ಬಿಟ್ ಕಾಯಿನ್ ಎನ್ನುವ ಎಲೆಕ್ಟ್ರಾನಿಕ್ ಹಣ!

0

ಹಿಂದೆಲ್ಲಾ ನಾವು ಎಲ್ಲಾದರೂ ದೂರ ಹೋಗುವುದಿದ್ದರೆ ಖರ್ಚಿಗೆ ಬೇಕಾದ ಹಣವನ್ನು ಜೋಪಾನವಾಗಿ ಲಗ್ಗೇಜುಗುಳ ಎಡೆಯಲ್ಲೋ, ಪ್ಯಾಂಟ್ ನ ಒಳಕಿಸೆಯಲ್ಲೋ ಬಚ್ಚಿಟ್ಟುಕೊಂಡು ಹೋಗಬೇಕಿತ್ತು. ಕ್ರಮೇಣ ATM ಕಾರ್ಡುಗಳು ಚಾಲ್ತಿಗೆ ಬಂದು ಹೆಚ್ಚಿನವರು ಅದನ್ನೇ ವ್ಯವಹಾರಕ್ಕೆ ಬಳಸಲಾರಂಭಿಸಿದರು. ಅದೂ ಹಳೆಯದಾಗಿ ಈಗ payment app ಗಳ ಕಾಲ. Google Pay, Paytm , Amazon ಮುಂತಾದ ಅನೇಕ ಪೇಮೆಂಟ್ ಆಪ್ ಗಳು ನಗದು ಬಳಕೆ ಮಾಡುವ ಬದಲಿಗೆ ಆನ್ಲೈನ್ ಮುಖಾಂತರ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ತಕ್ಷಣ ಹಣ ವರ್ಗಾವಣೆಯಾಗುವ ಸೌಲಭ್ಯವನ್ನು ಒದಗಿಸಿವೆ. ನಿಮ್ಮಲ್ಲೊಂದು 4G ಸಂಪರ್ಕ ಇರುವ ಮೊಬೈಲ್ ಫೋನ್, ಅದರಲ್ಲೊಂದು ಪೇಮೆಂಟ್ ಆಪ್, ಮತ್ತು ಆ ಆಪ್ ನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ ಸಣ್ಣ ಪುಟ್ಟ ವ್ಯವಹಾರಗಳಿಗೆಲ್ಲ ನಗದು ಬಳಕೆ ಮಾಡುವ ಅವಶ್ಯಕತೆಯಿಲ್ಲ. ಆಗೊಮ್ಮೆ ಈಗೊಮ್ಮೆ ಈ ಆಪ್ ಗಳು ಕೈಕೊಡುತ್ತವೆಯಾದರೂ ಹೆಚ್ಚಿನ ಸಂದರ್ಭದಲ್ಲಿ ಇವು ಕರಾರುವಾಕ್ ಕೆಲಸ ಮಾಡುತ್ತವೆ. ಜೊತೆಗೆ ಈ ಆಪ್ ಗಳಿಗೆ ಕಾನೂನಿನ ಮಾನ್ಯತೆ ಇರುವುದರಿಂದ ಇವುಗಳ ವ್ಯವಹಾರಗಳು ಕಾನೂನಿನ ಸುಪರ್ದಿಯೊಳಗೆ ನಡೆಯುತ್ತವೆ.
ಇಂತಹದ್ದೇ ಇನ್ನೊಂದು ವ್ಯವಸ್ಥೆ ವಿದೇಶಗಳಲ್ಲಿ 2009 ರಿಂದ ಚಾಲ್ತಿಯಲ್ಲಿದೆ. ಅದೇ ಬಿಟ್ ಕಾಯಿನ್.

ಇದನ್ನು Crypto currency ಅಂತಾನೂ ಕರೆಯುತ್ತಾರೆ. ಬಿಟ್ ಕಾಯಿನ್ ಅಂದರೆ ನೈಜ ಹಣವಲ್ಲ ಆದರೆ ಹಣದಂತೆ ಬಳಸಲ್ಪಡುತ್ತದೆ (ವರ್ಚುಯಲ್ ಕರೆನ್ಸಿ). ಇದು online ವ್ಯವಹಾರಕ್ಕೆ ಮಾತ್ರ ಬಳಸಬಹುದಾದ ಹಣ. ಅಂದರೆ ನಮ್ಮ ಕಾಗದದ ನೋಟುಗಳಂತೆ ಇದು ಮುಟ್ಟಬಹುದಾದ (tangible) ಹಣವಲ್ಲ. ಬಿಟ್ ಕಾಯಿನ್ ಗೆ ಭೌತಿಕ ಅಸ್ತಿತ್ವ ಇರುವುದಿಲ್ಲ. ಇದು ಇಲೆಕ್ಟ್ರಾನಿಕ್ ರೂಪದಲ್ಲಿ ಇರುತ್ತದೆ. ವಿದೇಶಗಳಲ್ಲಿ ಅನೇಕ ಕಂಪನಿಗಳು ತಮ್ಮ ಸರಕುಗಳಿಗೆ ಬಿಟ್ ಕಾಯಿನ್ ಮೂಲಕ ಪಾವತಿ ಸ್ವೀಕರಿಸುತ್ತವೆ. ಇದನ್ನು online ಪಾವತಿ ಮಾಡಲು, ವಸ್ತುಗಳನ್ನು ಖರೀದಿಸಲು ಉಪಯೋಗಿಸುತ್ತಾರೆ. ಇದು ಯಾವುದೇ ಸರಕಾರದ, ಸಂಸ್ಥೆಗಳ ಮಧ್ಯಸ್ತಿಕೆಯಿಲ್ಲದೆ, ಕಾನೂನು ಚೌಕಟ್ಟುಗಳ ನಿರ್ಬಂಧವಿಲ್ಲದೆ ಸೀಕೃತಿ/ಪಾವತಿ ಮಾಡಲು ಜನರೇ ನಿರ್ಮಿಸಿಕೊಂಡಿರುವ ಒಂದು ವ್ಯವಸ್ಥೆ. ಇದರ ಕರ್ತೃಗಳು ಯಾರೆಂದು ನಿಖರವಾಗಿ ಹೇಳಲು ಅಸಾಧ್ಯವಾದರೂ, ಜಪಾನಿನ ಸತೋಷಿ ನಕಾಮೋಟೋ ಎಂಬ ವ್ಯಕ್ತಿಯು ಈ ಪರಿಕಲ್ಪನೆಯನ್ನು ಮೊದಲು ಮಂಡಿಸಿದನು.

ಬಿಟ್ ಕಾಯಿನ್ ಹೇಗೆ ಕೆಲಸ ಮಾಡುತ್ತದೆ?
ಇದೊಂದು ನಗದು ವ್ಯವಹಾರಕ್ಕೆ ಬದಲಿಯಾಗಿ ಬಳಸುವ ವ್ಯವಸ್ಥೆ. ನೀವು ವಿಡಿಯೋ ಗೇಮ್ ಗಳನ್ನು ಆಡಿದ್ದರೆ, ಕೆಲವು ಆಟಗಳಲ್ಲಿ ನೀವು ಕಾರ್ಡು ಗಳನ್ನೋ, ಕೂಪನ್ ಗಳನ್ನೋ ಗಳಿಸುವ ಆಟಗಳನ್ನು ನೋಡಿದ್ದಿರಬಹುದು. ಇಂಥವುಗಳ ಮುಂದುವರಿದ ಆವೃತ್ತಿಯೇ ಈ ಬಿಟ್ ಕಾಯಿನ್. ಇದು ಮೂಲತಃ ಕಂಪ್ಯೂಟರ್ ಫೈಲ್ ಆಗಿದ್ದು ಅದನ್ನು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ‘ಡಿಜಿಟಲ್ ವ್ಯಾಲೆಟ್’ (ನಿಮ್ಮ ಖಾಸಗಿ ಅಕೌಂಟ್) ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಜನರು ನಿಮ್ಮ ಡಿಜಿಟಲ್ ವ್ಯಾಲೆಟ್‌ಗೆ ಬಿಟ್‌ಕಾಯಿನ್‌ಗಳನ್ನು ಕಳುಹಿಸಬಹುದು, ಮತ್ತು ನೀವು ಬೇರೆಯವರಿಗೆ ಬಿಟ್‌ಕಾಯಿನ್‌ಗಳನ್ನು ಕಳುಹಿಸಬಹುದು. ಉದಾಹರಣೆಗೆ ನಾನು ನನ್ನ ಗೆಳೆಯನ ಬೈಕ್ ನ್ನು ಖರೀದಿಸುತ್ತೇನೆ. ಅದಕ್ಕೆ ಪ್ರತಿಯಾಗಿ ಅವನು ನನಗೆ 1000 ಬಿಟ್ ಕಾಯಿನ್ ಗಳನ್ನು ಕೊಡಲು ಹೇಳುತ್ತಾನೆ. ನನ್ನ ಅಕೌಂಟ್ ನಲ್ಲಿ ಅಷ್ಟು ಬಿಟ್ ಕಾಯಿನ್ ಗಳು ಇದ್ದರೆ, ನಾನು ಅದನ್ನು ಅವನ ಖಾತೆಗೆ ಜಮೆ ಮಾಡಬಹುದು. ಹೀಗೆ ನಮ್ಮೊಳಗೇ ವ್ಯವಹಾರ ಸಂಪೂರ್ಣವಾಯಿತು. ಹೀಗೆ ನಡೆಯುವ ಪ್ರತಿಯೊಂದು ವಹಿವಾಟನ್ನು ಬ್ಲಾಕ್‌ಚೇನ್ (Block Chain) ಎಂಬ ಸಾರ್ವಜನಿಕ ಪಟ್ಟಿಯಲ್ಲಿ ದಾಖಲಿಸಲಾಗುತ್ತದೆ. ಇದರಿಂದಾಗಿ ಜನರು ಡೋಂಗಿ ವ್ಯವಹಾರ ಮಾಡುವುದು, ತಮ್ಮಲ್ಲಿಲ್ಲದ ನಾಣ್ಯಗಳನ್ನು ಖರ್ಚು ಮಾಡುವುದು, ನಕಲಿ ನಾಣ್ಯ ತಯಾರಿಸುವುದು ಮುಂತಾದ ಅವ್ಯವಹಾರಗಳನ್ನು ತಡೆಯಬಹುದಾಗಿದೆ. ಬ್ಲಾಕ್ ಚೈನ್ ನಿಂದಾಗಿ ಪ್ರತಿ ವ್ಯವಹಾರವೂ ಪಾರದರ್ಶಕವಾಗಿರುತ್ತದೆ.
ಜನರು ಬಿಟ್‌ಕಾಯಿನ್‌ಗಳನ್ನು ಹೇಗೆ ಗಳಿಸುತ್ತಾರೆ ?
ಜನರು ಬಿಟ್‌ಕಾಯಿನ್‌ಗಳನ್ನು ಪಡೆಯಲು ಮೂರು ಮುಖ್ಯ ಮಾರ್ಗಗಳಿವೆ.
• ‘ನೈಜ’ ಹಣವನ್ನು ಬಳಸಿಕೊಂಡು ನೀವು ಬಿಟ್‌ಕಾಯಿನ್‌ಗಳನ್ನು ಖರೀದಿಸಬಹುದು.
• ನೀವು ವಸ್ತುಗಳನ್ನು ಮಾರಾಟ ಮಾಡಬಹುದು ಮತ್ತು ಜನರು ನಿಮಗೆ ಬಿಟ್‌ಕಾಯಿನ್‌ಗಳೊಂದಿಗೆ ಪಾವತಿಸಲು ಅವಕಾಶ ನೀಡಬಹುದು.
• ಅಥವಾ ಅವುಗಳನ್ನು ಕಂಪ್ಯೂಟರ್ ಬಳಸಿ ರಚಿಸಬಹುದು.
ಹೊಸ ಬಿಟ್‌ಕಾಯಿನ್‌ಗಳನ್ನು ಹೇಗೆ ರಚಿಸಲಾಗುತ್ತದೆ?
ಮೈನಿಂಗ್ ಪ್ರಕ್ರಿಯೆ ಮೂಲಕ ಹೊಸ ಬಿಟ್ ಕಾಯಿನ್ ಗಳನ್ನು ಸೃಜಿಸಲಾಗುತ್ತದೆ. ಮೈನಿಂಗ್ ಅಂದರೆ ಕ್ಲಿಷ್ಟಕರವಾದ ಗಣಿತದ ಸಮಸ್ಯೆಗಳನ್ನು ಬಿಡಿಸುವುದು. ಒಂದು ಸಮಸ್ಯೆಯನ್ನು ಬಿಡಿಸಿದರೆ ಇಂತಿಷ್ಟು ಬಿಟ್ ಕಾಯಿನ್ ಗಳು ಸೃಷ್ಟಿಯಾಗುತ್ತವೆ. ಆದರೆ ಒಂದು ಸಮಸ್ಯೆಯನ್ನು ಬಿಡಿಸಲು ಕೆಲವೊಮ್ಮೆ ಒಂದು ವರ್ಷದಷ್ಟು ಸಮಯ ಬೇಕಾಗಬಹುದು. ಆ ಒಂದು ವರ್ಷದಲ್ಲಿ ನೀವು ನಿಮ್ಮ ಕಂಪ್ಯೂಟರ್ ಗೆ ವ್ಯಯಿಸುವ ವಿದ್ಯುತ್ ಬಿಲ್ ಬಿಟ್ ಕಾಯಿನ್ ನ ಮೌಲ್ಯಕ್ಕಿಂತ ಜಾಸ್ತಿಯಾದರೂ ಅಚ್ಚರಿಯಿಲ್ಲ. ಆದರೂ ಹೊಸ ತಲೆಮಾರಿನ ಜನರಿಗೆ ಬಿಟ್ ಕಾಯಿನ್ ಮೈನಿಂಗ್ ಅಚ್ಚು ಮೆಚ್ಚಿನ ಕೆಲಸ. ಒಂದೊಮ್ಮೆ ಒಬ್ಬ ಮೈನಿಂಗ್ ಮಾಡುವ ವ್ಯಕ್ತಿ ಕೊಟ್ಟ ಒಗಟನ್ನು ಬಿಡಿಸಿದನೆಂದರೆ ಅವನಿಗೆ ಪ್ರತಿಯಾಗಿ ಹೊಸ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಅಂದರೆ ಅದರಿಂದಾಗಿ ಹೊಸ ನಾಣ್ಯಗಳು ಚಲಾವಣೆಗೆ ಬರುತ್ತವೆ.
ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಬಹುದೇ?
ನಮ್ಮ ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರಗಳ ಮೇಲೆ ಸದ್ಯಕ್ಕೆ ನಿಷೇಧ ಹೇರಲಾಗಿದೆ. ಆದರೆ ಅಮೇರಿಕಾ ಮುಂತಾದ ಮುಂದುವರಿದ ದೇಶಗಳಲ್ಲಿ ಬಿಟ್ ಕಾಯಿನ್ ವ್ಯವಹಾರ ಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಸರಕಾರಿ ನಿರ್ಭಂಧಿತ ನಗದು ವ್ಯವಹಾರಗಳಿಗೆ ಸಮಾನಾಂತರವಾಗಿ ಈ ಡಿಜಿಟಲ್ ಕರೆನ್ಸಿಯ ವ್ಯವಹಾರ ನಡೆಯುತ್ತದೆ. ಈ ಇಲೆಕ್ಟ್ರೋನಿಕ್ ಹಣ ಕೇವಲ ವಸ್ತುಗಳನ್ನು ಖರೀದಿಸಲಷ್ಟೇ ಅಲ್ಲದೇ ಹೂಡಿಕಾ ಸಾಮಾಗ್ರಿಯಾಗಿಯೂ ಬಳಸಲ್ಪಡುತ್ತಿದೆ. ಭಾರತದಲ್ಲಿ ಜನರು ಚಿನ್ನವನ್ನು ಹೇಗೆ ಹೂಡಿಕೆಗೂ ಉಪಯೋಗಿಸುತ್ತಾರೆಯೋ ಅದೇ ರೀತಿ. ಮಾರುಕಟ್ಟೆ ಬೆಲೆಗೆ ಚಿನ್ನವನ್ನು ಖರೀದಿಸಿ ಇರಿಸಿಕೊಳ್ಳುವಂತೆ ಬಿಟ್ ಕಾಯಿನ್ ಗಳನ್ನೂ ಬೆಲೆ ತೆತ್ತು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಮುಂದೆ ಅವುಗಳ ಬೆಲೆಯಲ್ಲಿ ಏರಿಕೆಯಾದಾಗ ಮಾರಾಟ ಮಾಡುತ್ತಾರೆ. ಇವುಗಳ ಟ್ರೇಡಿಂಗ್ ಮಾಡಲು ವ್ಯವಸ್ಥಿತವಾದ ಮಾರುಕಟ್ಟೆಯನ್ನೂ ಕಲ್ಪಿಸಿಕೊಡಲಾಗಿದೆ. ಅನೇಕ ದೇಶಗಳಲ್ಲಿ ಬಿಟ್ ಕಾಯಿನ್ ದಿನೇ ದಿನೇ ಪ್ರಸಿದ್ದಿ ಪಡೆಯುತ್ತಿದೆ. ಕ್ರಮೇಣ ನಮ್ಮ ದೇಶದಲ್ಲೂ ಇದಕ್ಕೆ ಮಾನ್ಯತೆ ಸಿಗುವ ನಿರೀಕ್ಷೆಯಿದೆ.

ಬಿಟ್ ಕಾಯಿನ್ ಬಗ್ಗೆ ಇರುವ ಅಪವಾದಗಳೇನು?
ಅನೇಕ ಹೂಡಿಕೆ ತಜ್ಞರು ಬಿಟ್ ಕಾಯಿನ್ ಗಳ ಬಗ್ಗೆ ಅಪಸ್ವರವೆತ್ತಿದ್ದಾರೆ. ಇವುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಅತೀ ಮುಖ್ಯವಾದ ಟೀಕೆಯೆಂದರೆ ಬಿಟ್ ಕಾಯಿನ್ ಗಳು ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿವೆಯೆಂದು. ಮುಖ್ಯವಾಗಿ ಭಾರತದಲ್ಲಿ ಇದೇ ಕಾರಣಕ್ಕಾಗಿ ನಿರ್ಭಂಧ ಹೇರಲಾಗಿದೆ. ಬಿಟ್ ಕಾಯಿನ್ ಗಳು ವ್ಯವಹಾರಗಳು ಜಾಗತಿಕ ಮಟ್ಟದಲ್ಲಿ ನಡೆಯುವುದರಿಂದ ಮತ್ತು ಇದಕ್ಕೆ ಯಾವುದೇ ಅಡೆ ತಡೆಗಳು ಕಾನೂನು ತೊಡಕುಗಳು ಇಲ್ಲದಿರುವುದರಿಂದ ಆತಂಕವಾದಿಗಳಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ಸುಲಭವಾಗಿ ಹಣ ಪಾವತಿ ಮಾಡಬಹುದು. ಇದರ ಬಳಿಕ ಇರುವ ಇನ್ನೊಂದು ಟೀಕೆಯೆಂದರೆ ಬಿಟ್ ಕಾಯಿನ್ ಗಳ ಮೌಲ್ಯದಲ್ಲಿ ಆಗುವ ಅನಿರೀಕ್ಷಿತ ಏರುಪೇರುಗಳು. ಇವು ನಂಬಲರ್ಹವಾದ ಸಂಪತ್ತಲ್ಲ. ಇವತ್ತು ಇರುವ ಬೆಲೆ ಇನ್ನೊಂದು ತಿಂಗಳು ಕಳೆದಾಗ ಇರುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಈ ಆತಂಕ ಇತ್ತೀಚಿನ ದಿನಗಳಲ್ಲಿ ದೂರವಾಗಿದೆ. ಯಾಕೆಂದರೆ ಇದರ ಬೆಲೆಯಲ್ಲಿ ಸತತವಾಗಿ ಏರಿಕೆಯಾಗುತ್ತಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.