ನಾಳೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಮೋದಕ, ಎಳ್ಳುಂಡೆ, ಚಕ್ಕುಲಿ, ಕಾಯಿಕಡುಬು ಮೊದಲಾದ ಭಕ್ಷ್ಯವನ್ನು ಮಾಡಿ ಉಣಬಡಿಸಲಾಗುತ್ತದೆ. ಅದರಲ್ಲೂ ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ಎಲ್ಲರ ಮನೆಯಲ್ಲೂ ತಯಾರಾಗುತ್ತದೆ.
ಮೋದಕವನ್ನು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ಹಬೆಯಲ್ಲಿ ಬೇಯಿಸಿ, ಎಣ್ಣೆಯಲ್ಲಿ ಕರಿದು ಈ ರೀತಿ ನಾನಾ ರೀತಿಯಲ್ಲಿ ಮೋದಕ ಸಿದ್ಧಪಡಿಸುತ್ತಾರೆ. ಹಾಗಿದ್ರೆ, ಸುಲಭವಾಗಿ ಮೋದಕ ತಯಾರಿಸುವುದು ಹೇಗೆ ತಿಳಿಯೋಣ.
ಎಣ್ಣೆಯಲ್ಲಿ ಕರಿದ ಮೋದಕ
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1 ಕಪ್, ಚಿರೋಟಿ ರವೆ – 1/4 ಕಪ್, ಕೊಬ್ಬರಿ ತುರಿ-1 ಕಪ್, ಬೆಲ್ಲ –1 ಅಚ್ಚು, ಉಪ್ಪು – ಚಿಟಿಕೆ, ಏಲಕ್ಕಿ ಪುಡಿ ಸ್ವಲ್ಪ. ಎಳ್ಳು –ಸ್ವಲ್ಪ, ಗೋಡಂಬಿ, ಬಾದಾಮಿ –ಸ್ಪಲ್ಪ, ಎಣ್ಣೆ –1 ಲೀಟರ್
ಮಾಡುವ ವಿಧಾನ:
- ಮೊದಲಿಗೆ ಒಂದು ಪಾತ್ರೆಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಕೊಬ್ಬರಿ ತುರಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
- ಸ್ಪಲ್ಪ ಹೊತ್ತಿನ ನಂತರ ಇದೇ ಪ್ಯಾನ್‍ಗೆ ಮೊದಲೇ ಸಿದ್ಧಪಡಿಸಿಟ್ಟುಕೊಂಡಿರುವ ಬೆಲ್ಲದ ನೀರನ್ನು ಮಿಕ್ಸ್ ಮಾಡಿಕೊಳ್ಳಬೇಕು.
- ಪ್ಯಾನ್‍ನಲ್ಲಿರುವ ಪಾಕ ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಅದಕ್ಕೆ ಏಲಕ್ಕಿ ಪುಡಿ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
- ಗ್ಯಾಸ್ ಆಫ್ ಮಾಡಿ ಸಿದ್ಧವಾದ ಹೂರಣ ತಣ್ಣಗಾಗಲು ಬಿಡಬೇಕು. ಈಗ ಕಲಸಿಟ್ಟ ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಯನ್ನಾಗಿ ಮಾಡಿ ಚಿಕ್ಕದಾಗಿ ಲಟ್ಟಿಸಿಕೊಳ್ಳಬೇಕು. ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಡಚಿಕೊಳ್ಳಬೇಕು. (ಈ ರೀತಿ ಮಡಚುವಾಗ ಹೂರಣ ಆಚೆ ಬಾರದಂತೆ, ಬೆಳ್ಳುಳ್ಳಿ ಆಕಾರದಲ್ಲಿ ನಿಧಾನವಾಗಿ ಮಡಚಿಕೊಳ್ಳಬೇಕು)
- ಹೀಗೆ ಸಿದ್ಧಪಡಿಸಿರುವುದನ್ನು ಎಣ್ಣೆಯಲ್ಲಿ ಹಾಕಿ ಕರಿದರೆ ರುಚಿ ರುಚಿಯಾದ ಮೋದಕ ಸವಿಯಲು ಸಿದ್ಧ.
ಹಬೆಯಲ್ಲಿ ಬೇಯಿಸಿದ ಮೋದಕ
ಬೇಕಾದ ಸಾಮಗ್ರಿಗಳು:
ಅಕ್ಕಿ ಹಿಟ್ಟು-1 ಕಪ್, ಕಾಯಿ ತುರಿ-1 ಕಪ್, ಬೆಲ್ಲದ ಪುಡಿ-1 ಕಪ್, ತುಪ್ಪ-2 ಚಮಚ, ಗಸಗಸೆ-1 ಚಮಚ, ಏಲಕ್ಕಿ ಪುಡಿ-ಸ್ವಲ್ಪ, ಉಪ್ಪು-1 ಚಿಟಿಕೆ.
ಮಾಡುವ ವಿಧಾನ:
- ಒಂದು ಲೋಟ ನೀರು ಬಿಸಿ ಮಾಡಿ ಅದಕ್ಕೆ ಉಪ್ಪು, ಅಕ್ಕಿ ಹಿಟ್ಟು ಮತ್ತು ತುಪ್ಪ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ತಿರುವಿ ಕುದಿಸಿಕೊಳ್ಳಬೇಕು. ಬಳಿಕ ಇದನ್ನು ಆರಲು ಬಿಡಬೇಕು.
- ಬಳಿಕ ಬೆಲ್ಲ ಮತ್ತು ಕಾಯಿ ತುರಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಬಾಡಿಸಿಕೊಳ್ಳಬೇಕು. ಈ ರೀತಿ ಹೂರಣ ಮಾಡಿ ಅದಕ್ಕೆ ಹುರಿದ ಗಸಗಸೆ ಮತ್ತು ಏಲಕ್ಕಿ ಪುಡಿ ಬೆರೆಸಿಕೊಳ್ಳಬೇಕು.
- ಸಿದ್ಧಪಡಿಸಿದ ಹಿಟ್ಟನ್ನು ಸಣ್ಣ ಉಂಡೆ ಮಾಡಿ ಕೈಯಲ್ಲಿ ತಟ್ಟಿ. ಅದರಲ್ಲಿ ಹೂರಣವಿಟ್ಟು ತುದಿ ಎಲ್ಲ ಸೇರಿಸಿ ಮುಚ್ಚಿ ಬಾಳೆ ಎಲೆ ಮೇಲಿಟ್ಟು ಹಬೆಯಲ್ಲಿ ಬೇಯಿಸಿಕೊಳ್ಳಬೇಕು.
- ಹಬೆಯಲ್ಲಿ ಬೇಯಿಸಿದ ಮೋದಕ ಸವಿಯಲು ಸಿದ್ಧವಾಗುತ್ತದೆ.