ಮಂಗಳೂರು: ವಕ್ಫ್ ಆ್ಯಕ್ಟ್ ಉಲ್ಲಂಘಿಸಿ ಉಳ್ಳಾಲ ದರ್ಗಾದಲ್ಲಿ ಹೊಸ ಆಡಳಿತ ಸಮಿತಿ ರಚನೆ ಮಾಡಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ದರ್ಗಾದಲ್ಲಿ ಕಾನೂನು ಬಾಹಿರವಾಗಿ ಚುನಾವಣೆ ನಡೆದಿದೆ. ನ್ಯಾಯಾಲಯದಲ್ಲಿ ದಾವೆ ಇದ್ದರೂ ಅದು ಇತ್ಯರ್ಥ ಆಗುವ ಮೊದಲೇ ಚುನಾವಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಬೀಗ ಮುರಿದು ಕಚೇರಿಯ ಒಳ ಹೋಗಿ ಸಭೆ ನಡೆಸಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿ ಕೊಂಡಿಲ್ಲ. ಎರಡು ಗುಂಪುಗಳ ಮೇಲಾಟ ದಿಂದ ದರ್ಗಾದಲ್ಲಿ ಕಾನೂನು ಬಾಹಿರವಾದ ಚುನಾವಣೆ ನಡೆದಿದೆ. ನಮ್ಮ ಆಡಳಿತ ಸಮಿತಿ ಇಂತಹ ಗುಂಪು, ಸಂಘಟನೆಗಳ ಪ್ರಭಾವಕ್ಕೆ ಒಳಗಾಗದೆ ಸೌಹಾರ್ದಯುತವಾಗಿ ಆಡಳಿತ ನಡೆಸುತ್ತಾ ಬಂದಿದೆ. ಈಗಿನ ಬೆಳವಣಿಗೆಗಳಿಂದ ಸಂಘರ್ಷದ ಸ್ಥಿತಿ ಉಂಟಾಗಿದೆ. ಇದರ ಹಿಂದೆ ವಕ್ಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಅವರ ಒತ್ತಡ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಇದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಯು.ಕೆ.ಇಲ್ಯಾಸ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸದಸ್ಯರಾದ ಫಾರೂಕ್ ಉಳ್ಳಾಲ್, ಕೆ.ಎನ್. ಮಹಮ್ಮದ್ ಹಾಜರಿದ್ದರು.