ಸೌಂದರ್ಯ ಎಂಬುದು ಮುಖದಲ್ಲಿ ಮಾತ್ರವಲ್ಲ, ಉಗುರುಗಳಲ್ಲಿಯೂ ಇದೆ. ಆರೋಗ್ಯಕರವಾದ ಆಕರ್ಷಕ ಉಗುರುಗಳು ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯದ ವಿಷಯಕ್ಕೆ ಬಂದಾಗ ಹೆಣ್ಣುಮಕ್ಕಳು ಮುಖದ ಮೇಕಪ್, ತುಟಿಯ ಬಣ್ಣದ ಜತೆಗೆ ಉಗುರಿನ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಉಗುರಿಗೆ ಆಕರ್ಷಕ ಶೇಪ್ ನೀಡಿ, ಕಲರ್ ಕಲರ್ ನೈಲ್ ಪಾಲೀಶ್ ಹಾಕಿ ಉಗುರುಗಳು ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ.
ಆದರೆ ಉಗುರಿನ ಸೌಂದರ್ಯ ಹೆಚ್ಚಿಸುವ ನೈಲ್ ಪಾಲೀಶ್ ಹಚ್ಚುವ ರೀತಿಯಲ್ಲಿ ಎಡವಟ್ಟಾದರೆ ನೈಲ್ಸ್ ಸುಂದರವಾಗಿ ಕಾಣಿಸುವ ಬದಲು ಕೆಟ್ಟದಾಗಿ ಕಾಣಿಸಿಕೊಳ್ಳುವ ಸಾಧ್ಯೆತಯೂ ಇದೆ. ಹೀಗಾಗಿ ನೈಲ್ ಪಾಲೀಶ್ ಹಚ್ಚುವಾಗ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾದುದು ಅಗತ್ಯ.
ಉಗುರುಗಳಿಗೆ ನೈಲ್ ಪಾಲೀಶ್ ಹಚ್ಚುವುದು ಹೇಗೆ..?
ಉಗುರುಗಳಿಗೆ ಬಣ್ಣ ಹಚ್ಚುವ ಜಾಗರೂಕರಾಗಿರಬೇಕು. ಬಣ್ಣ ಉಗುರಿನಿಂದ ಹೊರ ಹೋಗದಂತೆ ಎಚ್ಚರವಹಿಸಬೇಕು. ಉಗುರಿನ ಎರಡೂ ಬದಿಗಳಲ್ಲಿ ಮೆತ್ತಿಕೊಂಡಿರುವ ಬಣ್ಣ ಉಗುರಿನ ಅಂದ ಕೆಡಿಸುವುದಲ್ಲದೆ, ಅಶಿಸ್ತನ್ನೂ ಸೂಚಿಸುತ್ತದೆ. ಉಗುರಿಗೆ ಬಣ್ಣ ಹಚ್ಚುವಾಗ ಮೊದಲಿಗೆ ಮಧ್ಯಮ ಬೆರಳಿಗೆ ಬಣ್ಣ ಹಚ್ಚಿ ನಂತರ ಅಕ್ಕ ಪಕ್ಕದ ಬೆರಳುಗಳಿಗೆ ಬಣ್ಣ ಹಚ್ಚಬೇಕು. ಈ ರೀತಿ ಮಾಡುವುದರಿಂದ ಒಂದು ಉಗುರಿಂದ ಇನ್ನೊಂದು ಉಗುರಿಗೆ ಬಣ್ಣ ಹರಡುವುದಿಲ್ಲ.
ನೈಲ್ ಪಾಲಿಶ್ ಹಚ್ಚುವುದು, ತೀರಾ ಕಷ್ಟ ಎಂದಾದರೆ ಉಗುರಿಗೆ ಬಣ್ಣ ಹಚ್ಚುವ ಮೊದಲೇ, ಉಗುರಿನ ಸುತ್ತ ಸ್ವಲ್ಪ ವ್ಯಾಸ್ಲೀನ್ ಲೋಶನ್ ಬಳಸಿಕೊಳ್ಳುವುದು ಉತ್ತಮ. ಇದರಿಂದ ಕಲರ್ ಉಗುರಿನಿಂದ ಹೊರಗಡೆ ಸ್ಪ್ರೆಡ್ ಆಗುವುದಿಲ್ಲ.
ಬೇಸ್ ಕೋಟ್ ಹಾಕುವುದು ಮುಖ್ಯ
ನೈಲ್ ಪಾಲಿಶ್ ಹಚ್ಚುವ ಮುನ್ನ ಬೇಸ್ ಕೋಟ್ ಹಾಕುವುದು ಮುಖ್ಯ. ಇದು ಉಗುರಿನಲ್ಲಿ ಬಣ್ಣದ ಕಲೆಗಳು ಉಳಿಯದಂತೆ ಅಥವಾ ಉಗುರು ಹಾಳಾಗದಂತೆ ತಡೆಯುತ್ತದೆ. ಕೆಮಿಕಲ್ ಉಪಯೋಗಿಸಿಯೇ ನೈಲ್ ಪಾಲಿಶ್ ಗಳನ್ನು ತಯಾರಿಸುತ್ತಾರೆ. ಹೀಗಾಗಿ ಇಂಥಹಾ ನೈಲ್ ಪಾಲೀಶ್ ನ್ನು ನೇರವಾಗಿ ಉಗುರಿಗೆ ಹಚ್ಚುವುದರಿಂದ ಉಗುರು ತನ್ನ ನೈಸರ್ಗಿಕ ಬಣ್ಣವನ್ನು ಕಳೆದುಕೊಳ್ಳುತ್ತದೆ. ಇನ್ನು, ಯಾವುದೇ ನೈಲ್ ಪಾಲಿಶ್ ಹಚ್ಚುವಾಗಲೂ ಕೋಟ್ ಗಳ ಬಗ್ಗೆ ಗಮನವಿರಲಿ. ಒಂದು ಸಲ ನೈಲ್ ಪಾಲಿಶ್ ಹಚ್ಚುವಾಗ ಇಡೀ ಉಗುರಿಗೆ ತಾಗಬೇಕು, ಅರ್ಧ ಬಿಟ್ಟು ಅರ್ಧ ಹಚ್ಚುವುದರಿಂದ ಪರ್ಫೆಕ್ಷನ್ ಹೋಗಿ ಬಿಡುತ್ತದೆ.
ಹೆಚ್ಚಿನವರು ನೈಲ್ ಪಾಲಿಶ್ ಹಚ್ಚುವುದು ಫಟಾಫಟ್ ಐದು ನಿಮಿಷದ ಕೆಲಸ ಎಂದು ಫಂಕ್ಷನ್ ಗೆ ಹೊರಡುವ ವೇಳೆ ಕೊನೆ ಘಳಿಗೆಯಲ್ಲಿ ನೈಲ್ ಪಾಲಿಶ್ ಹಚ್ಚುತ್ತಾರೆ. ಆದರೆ ಇದು ಸರಿಯಾಗಿ ಒಣಗದೆ, ಸ್ಪ್ರೆಡ್ ಆಗಿ ಉಗುರಿನ ಒಟ್ಟಾರೆ ಸೌಂದರ್ಯವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ತರಾತುರಿಯಲ್ಲಿ ನೈಲ್ ಪಾಲೀಶ್ ಹಚ್ಚುವುದರ ಬದಲು, ನಿಧಾನವಾಗಿ ನೈಲ್ ಪಾಲೀಶ್ ಹಚ್ಚುವುದು ಒಳ್ಳೆಯದು. ಉಗುರಿನ ಬಣ್ಣವನ್ನು ನೀಟಾಗಿ ಒಣಗಲು ಬಿಟ್ಟರೆ ಅದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಕೆಲವು ಕಲರ್ ಗಳು ಉಗುರಿನ ಮೇಲೆ ಡಲ್ ಆಗಿ ಕಾಣಿಸುತ್ತವೆ. ಹೀಗಾಗಿ ಇವುಗಳನ್ನು ಬಳಸುವ ಮುನ್ನ ಉಗುರಿಗೆ ತಿಳಿ ಅಥವಾ ಮೆಟಾಲಿಕ್ ಬಣ್ಣದ ಒಂದು ಕೋಟ್ ಹಚ್ಚಬೇಕು. ಬಳಿಕ ಒಂದು ನಿಮಿಷ ಬಿಟ್ಟು ಉಗುರಿಗೆ ಬಣ್ಣ ಹಚ್ಚಿದ ನಂತರ ಮತ್ತೊಂದು ಕೋಟ್ ಹಚ್ಚಬೇಕು. ಯಾವುದೇ ಬಣ್ಣದ ನೈಲ್ ಪಾಲೀಶ್ ಬಳಸುವ ಮುನ್ನ ಈ ವಿಧಾನವನ್ನು ಅನುಸರಿಸಿ. ನೈಲ್ ಪಾಲೀಶ್ ಹಚ್ಚುವಾಗ ಈ ಎಲ್ಲಾ ಟಿಪ್ಸ್ ಫಾಲೋ ಮಾಡುವುದರಿಂದ ಉಗುರು ಅತ್ಯಾಕರ್ಷಕವಾಗಿ ಎಲ್ಲರ ಗಮನ ಸೆಳೆಯುತ್ತದೆ.