ಹಿಂದಿನ ಸಂಚಿಕೆಯಲ್ಲಿ ರಾಮಯ್ಯ ಮೇಷ್ಟ್ರು ಕಂಪನಿಯೊಂದು ತಾನು ಗಳಿಸಿದ ಪ್ರಸಿದ್ದಿಯನ್ನು ನಗದೀಕರಿಸಿಕೊಳ್ಳಬಹುದು ಅಂತ ತಲೆಗೆ ಸಣ್ಣ ಹುಳ ಬಿಟ್ಟಿದ್ದರು. ಆ ಹುಳ ಈಗ ದೊಡ್ಡದಾಗಿ ತಲೆ ಕೊರೆಯಲು ಆರಂಬಿಸಿತ್ತು. ಮೇಷ್ಟ್ರ ಮಾತಿನ ಮರ್ಮವೇನೆಂದು ತಿಳಿಯುವ ಕುತೂಹಲ ನಿಮಗೂ ಇರಬಹುದು ಅಲ್ವಾ? ಮೇಷ್ಟ್ರು ಮತ್ತು ಇಬ್ಬರು ಗೆಳೆಯರ ಮಾತುಕತೆ ಮುಂದುವರಿಯುತ್ತಿದೆ.
“ನಾನು ಈ ಹಿಂದೆ ಹೇಳಿದಂತೆ ಷೇರುಮಾರುಕಟ್ಟೆಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಪ್ರೈಮರೀ ಮಾರುಕಟ್ಟೆ ಮತ್ತು ಸೆಕೆಂಡರೀ ಮಾರುಕಟ್ಟೆ ಅಂತ. ಸುಮ್ನೆ ನಿಮ್ಗೆ ನೆನಪಿರಲಿ ಅಂತ ಇನ್ನೊಂದು ಸಲ ಹೇಳ್ತಾ ಇದ್ದೀನಿ. ಪ್ರೈಮರೀ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಖಾಸಗೀ ಅಥವಾ ಸರಕಾರೀ ಒಡೆತನದ ಕಂಪನಿಯೊಂದು ತನ್ನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾರ್ವಜನಿಕ ಹೂಡಿಕೆದಾರರಿಗೆ ಮಾರಾಟ ಮಾಡುತ್ತದೆ. ಹೀಗೆ ಮಾಡಲು ಅನೇಕ ಕಾರಣಗಳಿದ್ದರೂ ಮುಖ್ಯವಾಗಿ ಎರಡು ಕಾರಣಗಳನ್ನು ನಾವು ಗಮನಿಸಲೇ ಬೇಕು.
ಒಂದನೆಯದು ಪ್ರಾಮಾಣಿಕ ಕಾರಣ. ಅದೇನೆಂದರೆ ಆ ಕಂಪನಿಯು ತನ್ನ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಬಂಡವಾಳ ಸಂಗ್ರಹಿಸಿಕೊಳ್ಳಲು. ನಿಮಗೆ ನೆನಪಿರಬಹುದು ಈಕ್ವಿಟಿ ಷೇರುಗಳಿಂದ ಕಂಪನಿಗಳಿಂದ ಕಡಿಮೆ ವೆಚ್ಚದಲ್ಲಿ ಬಂಡವಾಳ ಹೊಂದಿಸಬಹುದೆಂದು ನಾನು ಹೇಳಿದ್ದೆ. ಹೀಗೆ ಬಂಡವಾಳ ಸಂಗ್ರಹಿಸುವಾಗ ಕಂಪನಿಯು ತನ್ನ ಷೇರುಗಳಿಗೆ ಒಂದು ಮುಖಬೆಲೆಯನ್ನು ನಿಗದಿಪಡಿಸುತ್ತದೆ. ಸಾಮಾನ್ಯವಾಗಿ ಈ ಮುಖಬೆಲೆಯು ಅಷ್ಟೇನೂ ಹೆಚ್ಚಿರುವುದಿಲ್ಲ. ಹೆಚ್ಚಿನ ಕಂಪನಿಗಳ ಮುಖಬೆಲೆಯ ಹೆಚ್ಚಿನ ಕಂಪನಿಗಳ ಮುಖಬೆಲೆಯು ಹತ್ತು-ಇಪ್ಪತ್ತು ರುಪಾಯಿಗಳ ಒಳಗೆ ಇರುತ್ತದೆ. ಆದರೆ ಕಂಪನಿಗಳು ಮುಖಬೆಲೆಗೆ ಸಮನಾಗಿ ಷೇರುಗಳನ್ನು ಮಾರಾಟಮಾಡುವುದಿಲ್ಲ. ಬದಲಾಗಿ ತಮ್ಮ ತಮ್ಮ ಪ್ರಸಿದ್ದಿಗನುಗುಣವಾಗಿ ಮುಖಬೆಲೆಯನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಿಸಿ ಮಾರಾಟ ಮಾಡುತ್ತವೆ. ಇದನ್ನು ಪ್ರೀಮಿಯಂ ಬೆಲೆ ಎಂದು ಕರೆಯುತ್ತಾರೆ. ಹೀಗೆ ಪ್ರೀಮಿಯಂ ದರವನ್ನು ನಿಗದಿ ಮಾಡುವಾಗ ಕಂಪನಿಗಳು ಇನ್ನೊಂದು ತಂತ್ರ ಹೂಡುತ್ತವೆ. ಅದೇನೆಂದರೆ ಒಂದು ನಿರ್ಧಿಷ್ಟ ದರವನ್ನು ನಿಗದಿ ಮಾಡುವ ಬದಲಾಗಿ, ಕನಿಷ್ಠ ಮತ್ತು ಗರಿಷ್ಟ ದರಗಳ ಒಂದು ವ್ಯಾಪ್ತಿಯನ್ನು ನಿಗದಿ ಮಾಡುತ್ತವೆ. ಇದನ್ನು ಇಂಗ್ಲೀಷಿನಲ್ಲಿ ಫ್ಲೋರ್ ಪ್ರೈಸ್ ಮತ್ತು ಸೀಲಿಂಗ್ ಪ್ರೈಸ್ ಅಂತ ಕರಿಯುತ್ತಾರೆ. ಹೀಗೆ ಮಾಡುವುದರ ಮೂಲಕ ಕಂಪನಿಗಳು ತಾವು ನಿಗದಿ ಪಡಿಸಿದ ಕನಿಷ್ಠ ಮತ್ತು ಗರಿಷ್ಠ ದರಗಳ ವ್ಯಾಪ್ತಿಯೊಳಗೆ ಬಿಡ್ ಮಾಡುವ ಅವಕಾಶವನ್ನು ಹೂಡಿಕೆದಾರರಿಗೆ ನೀಡುತ್ತವೆ. ನಮ್ಮಲ್ಲಿ ವಸ್ತುಗಳನ್ನು ಏಲಂ ಮಾಡ್ತಾರಲ್ವಾ ಅದೇ ರೀತಿ. ಯಾರು ಗರಿಷ್ಟ ಬೆಲೆಯನ್ನು ಬಿಡ್ ಮಾಡ್ತಾನೋ ವಸ್ತು ಅವನಿಗೆ ಸೇರುತ್ತದೆ. ಆದ್ರೆ ಷೇರುಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಹೂಡಿಕೆದಾರರಿಗೆ ಬಿಡ್ ಮಾಡಲು ನಿರ್ದಿಷ್ಟ ಕಾಲಾವಕಾಶ ಕೊಡಲಾಗುತ್ತದೆ. ಕೆಲವು ಕಂಪನಿಗಳು ಮೂರು ದಿನಗಳ ಅವಕಾಶ ಕೊಟ್ಟರೆ ಇನ್ನು ಕೆಲವು ಕಂಪನಿಗಳು ಐದು ದಿನಗಳ ಅವಕಾಶ ಕೊಡುತ್ತವೆ. ಹೂಡಿಕೆದಾರರು ಈ ದಿನಾಂಕಗಳ ಒಳಗೆ ತಮ್ಮ ದರ ಮತ್ತು ತಮಗೆ ಬೇಕಾದ ಷೇರುಗಳ ಸಂಖ್ಯೆಯನ್ನು ನಮೂದಿಸಿ ಬಿಡ್ ಮಾಡಬಹುದು. ಇಲ್ಲಿ ಹೂಡಿಕೆದಾರರು ಅಂದರೆ ಕೇವಲ ವ್ಯಕ್ತಿಗಳು ಮಾತ್ರ ಅಲ್ಲ, ಬೇರೆ ಕಂಪನಿಗಳು, ವಿದೇಶಿ ಹೂಡಿಕೆದಾರರೂ ಸೇರುತ್ತಾರೆ. ನಿಗದಿತ ಕಾಲಾವಕಾಶ ಮುಗಿದ ಬಳಿಕ ಷೇರು ಮಾರುವ ಕಂಪನಿಯು , ಎಲ್ಲಾ ಬಿಡ್ಡುಗಳನ್ನು ಕ್ರೋಡೀಕರಿಸಿ ಯಾವ ಬೆಲೆಗೆ ಹೆಚ್ಚಿನ ಬಿಡ್ಡುಗಳು ಬಂದಿವೆ ಎಂದು ನೋಡುತ್ತದೆ. ಬಳಿಕ ಅಂತಿಮವಾದ ಒಂದು ದರವನ್ನು ನಿಗದಿಮಾಡುತ್ತವೆ. ಆ ಬೆಲೆಗೆ ಷೇರುಗಳನ್ನು ಮಾರಾಟಮಾಡಲಾಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಹೂಡಿಕೆದಾರರಿಗೆ ಬೇರೆ ಬೇರೆ ದರವನ್ನು ನಿಗದಿ ಮಾಡಲಾಗುತ್ತೆ. ಈ ಇಡೀ ಪ್ರಕ್ರಿಯೆಗೆ ಬುಕ್ ಬಿಲ್ಡಿಂಗ್ ಅಂತ ಕರಿಯುತ್ತಾರೆ. ಈ ಪ್ರಹಸನದ ಸಾರಾಂಶವೇನೆಂದರೆ ಷೇರು ಮಾರಾಟ ಮಾಡಲಿಚ್ಚಿಸುವ ಕಂಪನಿಯು ತೆರೆಮರೆಯಲ್ಲಿ ನಿಂತು ತನ್ನ ಷೇರುಗಳು ಯಾವ ಬೆಲೆಗೆ ಮಾರಾಟವಾಗಬಹುದು ಎಂದು ನೋಡುತ್ತಿರುತ್ತವೆ. ಕಂಪನಿಗೆ ವ್ಯವಹಾರ ಕ್ಷೇತ್ರದಲ್ಲಿ ಒಳ್ಳೆ ಹೆಸರಿದ್ರೆ ಹೆಚ್ಚು ಪ್ರೀಮಿಯಂ ಬೆಲೆ ಹಾಕಬಹುದು. ಜೊತೆಗೆ ಬೇರೆ ಕೆಲವು ಅಂಶಗಳನ್ನೂ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಕಂಪನಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಇರಬಹುದೇ, ಜಾಗತಿಕ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆಯೇ, ಇತ್ಯಾದಿ. ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು. ಬಿಡ್ ಮಾಡಿದವರಿಗೆಲ್ಲರಿಗೂ ಷೇರುಗಳು ಸಿಗುತ್ತವೆ ಅಂತ ಏನು ಗ್ಯಾರಂಟಿ ಇಲ್ಲ. ಹೆಚ್ಚು ಹೆಚ್ಚು ಸಂಖ್ಯೆಯ ಷೇರುಗಳಿಗೆ ಬಿಡ್ ಮಾಡಿದವರ ಸಂಖ್ಯೆ ಜಾಸ್ತಿ ಇದ್ದರೆ ಕಡಿಮೆ ಸಂಖ್ಯೆಯ ಷೇರುಗಳಿಗೆ ಬಿಡ್ ಮಾಡಿದವರಿಗೆ ಷೇರುಗಳು ಸಿಗೋ ಅವಕಾಶ ತುಂಬಾ ಕಡಿಮೆ. ಅಂತಿಮವಾಗಿ ಯಾರಿಗೆ ಎಷ್ಟು ಷೇರುಗಳನ್ನು ಕೊಡಬೇಕು ಅನ್ನುವುದು ಕಂಪನಿಯ ವಿವೇಚನೆಗೆ ಬಿಟ್ಟಿದ್ದು. ಹೀಗೆ ಷೇರುಗಳನ್ನು ಸಾರ್ವಜನಿಕ ಹೂಡಿಕೆದಾರರಿಗೆ ಮಾರಾಟ ಮಾಡುವ ವಿಧಾನವನ್ನು ಇನಿಷಿಯಲ್ ಪಬ್ಲಿಕ್ ಆಫರ್ ಅಂತ ಕರೆಯುತ್ತಾರೆ. ಚಿಕ್ಕದಾಗಿ ಇದನ್ನು ಐ.ಪಿ.ಒ ಅಂತಾನೂ ಕರಿಯುತ್ತಾರೆ. ನೀವು ನ್ಯೂಸ್ ಪೇಪರ್ನಲ್ಲಿ ಆಗಾಗ ಇದರ ಬಗ್ಗೆ ನೋಡಿರಬಹುದು. ಇದು ಷೇರುಗಳನ್ನು ಸಾರ್ವಜನಿಕರಿಗೆ ಮಾರುವ ಬಹುಮುಖ್ಯ ವಿಧಾನ. ಈ ಮೂಲಕ ಹೂಡಿಕೆದಾರನೊಬ್ಬ ಕಂಪೆನಿಯಿಂದಲೇ ನೇರವಾಗಿ ಷೇರುಗಳನ್ನು ಖರೀದಿ ಮಾಡಿಟ್ಟುಕೊಳ್ಳಬಹುದು”.
ಮೇಷ್ಟ್ರು ನಿರರ್ಗಳವಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು.
“ನಿಮಗೆ ಇದನ್ನು ಅರ್ಥ ಮಾಡಿಕೊಳ್ಳೋಕೆ ಸ್ವಲ್ಪ ಕಷ್ಟ ಆಗಬೋದು. ನಿಮಗೆ ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಸಲು ಪ್ರಯತ್ನಿಸುತ್ತೇನೆ”.
“ಇತ್ತೀಚಿಗೆ ರೋಸ್ಸರಿ ಬಯೋಟೆಕ್ ಅಂತ ಒಂದು ಖಾಸಗಿ ಕಂಪನಿ ತನ್ನ 1,16,82,033 ಷೇರುಗಳನ್ನು ಈಗ ಹೇಳಿದ ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಮೂಲಕ ಮಾರಾಟಮಾಡಲು ತೊಡಗಿತು. ಅಪೇಕ್ಷಿತ ಹೂಡಿಕೆದಾರರಿಗೆ ಬಿಡ್ ಮಾಡಲು ಮೂರು ದಿನಗಳ ಕಾಲಾವಕಾಶ ನೀಡಲಾಯಿತು. ಷೇರಿನ ಮುಖ ಬೆಲೆ ಕೇವಲ 2 ರೂಪಾಯಿ ಅಷ್ಟೇ. ಆದರೆ ಬಿಡ್ ಮಾಡಲು ನಿಗದಿಪಡಿಸಲಾಗಿದ್ದ ಕನಿಷ್ಠ ಬೆಲೆ 423 ರೂಪಾಯಿ ಮತ್ತು ಗರಿಷ್ಟ ಬೆಲೆ 425 ರೂಪಾಯಿ ಆಗಿತ್ತು. ಒಬ್ಬ ಹೂಡಿಕೆದಾರ ಕನಿಷ್ಠ 35 ಷೇರುಗಳಿಗೆ ಬಿಡ್ ಮಾಡ್ಬೇಕಿತ್ತು. ಇದನ್ನು ಲಾಟ್ ಸೈಜ್ ಅನ್ನುತ್ತಾರೆ. ಅಂದರೆ ನಿಮಗೆ 50 ಷೇರುಗಳು ಬೇಕೆಂದರೆ 50 ಷೇರುಗಳಿಗೆ ಬಿಡ್ ಮಾಡಲಾಗುವುದಿಲ್ಲ. ಕನಿಷ್ಠ 35, ನಂತರ 70 ತದನಂತರ 105 ಹೀಗೆ. ಈ ಕಂಪನಿಯಲ್ಲಿ ಒಬ್ಬ ಸಾಮಾನ್ಯ ಹೂಡಿಕೆದಾರ ಗರಿಷ್ಟ 13 ಲಾಟಗಳಿಗೆ ಬಿಡ್ ಮಾಡಲು ಅವಕಾಶ ಇತ್ತು. 13 ಲಾಟಗಳು ಅಂದರೆ ಒಟ್ಟು 455 ಷೇರುಗಳಿಗೆ ಬೇಡಿಕೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಕಂಪನಿಯ ಷೇರುಗಳಿಗೆ ಹೂಡಿಕೆದಾರರಿಂದ ಭಾರಿ ಬೇಡಿಕೆ ಬಂತು. ಒಂದು ಕೋಟಿ ಚಿಲ್ಲರೆ ಷೇರುಗಳನ್ನು ಮಾರಾಟಕ್ಕಿಟ್ಟಿದ್ದರೆ, ಅದರ 80 ಪಟ್ಟು ಅಧಿಕ ಷೇರುಗಳಿಗೆ ಬೇಡಿಕೆ ಇಟ್ಟಿದ್ದರು. ಅಂದರೆ 80 ಕೋಟಿ ಷೇರುಗಳಿಗೆ ಬೇಡಿಕೆ ಬಂತು. ಆದರೆ ಅಷ್ಟೊಂದು ಷೇರುಗಳನ್ನು ಮಾರಾಟಕ್ಕಿರಿಲಿಲ್ಲ ಅಲ್ವೇ. ಈಗ ಇರುವ ಒಂದು ಕೋಟಿ ಷೇರುಗಳನ್ನು ಅಷ್ಟೂ ಜನರಿಗೆ ಹಂಚಿಕೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಷೇರುಗಳಿಗೆ ಬೇಡಿಕೆ ಇಡುವ ದೊಡ್ಡ ದೊಡ್ಡ ಕುಳಗಳಿಗೆ ಮೊದಲು ಹಂಚಿಕೆ ಮಾಡಲಾಗುತ್ತೆ. ಉಳಿದವರಿಗೆ ನಂತರ. ಅತೀ ಕಡಿಮೆ ಅಂದರೆ ಒಂದೆರಡು ಲಾಟುಗಳಿಗೆ ಬೇಡಿಕೆ ಇಟ್ಟವರಿಗೆ ಏನೂ ಸಿಗಲಿಲ್ಲ. ಈ ಹಂಚಿಕೆ ಪ್ರಕ್ರಿಯೆಯನ್ನು ಪ್ರೊ-ರಾಟಾ ಹಂಚಿಕೆ ಅಂತ ಕರೆಯುತ್ತಾರೆ.”
“ಹೀಗೆ ಮಾಡುವುದರಿಗೆ ಅತ್ತ ಕಂಪನಿಗಳಿಗೂ ಬೇಕಾದ ಬಂಡವಾಳ ಸಿಗುತ್ತೆ. ಇತ್ತ ಹೂಡಿಕೆದಾರರಿಗೂ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ವೇದಿಕೆ ನಿರ್ಮಾಣವಾಗುತ್ತದೆ ಅಲ್ವ ಮೇಷ್ಟ್ರೇ..” ಶೇರಿಗೆ ಮೇಷ್ಟ್ರ ಉಪನ್ಯಾಸದ ಸಾರಾಂಶ ಅರ್ಥವಾಯಿತು.
“ಕರೆಕ್ಟ್ ನಿನ್ನ ಅಭಿಪ್ರಾಯ ಸರಿಯಾಗಿಯೇ ಇದೆ” ತನ್ನ ಉಪನ್ಯಾಸ ವ್ಯರ್ಥವಾಗಲಿಲ್ಲ ಎಂದು ರಾಮಯ್ಯ ಮೇಸ್ಟ್ರು ನಿಟ್ಟುಸಿರು ಬಿಟ್ಟರು.