ಉಡುಪಿ: ಅಂಗಡಿ ಮಾಲೀಕರೊಬ್ಬರ ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಕೇವಲ 2 ಗಂಟೆಯಲ್ಲಿ ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಶರಾವತಿ ನಗರ ನಿವಾಸಿ ಟೈಲರ್ ಕುಮಾರ್ (37) ಎಂದು ಗುರುತಿಸಲಾಗಿದೆ.
ಏಪ್ರಿಲ್ 3 ರಂದು ಸಂಜೆ 4:30 ಗಂಟೆಗೆ ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ನ ಎದುರು ಅದರ ಮಾಲಕ ಪ್ರಸನ್ನ ಕುಮಾರ್ ರವರು ತನ್ನ ಬೈಕನ್ನು ನಿಲ್ಲಿಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ, ಒರ್ವ ವ್ಯಕ್ತಿ ಬೈಕನ್ನು ಕಳವು ಮಾಡಿ ಹಿರಿಯಡ್ಕ ಕಡೆಗೆ ಹೋಗಿದ್ದಾನೆ. ಈ ಬಗ್ಗೆ ಬೈಕ್ ಮಾಲೀಕ ಪ್ರಸನ್ನ ಕುಮಾರ್ ರವರು ಹಿರಿಯಡ್ಕ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸಿದ್ದು, ಸಂಜೆ 5:50 ಗಂಟೆಯ ವೇಳೆಗೆ ಆರೋಪಿ ಆತ್ರಾಡಿ ಕಡೆಯಿಂದ ಬರುತ್ತಿದ್ದಾಗ ತಡೆದು ನಿಲ್ಲಿಸಿದ್ದಾರೆ. ಬೈಕ್ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಆತನು ಬೈಕ್ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಬಳಿಕ ಪೊಲೀಸರು ಅಡ್ಡಗಟ್ಟಿ ಆತನನ್ನು ವಿಚಾರಿಸಿದಾಗ ಬೈಕನ್ನು ಆತ್ರಾಡಿ ಅಂಗಡಿಯ ಎದುರು ನಿಲ್ಲಿಸಿರುವುದನ್ನು ಕಳವು ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಯನ್ನು ಬಂಧಿಸಿ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಅನಿಲ್ ಬಿ ಎಮ್, ಪ್ರೊಫೆಶನರಿ ಪಿಎಸ್ಐ ಮಂಜುನಾಥ, ರವಿ, ಎಎಸ್ಐ ಗಂಗಪ್ಪ, ಪರಮೇಶ್ವರ, ಸಿಬ್ಬಂದಿಗಳಾದ ದಯಾನಂದ ಪ್ರಭು, ರಘು, ಕಾರ್ತಿಕ್, ಸಂತೋಷ್, ಶಿವರಾಜ್, ಭೀಮಪ್ಪ ಜಯಲಕ್ಷ್ಮೀ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರವೀಣ, ವೆಂಕಟರಮಣ, ಅಜ್ಮಲ, ಸಂತೋಷ, ಇತರರು ಭಾಗವಹಿಸಿದ್ದರು.