ಉಪ್ಪಿನಂಗಡಿ: ಜಾನುವಾರುಗಳನ್ನು ಬಾಧಿಸುತ್ತಿರುವ ಚರ್ಮಗಂಟು ರೋಗಕ್ಕೆ ಲಸಿಕೆ ಪ್ರಯೋಗ ನಡೆಯುತ್ತಿದ್ದರೂ ಜಾನುವಾರುಗಳು ಮಾತ್ರ ಈ ಕಾಯಿಲೆಗೆ ಬಲಿಯಾಗುತ್ತಲೆ ಇವೆ. ಪ್ರಸ್ತುತ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಮನೆಯಲ್ಲಿಯೇ ತಯಾರಿಸಬಹುದಾದ ನಾಟಿ ಔಷಧವನ್ನು ರೈತರಿಗೆ ಸೂಚಿಸಿದೆ.
ಜಾನುವಾರಗಳಿಗೆ ಈ ಔಷಧವನ್ನು ನೀಡಿ ಕನಿಷ್ಠ ಒಂದು ಗಂಟೆಯ ಅಂತರದಲ್ಲಿ ಆಹಾರವನ್ನು ನೀಡಬಹುದಾಗಿದೆ. ಕೇಂದ್ರ ಸರಕಾರದ ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಅಧೀನದ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಈ ಪ್ರಕಟನೆಯನ್ನು ಹೊರಡಿಸಿದೆ.
ಒಂದನೇ ಸೂತ್ರದಂತೆ ಔಷಧಕ್ಕೆ ಬಳಸುವ ಪದಾರ್ಥ ಹಾಗೂ ಒಂದು ಸಲ ನೀಡಲು ಬೇಕಾದ ಪ್ರಮಾಣವನ್ನು ಪಟ್ಟಿ ಇಲ್ಲಿದೆ. ವೀಳ್ಯದ ಎಲೆ- 10, ಕರಿಮೆಣಸು- 10 ಗ್ರಾಂ, ಉಪ್ಪು – 10 ಗ್ರಾಂ ಮತ್ತು ಬೆಲ್ಲ. ಇವೆಲ್ಲವನ್ನು ಬೆರೆಸಿ ಅಗತ್ಯವಿದ್ದಷ್ಟು ಬೆಲ್ಲ ಹಾಕಿ ಪೇಸ್ಟ್ ತಯಾರಿಸಬೇಕು. ಮೊದಲ ದಿನ 3 ಗಂಟೆಗಳಿಗೊಮ್ಮೆ ಸಣ್ಣ ಸಣ್ಣ ಪ್ರಮಾಣದಲ್ಲಿ ತಿನ್ನಿಸಬೇಕು. ಎರಡನೇ ದಿನದಿಂದ ಎರಡು ವಾರಗಳ ವರೆಗೆ ಪ್ರತೀ ದಿನ 3 ಡೋಸ್ ನೀಡಬೇಕು. ಪ್ರತೀ ಡೋಸ್ ತಿನ್ನಿಸುವ ಮೊದಲು ಔಷಧವನ್ನು ಹೊಸದಾಗಿ ತಯಾರಿಸಬೇಕು
ಎರಡನೇ ಸೂತ್ರದ ಪದಾರ್ಥಗಳು ಹಾಗೂ ಎರಡು ಸಲದ ಔಷಧಕ್ಕೆ ಬೇಕಾದ ಪ್ರಮಾಣ ಇಂತಿದೆ: ಬೆಳ್ಳುಳ್ಳಿ 2 ಎಸಳು, ಕೊತ್ತಂಬರಿ 10 ಗ್ರಾಂ, ಜೀರಿಗೆ 10 ಗ್ರಾಂ, ತುಳಸಿ ಒಂದು ಹಿಡಿ, ದಾಲ್ಚಿನಿ ಎಲೆಗಳು 10 ಗ್ರಾಂ., ಕರಿಮೆಣಸು 10 ಗ್ರಾಂ, 5 ವೀಳ್ಯದ ಎಲೆ, 1 ಸಣ್ಣ ಈರುಳ್ಳಿ, ಅರಶಿನ ಪುಡಿ 10 ಗ್ರಾಂ, ಕಿರಾತ (ನೆಲಬೇವು) ಎಲೆಯ ಪುಡಿ 30 ಗ್ರಾಂ, ಕಾಮಕಸ್ತೂರಿ ಒಂದು ಕೈಹಿಡಿ, ಬೇವಿನ ಎಲೆಗಳು ಒಂದು ಕೈಹಿಡಿ, ಬಿಲ್ವಪತ್ರೆ ಒಂದು ಕೈಹಿಡಿ. ಈ ಎಲ್ಲ ಪದಾರ್ಥಗಳನ್ನು ಬೆರೆಸಿ, ಅಗತ್ಯವಿದ್ದಷ್ಟು ಬೆಲ್ಲ ಹಾಕಿ ಪೇಸ್ಟ್ ತಯಾರಿಸಿ, ಸಣ್ಣ ಪ್ರಮಾಣದಲ್ಲಿ ತಿನ್ನಿಸಬೇಕು. ಮೊದಲ ದಿನ ಪ್ರತೀ ಮೂರು ಗಂಟೆಗೊಮ್ಮೆ ಒಂದು ಡೋಸ್ ನೀಡಬೇಕು. ಎರಡನೇ ದಿನದಿಂದ ಪರಿಸ್ಥಿತಿ ಸುಧಾರಣೆಯಾಗುವ ವರೆಗೆ ಪ್ರತೀ ದಿನ ಬೆಳಗ್ಗೆ ಒಂದು ಹಾಗೂ ಸಂಜೆ ಒಂದು ಡೋಸ್ ನೀಡಬೇಕು. ಇಲ್ಲಿ ಕೂಡ ಔಷಧವನ್ನು ಹೊಸದಾಗಿಯೇ ತಯಾರಿಸಬೇಕು.
ರಾಸುಗಳಿಗೆ ಗಾಯವಿದ್ದಲ್ಲಿ ಲೇಪ ಮಾಡಲು ಬೇಕಾದ ಔಷಧ ತಯಾರಿಗೆ ಬೇಕಾದ ಪದಾರ್ಥಗಳು ಇಂತಿವೆ: ಕುಪ್ಪಿ ಗಿಡದ ಎಲೆ ಒಂದು ಕೈಹಿಡಿ, ಬೆಳ್ಳುಳ್ಳಿ 10 ಎಸಳು, ಬೇವಿನ ಎಲೆ ಒಂದು ಕೈಹಿಡಿ, ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ 500 ಮಿ.ಲೀ., ಅರಶಿನ ಪುಡಿ 20 ಗ್ರಾಂ, ಮೆಹಂದಿ (ಗೋರಂಟಿ) ಎಲೆಗಳು ಒಂದು ಕೈಹಿಡಿ, ತುಳಸಿ ಒಂದು ಕೈಹಿಡಿ. ಇವೆಲ್ಲವನ್ನೂ ಮಿಶ್ರ ಮಾಡಿ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯೊಂದಿಗೆ ಕುದಿಸಿ ತಣ್ಣಗಾಗಿಸಿಕೊಳ್ಳಬೇಕು. ಜಾನುವಾರುಗಳ ದೇಹದ ಮೇಲಿನ ಗಾಯಗಳನ್ನು ಸ್ವತ್ಛಗೊಳಿಸಿ ಈ ಔಷಧ ಲೇಪಿಸಬೇಕು. ಒಂದು ವೇಳೆ ಗಾಯದೊಳಗೆ ಮರಿಹುಳು (ನೊಣದ ಹುಳು)ಗಳಿದ್ದಲ್ಲಿ ಉಪಚಾರದ ಮೊದಲ ದಿನ ಮಾತ್ರ ಸೀತಾಫಲದ ಎಲೆಗಳಿಂದ ಮಾಡಿದ ಫೇಸ್ಟ್ ಅಥವಾ ಕರ್ಪೂರ ಬೆರೆಸಿದ ತೆಂಗಿನ ಎಣ್ಣೆಯನ್ನು ಲೇಪಿಸಲು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ತಿಳಿಸಿದೆ.