ಮಂಗಳೂರು: ಭಾಷಣದ ಸಂದರ್ಭದಲ್ಲಿ ಆಝಾನ್ ಕೇಳಿ ಬಂದಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾವೂರಿನಲ್ಲಿ ಭಾನುವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ‘ಮುಸ್ಲೀಮರ ಮತ ಬೇಕಾಗಿಲ್ಲ’ ಎಂದು ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ನಾನು ಎಲ್ಲ ಮುಸ್ಲಿಮರ ಮತ ಬೇಡ ಎಂದಿಲ್ಲ. ಪಿಎಫ್‌ಐ, ಎಸ್‌ಡಿಪಿಐ ಬೆಂಬಲಿಸುವ ಮುಸ್ಲಿಮರ ಕುರಿತಾಗಿ ಹೇಳಿದ್ದೇನೆ. ರಾಷ್ಟ್ರವಾದಿ ಮುಸ್ಲಿಮರು ನಮಗೇ ಬೆಂಬಲ ನೀಡುತ್ತಾರೆ. ನಾನು ಪ್ರತಿನಿಧಿಸುವ ಕ್ಷೇತ್ರದ 60ಕ್ಕೂ ಹೆಚ್ಚು ಬೂತ್‌ಗಳಲ್ಲಿ ಮುಸ್ಲಿಮರ 62 ಸಾವಿರ ಮತಗಳಿವೆ. ಹಿಂದಿನ ಚುನಾವಣೆಯಲ್ಲಿ ಅವರೊಬ್ಬರೂ ನನಗೆ ಮತ ಹಾಕಿರಲಿಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ಯಾವ ಮುಸ್ಲಿಮರ ಬಳಿಯೂ ನಾನು ಮತ ಕೇಳಿಲ್ಲ. ಆದರೂ 5 ಸಾವಿರಕ್ಕೂ ಅಧಿಕ ಮುಸ್ಲಿಮರು ನನಗೆ ಮತ ಹಾಕಿದ್ದಾರೆ. ಅವರಿಗೆ ಸವಲತ್ತು ಒದಗಿಸುವ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ ಎಂದರು.
ಆಜಾನ್ ನಿಷೇಧ ಕುರಿತ ಮಾತನಾಡುವಾಗ ಅಲ್ಲಾಹ್ ಅವರಿಗೆ ಕಿವಿ ಕೇಳಲ್ವಾ ಎಂದು ಕೇಳಿದ್ದು ಹೌದು. ಇದು ಧಾರ್ಮಿಕ ನಿಂದನೆ ಅಲ್ಲ. ಆಜಾನ್‌ಗೆ ಮೂರು ನಾಲ್ಕು ಧ್ವನಿವರ್ಧಕ ಬಳಸುವ ಮೂಲಕ ಮುಸ್ಲಿಮರೇ ಅವರ ದೇವರಿಗೆ ಅವಮಾನ ಮಾಡುತ್ತಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಆಜಾನ್‌ನಿಂದ ಸಮಸ್ಯೆ ಆಗುತ್ತದೆ ಎಂಬ ಭಾವನೆ ಜನರಲ್ಲಿದೆ. ಜನರ ಮನಸ್ಸಿನಲ್ಲಿರುವುದನ್ನು ನಾನು ವ್ಯಕ್ತಪಡಿಸಿದ್ದೇನಷ್ಟೇ. ಮುಸ್ಲಿಂ ನಾಯಕರು ಈ ಬಗ್ಗೆ ಚಿಂತನೆ ಮಾಡಬೇಕು’ ಎಂದು ತಿಳಿಸಿದರು.