ಬೆಂಗಳೂರು :ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(C.F.I) ಪಾತ್ರದ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರಿಯಿತು. ಈ ಸಂದರ್ಭ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮತ್ತು ಅದರ ಪ್ರಾಂಶುಪಾಲರಾದ ರುದ್ರೇಗೌಡ ಮತ್ತು ಶಿಕ್ಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ , ಸಮವಸ್ತ್ರ ಸಂಹಿತೆಯನ್ನು ಹೊಸದಾಗಿ ಕಾಲೇಜು ಜಾರಿಗೊಳಿಸಿಲ್ಲ. ಕೆಲವು ದಶಕಗಳಿಂದ ನಾವು ಸಮವಸ್ತ್ರ ಸಂಹಿತೆಯನ್ನು ಹೊಂದಿದ್ದೇವೆ ಮತ್ತು ಎಲ್ಲವೂ ಶಾಂತಿಯಿಂದ ಕೂಡಿತ್ತು. C.F.I ನಂತಹ ಸಂಘಟನೆಗಳು ಬಂದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪ್ರಚೋದಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂದರ್ಭ ನ್ಯಾಯಾಲಯವು, ಸಿಎಫ್ ಐ ಬಗ್ಗೆ ಪ್ರಶ್ನಿಸಿದೆ. ಬಳಿಕ ಸರ್ಕಾರದ ಪರ ಅಡ್ವೊಕೆಟ್ ಜನರಲ್ ಫ್ರಭುಲಿಂಗ ನಾವಡಗಿ ಅವರ ಮೂಲಕ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಸಿ ಎಫ್ ಐ ಪಾತ್ರವೇನು ಎಂಬುದರ ಬಗ್ಗೆ ವಿವರ ಕೊಡುವಂತೆ ಸರಕಾರಕ್ಕೆ ಸೂಚಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೆಟ್ ಜನರಲ್ ಫ್ರಭುಲಿಂಗ ನಾವಡಗಿ, ಹಿಜಾಬ್ ಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಆದ್ದರಿಂದ ಸಮವಸ್ತ್ರ ಸಂಹಿತೆಯ ಕುರಿತು ಸರ್ಕಾರದ ವಾದಕ್ಕೆ ತೂಕವಿದೆ ಎಂದು ಹೇಳಿದರು.
ಬಳಿಕ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಬಗ್ಗೆ ಮೂಡಿದ್ದ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ಸಮವಸ್ತ್ರ ಕಡ್ಡಾಯವಿರುವ ಶಾಲಾ-ಕಾಲೇಜುಗಳಲ್ಲಿ ಮಾತ್ರ ತನ್ನ ಮಧ್ಯಂತರ ಆದೇಶದ ಪಾಲನೆಯಾಗಲಿದೆ. ಅಲ್ಲದೇ ಹೈಕೋರ್ಟ್ ಮಧ್ಯಂತರ ಆದೇಶ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯವಾಗುವುದೇ ಹೊರತು ಶಿಕ್ಷಕಿಯರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯ ವಾದ ವಿವಾದವನ್ನು ನಾಳೆ (ಗುರುವಾರ) ಮಧ್ಯಾಹ್ನ 2:30 ಕ್ಕೆ ಮುಂದೂಡಿದರು.