ವಾಣಿಜ್ಯ ಜಾಹಿರಾತು

ಸೌಂದರ್ಯಕ್ಕೂ ಹೂವುಗಳಿಗೂ ಇನ್ನಿಲ್ಲದ ನಂಟಿದೆ. ನಮ್ಮ ಸುತ್ತಮುತ್ತ ಸಿಗುವ ಹಲವು ಹೂಗಳು ಸೌಂದರ್ಯವನ್ನು ವೃದ್ಧಿಸುವವುಗಳೇ ಆಗಿವೆ. ಅದರಲ್ಲೂ ಸೌಂದರ್ಯ ಸಾಧನಗಳಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಮಹತ್ವವಿದೆ. ಮುಖದ ತ್ವಚೆಯ ರಕ್ಷಣೆಗೆ ರೋಸ್ ವಾಟರ್ ನ್ನು ಮುಖ್ಯವಾಗಿ ಬಳಸಿಕೊಳ್ಳಲಾಗುತ್ತದೆ. ತ್ವಚೆಯನ್ನು ಕೋಮಲಗೊಳಿಸಲು ಹೆಚ್ಚಾಗಿ ರೋಸ್ ವಾಟರ್ ನ್ನು ಬಳಸುತ್ತಾರೆ. ಇದು ಚರ್ಮದಲ್ಲಿರುವ ಧೂಳನ್ನು ಹೋಗಲಾಡಿಸಿ ತ್ವಚೆಯನ್ನು ತಾಜಾಗೊಳಿಸುತ್ತದೆ.

ಹೀಗಾಗಿ ಸಾಮಾನ್ಯವಾಗಿ ಮುಖವನ್ನು ತಣ್ಣೀರಿನಲ್ಲಿ ತೊಳೆದ ನಂತರ ರೋಸ್ ವಾಟರ್ ನಲ್ಲಿ ಹತ್ತಿಯನ್ನು ಅದ್ದಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಮುಖದಲ್ಲಿ ಮೊಡವೆಗಳು ಉಂಟಾಗುವುದು ಕಡಿಮೆಯಾಗುತ್ತದೆ. ಮುಖದಲ್ಲಿರುವ ರಂಧ್ರಗಳು ಮುಚ್ಚುತ್ತವೆ. ಚರ್ಮದ ನೈಸರ್ಗಿಕ ಹೊಳಪನ್ನು ಸಹ ಇದು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರೋಸ್ ವಾಟರ್‍ ಗೆ ಸೌಂದರ್ಯ ಸಾಧನಗಳಲ್ಲಿ ಮುಖ್ಯವಾದ ಸ್ಥಾನವಿದೆ.

ಈ ರೀತಿ ಕೇವಲ ರೋಸ್ ವಾಟರ್ ಮಾತ್ರವಲ್ಲ, ರೋಸ್ ಆಯಿಲ್ ಕೂಡಾ ಸೌಂದರ್ಯ ವರ್ಧನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರೋಸ್ ವಾಟರ್ ಹೇಗೆ ನಮ್ಮ ತ್ವಚೆಯ ಸೌಂದರ್ಯಕ್ಕೆ ಒಳ್ಳೆಯದ್ದೋ, ಹಾಗೆಯೇ ರೋಸ್ ಆಯಿಲ್ ಕೂಡ ಮುಖದ ಕಾಂತಿಗೆ ಅತ್ಯಂತ ಪರಿಣಾಮಕಾರಿ.

ರೋಸ್ ಆಯಿಲ್‍ನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಲೆಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಮುಖದಲ್ಲಿರುವ ಡೆಡ್‍ಸ್ಕಿನ್ ಇಲ್ಲವಾಗಿ ಮುಖದ ಹೊಳಪು ಹೆಚ್ಚುತ್ತದೆ. ಅಲ್ಲದೆ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್‍ ನ್ನು ರೋಸ್ ಆಯಿಲ್ ಹೋಗಲಾಡಿಸುತ್ತದೆ. ರೋಸ್ ಆಯಿಲ್ ಬಳಕೆ ಮುಖ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಸೌಂದರ್ಯ ವರ್ಧನೆಗೆ ರೋಸ್ ಎಣ್ಣೆ ಎಲ್ಲಾ ರೀತಿಯಲ್ಲಿ ಉತ್ತಮ ಅನ್ನೋದೇನೋ ನಿಜ. ಆದರೆ ರೋಸ್ ಎಣ್ಣೆ ಸುಲಭವಾಗಿ ನಮಗೆ ಹೊರಗಡೆ ಸಿಗುವುದಿಲ್ಲ. ಹಾಗಿದ್ರೆ ಬನ್ನಿ ಮನೆಯಲ್ಲೇ ರೋಸ್ ಎಣ್ಣೆ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ..

ಬೇಕಾಗುವ ಸಾಮಗ್ರಿಗಳು

ಗುಲಾಬಿ ಹೂವಿನ ದಳಗಳು, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಕುಂಕುಮಾದಿ ತೈಲ ಬಳಸಿ ಈ ರೋಸ್ ಆಯಿಲ್‍ನ್ನು ತಯಾರಿಸಬಹುದು.

ಮಾಡುವ ವಿಧಾನ

ಗುಲಾಬಿ ಹೂಗಳನ್ನು ತೆಗೆದುಕೊಂಡು ದಳವನ್ನೆಲ್ಲಾ ಪ್ರತ್ಯೇಕಿಸಿ ತೊಳೆದು ಬಿಸಿಲಿನಲ್ಲಿ ಹರವಿ ಒಣಗಿಸಿಕೊಳ್ಳಬೇಕು. ನಂತರ ಗ್ಯಾಸ್ ಹಚ್ಚಿ ಅಗಲವಾದ ಬಾಯಿಯಿರುವ ಪಾತ್ರೆಯಲ್ಲಿ ಎರಡು ಗ್ಲಾಸ್ ನಷ್ಟು ನೀರನ್ನು ಕುದಿಯಲು ಇಡಬೇಕು. ನಂತರ ಬೇರೊಂದು ಸಣ್ಣ ಪಾತ್ರೆಯೊಳಗೆ ಗುಲಾಬಿ ದಳ ಹಾಗೂ ಮೂರರಿಂದ ನಾಲ್ಕು ಸ್ಪೂನ್‍ ತೆಂಗಿನೆಣ್ಣೆ, ಸ್ವಲ್ಪ ಬಾದಾಮಿ ಎಣ್ಣೆ ಹಾಗೂ ಸ್ವಲ್ಪ ಕುಂಕುಮಾದಿ ತೈಲ ಸೇರಿಸಿ ಇದನ್ನು ದೊಡ್ಡ ಪಾತ್ರೆಯ ಒಳಗಿಟ್ಟು ಮುಚ್ಚಬೇಕು.

ಐದು ನಿಮಿಷಗಳ ಬಳಿಕ ಚೆನ್ನಾಗಿ ಕುದಿದ ಬಳಿಕ ಪಾತ್ರೆಯನ್ನು ಕೆಳಗಿಸಬೇಕು. ಇನ್ನೊಂದು ಸಣ್ಣ ಪಾತ್ರೆಯ ಮೇಲೆ ಬಟ್ಟೆಯನ್ನು ಹರವಿ ಗುಲಾಬಿ ದಳಗಳನ್ನು ಕುದಿಸಿದ ಸಣ್ಣ ಪಾತ್ರೆಯಲ್ಲಿರುವ ಎಣ್ಣೆಯನ್ನು ಇದಕ್ಕೆ ಸೋಸಿಕೊಳ್ಲಬೇಕು. ಬಟ್ಟೆಯನ್ನು ಚೆನ್ನಾಗಿ ಹಿಂಡಿ ಎಲ್ಲಾ ಎಣ್ಣೆಯನ್ನು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಈ ಎಣ್ಣೆಯನ್ನು ಚೆನ್ನಾಗಿ ತೊಳೆದು ಒಣಗಿಸಿದ ಬಾಟಲಿಯಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳ ಹಾಕಿಡಬೇಕು. ಎರಡು-ಮೂರು ದಿನದ ಬಳಿಕ ಇದು ಬಳಸಲು ಸಿದ್ಧವಾಗುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.