ಮುಖದ ಕಾಂತಿ ಹೆಚ್ಚಿಸಲು, ಚರ್ಮದ ಹೊಳಪು ಹೆಚ್ಚಿಸಲು ಬ್ಯೂಟಿಪಾರ್ಲರ್‍ಗಳು ಹಲವು ಸ್ಕ್ರಬ್, ಮಾಸ್ಕ್ ಗಳನ್ನು ಬಳಸುತ್ತವೆ. ಆದರೆ ಇದರಲ್ಲಿ ಹೆಚ್ಚಿನ ಸ್ಕ್ರಬ್‍ಗಳು ಸಹ ಕೆಮಿಕಲ್ ಅಂಶಗಳನ್ನು ಒಳಗೊಂಡಿರುತ್ತವೆ. ಇಂಥಹಾ ಕೆಮಿಕಲ್ ಯುಕ್ತ ಸೌಂದರ್ಯ ಸಾಧನಗಳು ಚರ್ಮದ ತ್ವಚೆಗೆ ಒಳ್ಳೆಯದಲ್ಲ. ಹೀಗಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ತಯಾರಿಸಿದ ಸ್ಕ್ರಬ್ ಗಳನ್ನು ಬಳಸುವುದು ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಆರ್ಯುವೇದ ವಿಷಯಾಧಾರಿತ ಸ್ಕ್ರಬ್, ಫೇಸ್ ಮಾಸ್ಕ್ ಬಳಸುವುದು ಉತ್ತಮ.
ಇಂಥಹಾ ಸ್ಕ್ರಬ್‍ಗಳು ಸುಲಭವಾಗಿ ಮುಖಕ್ಕೆ ತಾಜಾತನ ನೀಡುತ್ತವೆ. ಈ ಫೇಸ್‍ಪ್ಯಾಕ್‍ನ್ನು ತಯಾರಿಸಲು ನಾವು ವಸ್ತುಗಳಿಗಾಗಿ ಹುಡುಕಾಡಬೇಕಾಗಿಲ್ಲ. ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡೇ ಈ ಸೌಂದರ್ಯ ಸಾಧನಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.
ಉದಾಹರಣೆಗೆ ಅರಿಶಿನ, ಜೇನು, ಸೌತೆಕಾಯಿ, ಟೊಮೆಟೋ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಹೀಗಾಗಿಯೇ ಇಂಥವುಗಳನ್ನು ಬಳಸಿಕೊಂಡೇ ಚರ್ಮದ ಆರೋಗ್ಯ ವೃದ್ಧಿಸುವ ಸೌಂದರ್ಯ ಸಾಧನಗಳನ್ನು ತಯಾರಿಸಲಾಗುತ್ತದೆ. ಕಿಚನ್‍ನಲ್ಲಿರುವ ಹಲವು ವಸ್ತುಗಳನ್ನು ಸೇರಿಸಿಕೊಂಡು ಫೇಸ್‍ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಬಹುದು. ಅದರಲ್ಲೊಂದು ಕಾಫಿ ಸ್ಕ್ರಬ್..
ಸಾಮಾನ್ಯವಾಗಿ ಟೀ, ಕಾಫಿ ಕುಡಿಯೋ ಅಭ್ಯಾಸ ಎಲ್ಲರಿಗೂ ಇರುತ್ತದೆ. ಹಾಗಾಗಿ ಮನೆಯಲ್ಲಿ ಈ ಪುಡಿಗಳು ಇದ್ದೇ ಇರುತ್ತವೆ. ಸಕ್ಕರೆ, ತೆಂಗಿನೆಣ್ಣೆ ಸಹ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಇವೆಲ್ಲವನ್ನೂ ಸೇರಿಸಿಕೊಂಡೇ ಕಾಫಿ ಸ್ಕ್ರಬ್‍ನ್ನು ತಯಾರಿಸಬಹುದು.
ಕಾಫಿ ಸ್ಕ್ರಬ್ ತಯಾರಿಸುವ ಬೇಕಾದ ಸಾಮಗ್ರಿಗಳು
1 ಸ್ಪೂನ್ ಕಾಫಿ ಪುಡಿ
1 ಸ್ಪೂನ್ ಸಕ್ಕರೆ
2 ಸ್ಪೂನ್ ತೆಂಗಿನೆಣ್ಣೆ
ಮಾಡುವ ವಿಧಾನ
ಒಂದು ಸಣ್ಣ ಪಾತ್ರೆಗೆ 1 ಸ್ಪೂನ್ ಕಾಫಿ ಪುಡಿ, 1 ಸ್ಪೂನ್ ಸಕ್ಕರೆ, 2 ಸ್ಪೂನ್ ತೆಂಗಿನೆಣ್ಣೆ ಸೇರಿಸಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಕಾಫಿ ಸ್ಕ್ರಬ್ ಪೇಸ್ಟ್‍ನಂತೆ ತಯಾರಾಗುತ್ತದೆ. ಇದನ್ನು ಮುಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ. 10 ನಿಮಿಷದ ಬಳಿಕ ತಣ್ಣೀರಿನಲ್ಲಿ ಕೈಯನ್ನು ನೀಟಾಗಿ ಒದ್ದೆ ಮಾಡಿಕೊಳ್ಳಿ.
ನಂತರ ಈ ಕಾಫಿ ಸ್ಕ್ರಬ್‍ನ್ನು ಮುಖಕ್ಕೆ, ಕೈಗೆ ಹಚ್ಚಿಕೊಂಡು 5-6 ನಿಮಿಷ ಕಾಲ ಸ್ಕ್ರಬ್ ಮಾಡಿ. ಕಾಲು ಗಂಟೆ ಹಾಗೇ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಇದು ಚರ್ಮದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು, ಚರ್ಮವು ನಯವಾಗಿ ಮುಖದ ಕಾಂತಿ ಹೆಚ್ಚುವುದು.
ಕಾಫಿ ಪೌಡರ್ ಫೇಶಿಯಲ್
ಕಾಫಿ ಪೌಡರ್‍ನ ಫೇಶಿಯಲ್ ಸಹ ಮುಖದ ಸೌಂದರ್ಯ ವೃದ್ಧಿಸಲು ಅತ್ಯುತ್ತಮ. ಕಾಫಿ ಪುಡಿ ಮತ್ತು ಅಲೋವೆರಾ ಬಳಸಿ ಈ ಕಾಫಿ ಫೇಶಿಯಲ್‍ನ್ನು ತಯಾರಿಸಬಹುದು. 1 ಸ್ಪೂನ್ ಕಾಫಿ ಪುಡಿಗೆ 1 ಚಮಚ ಅಲೋವೆರಾ ಜೆಲ್ ಹಾಕಿಕೊಳ್ಳಬೇಕು. ಇವೆರನ್ನು ಸಣ್ಣಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು.
10 ನಿಮಿಷದ ಬಳಿಕ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಬೇಕು. ಈ ರೀತಿ ಕಾಫಿ ಪುಡಿಯನ್ನು ಫೇಸ್ ಮಾಸ್ಕ್, ಸ್ಕ್ರಬ್ ನಲ್ಲಿ ಬಳಸುವ ಮೂಲಕ ಮನೆಯಲ್ಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.