.com ಕೂಡ ಒಂದು. ಭಾರತದ ಪ್ರಮುಖ ಹಣಕಾಸು ಸೇವಾ ಸಂಸ್ಥೆಯಾದ India Infoline (IIFL) ನ ಸ್ಥಾಪಕರಿಂದ ಪ್ರವರ್ತಿತ ಕಂಪನಿ ಯಾದ 5paisa Capital Ltd. ಎಂಬ ಕಂಪನಿಯ ಅಡಿಯಲ್ಲಿ 5paisa.com ಹುಟ್ಟಿಕೊಂಡಿದೆ. ಸರಿ ಸುಮಾರು 12 ಲಕ್ಷಕ್ಕಿಂತಲೂ ಅಧಿಕ ಗ್ರಾಹಕರನ್ನು ಹೊಂದಿರುವ ಇದು ಈಕ್ವಿಟಿ, ಕಮಾಡಿಟಿ ಮತ್ತು ವಿದೇಶಿ ವಿನಿಮಯ ದಂತಹ ಹೂಡಿಕೆಗಳ ದಲ್ಲಾಳಿಯಾಗಿ ಕೆಲಸ ಮಾಡುತ್ತಿದೆ. ಗ್ರೋದಂತೆಯೇ ಇದು ಕೂಡ ರೂಪಾಯಿ 20 ರ ನೇರ ಬ್ರೋಕರೇಜನ್ನು ವಿಧಿಸುತ್ತದೆ. ಜೊತೆಗೆ ಇದರ ಇನ್ನೊಂದು ವಿಶೇಷವೆಂದರೆ ಇದು ವಿಶೇಷ ಮಾರುಕಟ್ಟೆ ವಿಶ್ಲೇಷಣೆ ಮಾಡಿ ಗ್ರಾಹಕರಿಗೆ ಹೆಚ್ಚಿನ ಶುಲ್ಕವಿಲ್ಲದೆ ಹೂಡಿಕಾ ಸಲಹೆ (Tips)ಗಳನ್ನು ನೀಡುತ್ತದೆ.
5. ಪ್ರೊಸ್ಟಾಕ್ಸ್ (ProStocks): ಪ್ರೊಸ್ಟಾಕ್ಸ್ ಒಂದು SEBI ನೋಂದಾಯಿತ ಇನ್ನೊಂದು ವೇಗವಾಗಿ ಬೆಳೆಯುತ್ತಿರುವ ಫ್ಲಾಟ್ ಶುಲ್ಕ ರಿಯಾಯಿತಿ ನೀಡುವ ಡಿಸ್ಕೌಂಟ್ ಷೇರು ದಲ್ಲಾಳಿಯಾಗಿದೆ. ಪ್ರೊಸ್ಟಾಕ್ಸ್ ಅನಿಯಮಿತ ವ್ಯವಹಾರ ಯೋಜನೆ (Unlimited Plan) ಗೆ ಪ್ರಸಿದ್ಧವಾಗಿದೆ. ಈ ಯೋಜನೆಯು ಅನಿಯಮಿತ ಇಕ್ವಿಟಿ ಮತ್ತು ಡೆರಿವೇಟಿವ್ಸ್ ಟ್ರೇಡಿಂಗ್ ಅನ್ನು ತಿಂಗಳಿಗೆ ರೂ 899 ಅಥವಾ ಅನಿಯಮಿತ ಕರೆನ್ಸಿ ಡೆರಿವೇಟಿವ್‌ಗಳನ್ನು ತಿಂಗಳಿಗೆ ರೂ 499 ಕ್ಕೆ ನೀಡುತ್ತದೆ. ಅವರು ಅನಿಯಮಿತ ವ್ಯವಹಾರ ಯೋಜನೆಗಳಲ್ಲಿ ಅಗ್ಗದ ಬ್ರೋಕರ್. ಷೇರು ವ್ಯಾಪಾರಿಗಳು ಈ ಯೋಜನೆಯ ಮೂಲಕ ಸರಾಸರಿ 60% ರಿಂದ 99% ರಷ್ಟು ಬ್ರೋಕರೇಜ್ ಮೇಲೆ ಉಳಿತಾಯ ಮಾಡುತ್ತಾರೆ. ವಿಶೇಷವೆಂದರೆ ಇದು ಯಾವುದೇ ವ್ಯವಹಾರಕ್ಕೆ ಕೇವಲ ರೂಪಾಯಿ 10ನ್ನು ಮಾತ್ರ ಬ್ರೋಕರೇಜ್ ರೂಪದಲ್ಲಿ ಗ್ರಾಹಕರಿಂದ ಪಡೆಯುತ್ತದೆ.
(ಮುಂದುವರಿಯುತ್ತದೆ)