ಮಗುವಿನ ಓದು, ಬರವಣಿಗೆಯಲ್ಲಿ ಅಸಹಜತೆ ಕಂಡುಬಂದರೆ ನಿರ್ಲಕ್ಷ್ಯಿಸಬೇಡಿ!

5

ಮಾನಸಿಕ ರೋಗಗಳಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಾ ಇದ್ದ ಹಾಗೇ ಕಂಡು ಬಂದ ಅಂಶವೇನೆಂದರೆ, ಮಕ್ಕಳಲ್ಲಿ ಕೂಡ ಬಹುವಿಧದ ರೀತಿಯ ಮಾನಸಿಕ, ಶೈಕ್ಷಣಿಕ ಸಮಸ್ಯೆಗಳು ಗೋಚರಿಸಬಹುದು ಎಂದು. ಅವುಗಳಲ್ಲಿ ಒಂದು `ನಿಶ್ಚಿತ ಕಲಿಕಾ ನ್ಯೂನತೆಗಳು’. ಅಂದರೆ, Specific Learning Disorders.

ಸಾಮಾನ್ಯವಾಗಿ ಮಗು ಓದುವಾಗ ಏನಾದರೂ ತಪ್ಪು ಮಾಡಿದರೆ, ಪುಸ್ತಕದಲ್ಲಿರುವ ಅಕ್ಷರಗಳನ್ನು ಗುರುತಿಸದೇ ಹೋದರೆ , ಬರೆಯುವಾಗ ಅಕ್ಷರಗಳನ್ನು ಹಿಂದೆ- ಮುಂದೆ ಬರೆದರೇ, ಓದುವಾಗ ಅಥವಾ ಬರೆಯುವಾಗ ಅಕ್ಷರಗಳನ್ನು ಬಿಟ್ಟರೇ ( ಅಥವಾ ಸೇರಿಸಿದರೆ) ಹೆತ್ತವರು ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಒಂದು ಸಾಮಾನ್ಯ ಸಂಗತಿ. ಮುಂದೆ ದೊಡ್ಡವರಾದ ನಂತರ ಎಲ್ಲವೂ ಸರಿಹೋಗುತ್ತದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿರುತ್ತದೆ. ಇದರಿಂದ ಯಾವುದೇ ತರಹದ ಮಾರ್ಗದರ್ಶನವಿಲ್ಲದೇ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾ, ಕೊನೆಗೆ ಮಗುವನ್ನು ಶಾಲೆಗೆ ಸೇರಿಸಿದಾಗ ಮಗುವಿನ ನ್ಯೂನತೆಗಳು ಬೆಳಕಿಗೆ ಬರುತ್ತವೆ. ಇದರ ನಂತರ ಪೋಷಕರಿಗೆ ಮಗುವಿನ ನಿಜವಾದ ಸಮಸ್ಯೆ ಬಗ್ಗೆ ತಿಳುವಳಿಕೆ ಬರುವುದು. ಸಮಸ್ಯೆ ಬಗ್ಗೆ ಅರಿವಾದ ಕೂಡಲೇ ಯಾವುದೇ ಆತಂಕಕ್ಕೆ, ಮುಜುಗರಕ್ಕೆ ಒಳಗಾಗದೇ ಮನೋವೈದ್ಯರಲ್ಲಿ ಕರೆದುಕೊಂಡು ಹೋಗಿ ಸಲಹೆ, ಚಿಕಿತ್ಸೆಯನ್ನು ಮಗುವಿಗೆ ಕೊಡಿಸಿದಾಗ ಮಗು ತನ್ನ ಸಮಸ್ಯೆಯಿಂದ ಹೊರಬರಲು ಅಥವಾ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ.


ಇದು ಬಿಟ್ಟು ಮಗುವನ್ನು ದೂಷಿಸುತ್ತಾ, ದೇವರು ಯಾಕಾಗಿ ನಮಗೆ ಇಂತಹ ಮಗುವನ್ನು ಕೊಟ್ಟಿದ್ದಾನೆ , ನಾವೇನು ಪಾಪ ಮಾಡಿದ್ದೇವೆ, ಅದೂ ಇದೂ ಎಂದು ಬಡಬಡಿಸುತ್ತಾ ಕುಳಿತುಕೊಂಡಲ್ಲಿ ನೇರವಾಗಿ ಇದು ಮಗುವಿನ ನೈತಿಕ ಸ್ಥೈರ್ಯವನ್ನು ಕಡಿಮೆಗೊಳಿಸುತ್ತಾ, ಭಾವನಾತ್ಮಕ ರೀತಿಯಲ್ಲಿ ಮಗುವಿನ ಮೇಲೆ ಪ್ರಭಾವ ಬೀರಿ ಅದರ ಭವಿಷ್ಯ ಕುಂಠಿತವಾಗುತ್ತದೆ.
ನಾನಾಗಲೇ ಹೇಳಿದಂತೆ ಕೆಲವೊಮ್ಮೆ ಮಕ್ಕಳು ಓದುವಾಗ, ಬರೆಯುವಾಗ ಒಂದು ಅಕ್ಷರವನ್ನು ನುಂಗಬಹುದು ಅಥವಾ ಸೇರಿಸಬಹುದು. ಕೆಲವು ಮಕ್ಕಳು ಅಕ್ಷರಗಳನ್ನು ಹಿಂದೆ ಮುಂದೆ ಬರೆಯುವುದುಂಟು. ಉದಾ: `z’ ನ್ನು ಉಲ್ಟಾ ಬರೆಯುವುದು, ‘ಪ’ ಅಕ್ಷರವನ್ನು ಉಲ್ಟಾ ಬರೆಯಬಹುದು. ಬರೆಯುವಾಗ ಕೆಲವೊಂದು ಅಕ್ಷರಗಳನ್ನು ಬಿಡಬಹುದು. ಹೀಗಾದಲ್ಲಿ ಅವರಿಗೆ ಅಕ್ಷರ ಜೋಡಣೆಯ ಮತ್ತು ಶಬ್ಧಗಳ ಜೋಡಣೆಯಲ್ಲೂ ತೊಂದರೆಯನ್ನು ಅನುಭವಿಸುತ್ತಾರೆ. ಇದನ್ನು ಓದು ಮತ್ತು ಬರವಣಿಗೆಯ ನ್ಯೂನತೆ ಅಂದರೆ Dyslexia ಎಂದು ಕರೆಯುತ್ತಾರೆ.


ಇನ್ನು ಕೆಲವೊಮ್ಮೆ ( ಹೆಚ್ಚಾಗಿ) ಗಣಿತ ವಿಷಯದಲ್ಲಿ ಮಾತ್ರ ಕೆಲವು ನ್ಯೂನತೆಗಳನ್ನು ಕಾಣಬಹುದು. ಇವರಿಗೆ ಗಣಿತದಲ್ಲಿ ಬರುವ ಸಂಜ್ಞೆಗಳು ಮತ್ತು ಸಂಕೇತಗಳು ಅರ್ಥವಾಗದೇ ಉಳಿಯುತ್ತವೆ. ಕೆಲವೊಂದು ಸಂಖ್ಯೆಗಳನ್ನು ಗುರುತಿಸುವುದು ಕಷ್ಟಸಾಧ್ಯ ಎನಿಸುತ್ತದೆ. ಕೆಲವೊಂದು ಸಂಖ್ಯೆಗಳನ್ನು ಕೂಡುವಲ್ಲಿ ಕಳೆಯುತ್ತಾರೆ, ಗುಣಿಸುವಲ್ಲಿ ಭಾಗಿಸುತ್ತಾರೆ. ಸಂಖ್ಯೆಗಳನ್ನು ಜೋಡಿಸುವಲ್ಲಿ, ವಿಂಗಡಿಸುವಲ್ಲಿ ಅಸಫಲರಾಗಿರುತ್ತಾರೆ. ಇದನ್ನು ಗಣಿತದ ನ್ಯೂನತೆ ಎನ್ನುತ್ತಾರೆ. ಒಟ್ಟಾರೆಯಾಗಿ, ಇವನ್ನೆಲ್ಲಾ ನಿಶ್ಚಿತ ಕಲಿಕಾ ನ್ಯೂನತೆಗಳೆಂದು ಹೇಳುವರು(Specific Learning Disorders- SLD )


ಇವರಲ್ಲಿ ಹೆಚ್ಚಿನ ಮಕ್ಕಳು ತಮ್ಮ ವಯಸ್ಸಿಗೆ ತಕ್ಕುದಾದ ಸರಾಸರಿ ಬುದ್ದಿವಂತಿಕೆಯನ್ನು ಹೊಂದಿರುತ್ತಾರೆ. ಕೆಲವು ವರದಿಗಳ ಪ್ರಕಾರ, ಮೆದುಳಿನ ನಿಶ್ಚಿತ ಕಲಿಕಾ ಕೇಂದ್ರಗಳಿಗೆ ಆಘಾತವಾದಾಗ ಈ ವಿವಿಧ ನ್ಯೂನತೆಗಳು ಉಂಟಾಗುತ್ತವೆ. ಮಗುವಿನ ಜನನದ ಸಂದರ್ಭದಲ್ಲಿ ಮೆದುಳಿಗೆ ಆಗುವ ಆಘಾತಗಳು ಇದಕ್ಕೆ ಕಾರಣವಿರಬಹುದು. ಕ್ರಿಯಾತ್ಮಕ ನೆನಪಿನ ಶಕ್ತಿಯಲ್ಲಿ (working memory) ವ್ಯತ್ಯಯಗಳು ಕಂಡುಬಂದಾಗಲೂ ಈ ಸಮಸ್ಯೆಗಳು ಬರುತ್ತವೆ ಎಂಬುದರ ಬಗ್ಗೆಯೂ ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳ ಸಂಶೋಧನೆಗಳ ಪ್ರಕಾರ ವಂಶವಾಹಿಯ ಒಂದು ಕಾರಣಗಳನ್ನೂ ಈ ರೋಗ ಕಂಡುಕೊಂಡಿದೆ.

ಈ ಕಾರಣಗಳು ಏನಿದ್ದರೂ, ಪೋಷಕರು ಮತ್ತು ಶಿಕ್ಷಕರು ಈ ನ್ಯೂನತೆಗಳನ್ನು ಗುರುತಿಸುವುದು ಮುಖ್ಯವಾಗುತ್ತದೆ. ತಮ್ಮ ಮಗುವಿಗೆ ಎಲ್ಲಾ ಜ್ಞಾನವಿದ್ದರೂ ಈ ತರಹದ ತಪ್ಪುಗಳನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದಾರೆ ಅಂದುಕೊಂಡು ಮಕ್ಕಳನ್ನು ದಂಡಿಸಿ , ಬೈದು, ಹೀಯಾಳಿಸಿ ಶಿಕ್ಷಿಸುವವರೇ ಹೆಚ್ಚು. ಇದರಿಂದ ಮಗುವಿನಲ್ಲಿ ಕೀಳರಿಮೆ, ಆತಂಕ, ಆತ್ಮವಿಶ್ವಾಸದ ಕೊರತೆಯು ಕಾಣುವುದು. ಅಲ್ಲದೇ ವ್ಯಾಸಂಗದಲ್ಲಿ ಮತ್ತಷ್ಟು ಹಿಂದೆ ಉಳಿಯುವ ಸಾಧ್ಯತೆಗಳಿವೆ.
ಚಿಕಿತ್ಸೆಯಲ್ಲಿ ಹೆಚ್ಚಾಗಿ ಪ್ರಾಯೋಗಿಕ ಅಂಶಗಳನ್ನೇ ಇಲ್ಲಿ ಬಳಸುತ್ತಾರೆ. ಉದಾ: ಮಗುವಿಗೆ ತಾನು ಎಲ್ಲಿ, ಯಾವ ಅಕ್ಷರದ ಬಳಕೆಯನ್ನು ತಪ್ಪಾಗಿ ಮಾಡುತ್ತಿದ್ದೇನೆ ಎಂಬುದರ ಅರಿವನ್ನು ಕೊಡುವುದು, ಇದರೊಂದಿಗೆ ಗಣಿತಕ್ಕೆ ಸಂಬಂಧಪಟ್ಟ ಹಾಗೆ ಸಂಜ್ಞೆಗಳು ಹಾಗೂ ಸಂಖ್ಯೆಗಳು ಮತ್ತು ಸಂಕೇತಗಳ ಬಗ್ಗೆ ಪಟ್ಟಿ ಮಾಡಿ ಅವುಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ಕೊಟ್ಟು ಅವುಗಳ ಬಳಕೆಯ ಬಗ್ಗೆ ಮತ್ತಷ್ಟು ಪ್ರೇರಣೆಯನ್ನು ಮಕ್ಕಳಲ್ಲಿ ತುಂಬುವುದು ಇತ್ಯಾದಿ.

ಈ ಮಕ್ಕಳಲ್ಲಿ ಏಕಾಗ್ರತೆಯ ಕೊರತೆಯೂ ಕೆಲವೊಮ್ಮೆ ಕಂಡುಬರುವುದುಂಟು. ಆದ್ದರಿಂದ ಏಕಾಗ್ರತೆಯನ್ನು ಹೆಚ್ಚಿಸುವಂತಹ ಕ್ರಿಯೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ಹಾಗೂ ಅವರಲ್ಲಿರುವ ಆತಂಕ, ಕೀಳರಿಮೆಗಳನ್ನು ಕಡಿಮೆಗೊಳಿಸುತ್ತಾ ಅವರ ವಿಶ್ವಾಸವನ್ನು ಗಟ್ಟಿಗೊಳಿಸುತ್ತಾ, ಮಗುವಿನ ನ್ಯೂನತೆಗಳನ್ನು ಮೀರಿ, ಪೋಷಕರು, ಶಿಕ್ಷಕರು ಹಾಗೂ ಮನಶಾಸ್ತ್ರಜ್ಞರುಗಳು ಸಂಪೂರ್ಣ ಸಹಕಾರವನ್ನು ನೀಡಿದಲ್ಲಿ ಮಾತ್ರ ಮಗುವಿಗೆ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯ.

ವಾಣಿಜ್ಯ ಜಾಹಿರಾತು

5 COMMENTS

  1. ಇವತ್ತು ಕೂಡಾ ಹೆಚ್ಚಿನವರಿಗೆ ಶಾಲಾ ಶಿಕ್ಷಕರು ಮತ್ತು ಪೋಷಕರಿಗೆ ಈ ಕಲಿಕಾ ನ್ಯೂನತೆಗಳ ಬಗ್ಗೆ ತಿಳಿದಿಲ್ಲಾ. ಹಾಗಾಗಿ ನಿಮ್ಮ ಪ್ರಯತ್ನ ಪಸ್ತುತ ಆಗಿದೆ…
    ಮುಂದೆಯೂ ಇಂತಹಾ ಬರಹ ಬರುತ್ತಿರಲಿ……

  2. ಶಿಕ್ಷಕರು ಮತ್ತು ಪೋಷಕರು ಓದಲೇ ಬೇಕಾದ ಲೇಖನ ಧನ್ಯವಾದಗಳು. ಶ್ರೀ ಜನ್ಯ.

  3. ಅತ್ಯುತ್ತಮವಾದ ವಿಷಯಗಳು ನಿಮ್ಮ ಬರವಣಿಗಯಲ್ಲಿ ಉಣಬಡಿಸುವುದಕ್ಕೆ ಧನ್ಯವಾದಗಳು… ನಿಮ್ಮ ಸಲಹಾ ರೀತಿಯ ಬರವಣಿಗೆ ಇನ್ನೂ ನಮಗೆ ದೊರಕಿಸಿಕೊಡಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.