ವಾಣಿಜ್ಯ ಜಾಹಿರಾತು

ಕೊರೊನ ದೃಢಪಟ್ಟ ಅನೇಕರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಆಗಬೇಕಾದ ಪ್ರಮೇಯ ಕೊರೊನ ಎರಡನೇ ಅಲೆಯಲ್ಲಿ ಜಾಸ್ತಿ ಕಂಡುಬಂದಿದೆ ಎಂದು ಅಧ್ಯಯನ ವರದಿಯೊಂದು ಹೇಳುತ್ತಿದೆ. ಉಸಿರಾಟದ ಸಮಸ್ಯೆಯ ವಿರುದ್ಧ ಹೋರಾಡಲು ಆಸ್ಪತ್ರೆ ಗಳಲ್ಲಿ ಕೃತಕ ಆಮ್ಲಜನಕದ ವ್ಯವಸ್ಥೆ ಇರುತ್ತದೆ. ದೇಶದಲ್ಲಿ ಆಮ್ಲಜನಕದ ಲಭ್ಯತೆ ಕುರಿತಂತೆ ಸದ್ಯಕ್ಕೆ ಹೊರಬರುತ್ತಿರುವ ಮಾಹಿತಿ  ಬಹಳಷ್ಟು ಆತಂಕಕಾರಿಯಾಗಿದೆ. ದೇಶದ ಉತ್ತರದ ರಾಜ್ಯಗಳಲ್ಲಿ ಈಗಾಗಲೇ ಕೊರೊನ ರೋಗಿಗಳ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆ ಕಂಡುಬಂದಿದ್ದು ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯುಂಟಾಗಿ ರೋಗಿಗಳು ಉಸಿರು ತೊರೆದಿರುವ ಘಟನೆಗಳು ವರದಿಯಾಗಿವೆ. ದೆಹಲಿ ಹೈಕೋರ್ಟು ಈಗಾಗಲೇ ಕೇಂದ್ರ ಸರಕಾರವನ್ನು ಈ ಕುರಿತು ತರಾಟೆಗೆ ತೆಗೆದುಕೊಂಡಿದ್ದು , ಜನರಿಗೆ ಬದುಕುವ ಹಕ್ಕಿದೆ , ಸೂಕ್ತ ವ್ಯವಸ್ಥೆ ಕಲ್ಪಿಸಿ ಜನರ ಹಕ್ಕನ್ನು ಕಾಪಾಡಿ ಎಂದು ಸರಕಾರಕ್ಕೆ ತಾಕೀತು ಮಾಡಿದೆ.

ಆಮ್ಲಜನಕದ ಸಂಗ್ರಹ ಪ್ರಮಾಣ,ಸರಬರಾಜು ಮತ್ತು ನಿರ್ವಹಣೆ

ಆಸ್ಪತ್ರೆಗಳಲ್ಲಿ ಜೀವ ಉಳಿಸಲು ಬಳಸುವ ಆಮ್ಲಜನಕದ ಶೇಖರಣೆ ಕಾರ್ಯ  ‘ಏರ್ ಸಪರೇಷನ್ ಯೂನಿಟ್’ ಗಳಲ್ಲಿ ನಡೆಯುವುದು. ನಾವು ನೀವು ಉಸಿರಾಡಲು ಬಳಸುವ ಗಾಳಿಯನ್ನೇ ಸಂಸ್ಕರಿಸಿ ಪ್ರಾಣ ಉಳಿಸಲು ಬೇಕಾದ ‘ಶುದ್ಧ ಆಮ್ಲಜನಕ’ವನ್ನು ಸಿಲಿಂಡರ್ ಗಳ ಮೂಲಕ ಶೇಖರಿಸಿಡಲಾಗುತ್ತದೆ. ಹೀಗೆ ಸಂಗ್ರಹವಾದ ಆಮ್ಲಜನಕವನ್ನು ಸಾಗಣಾ ವೆಚ್ಚ ಮತ್ತು ನಿರ್ವಹಣಾ ಸಾಮರ್ಥ್ಯಕನುಗುಣವಾಗಿ ಪೈಪ್ ಲೈನ್ ಮುಖಾಂತರ ಇಲ್ಲವೇ ಸಿಲಿಂಡರ್ ಗಳ ಮೂಲಕ ಪೂರೈಕೆ ಮಾಡಲಾಗುತ್ತದೆ. ಈ ಆಮ್ಲಜನಕಕ್ಕೆ  ಕೇವಲ ಆಸ್ಪತ್ರೆಗಳಿಂದ ಮಾತ್ರವಲ್ಲದೆ ಉಕ್ಕಿನ ಕಾರ್ಖಾನೆ, ಪೆಟ್ರೋಲಿಯಂ ಕಾರ್ಖಾನೆ, ಔಷಧಿ ತಯಾರಿಕಾ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಒಂದು ವರದಿಯ ಪ್ರಕಾರ ವಿಶ್ವಮಟ್ಟದಲ್ಲಿ, ಶೇಖರಿಸಲ್ಪಟ್ಟ ಶುದ್ಧ ಆಮ್ಲಜನಕದ  ಸುಮಾರು ಐದು ಬಿಲಿಯನ್ ಡಾಲರ್ ಗಳ ವಾಣಿಜ್ಯ ವಹಿವಾಟು ನಡೆಯುತ್ತದೆ.

ಭಾರತದ ಆಮ್ಲಜನಕ ಶೇಖರಣೆ ಮಟ್ಟ ,ಪ್ರಸ್ತುತ ಬಿಕ್ಕಟ್ಟಿಗೆ ಕಾರಣಗಳು

ಭಾರತವು ದಿನವೊಂದಕ್ಕೆ 7000 ಮೆಟ್ರಿಕ್ ಟನ್ ಗಳಷ್ಟು ಆಮ್ಲಜನಕದ ಶೇಖರಣೆ ಮಾಡುತ್ತದೆ.ಸಾಮಾನ್ಯ ದಿನಗಳಲ್ಲಿ ಭಾರತದ ಬಳಕೆ ಸುಮಾರು 700 ಮೆಟ್ರಿಕ್ ಟನ್ ಗಳಷ್ಟೇ.ಆದರೆ ಕೊರೊನ ಬಂದು ವಕ್ಕರಿಸಿದಂದಿನಿಂದ ಆಮ್ಲಜನಕಕ್ಕೆ ಬೇಡಿಕೆ ಜಾಸ್ತಿಯಾಗಿ ದಿನವೊಂದಕ್ಕೆ 8000 ಮೆಟ್ರಿಕ್ ಟನ್ ಗಳ ಅಗತ್ಯ ಬಂದೊದಗಿದೆ ಎನ್ನಲಾಗಿದೆ. ಈ ಕೊರತೆಯನ್ನು ನೀಗಿಸಲು ಸರಕಾರವು ವಿದೇಶಗಳಿಂದ ಆಮ್ಲಜನಕದ ಆಮದು ಮಾಡಿಕೊಳ್ಳುವ ತೀರ್ಮಾನಕ್ಕೂ ಬಂದಿದೆ.

ಆಮ್ಲಜನಕ ಶೇಖರಿಸಲು ಸಿಲಿಂಡರ್ ಗಳ ಕೊರತೆ , ಸಾಗಿಸಲು ಟ್ಯಾಂಕರ್ ಗಳ ಅಲಭ್ಯತೆಯಿಂದಾಗಿ  ಆಮ್ಲಜನಕ ಕ್ಲಪ್ತ ಸಮಯಕ್ಕೆ ಆಸ್ಪತ್ರೆಗಳನ್ನು ತಲುಪದೇ ಅದೆಷ್ಟೋ ರೋಗಿಗಳು ಕೊನೆಯುಸಿರು ಎಳೆವ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ.ದೇಶದ ಅನೇಕ ರಾಜ್ಯಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳೇ ಇಲ್ಲದಿರುವಿದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.ಕರ್ನಾಟಕದಲ್ಲೂ ದಿನವೊಂದಕ್ಕೆ ಸುಮಾರು 1500 ಟನ್ ಗಳ ಬೇಡಿಕೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಸರಕಾರ ಈ ಬಗ್ಗೆ ಕ್ರಮಗಳನ್ನು ಕೈಗೊಂಡು ಘಟಕಗಳ ಸ್ಥಾಪನೆಗೆ ಇನ್ನಷ್ಟು ಉತ್ತೇಜನ ನೀಡಬೇಕಿದೆ.ಈಗಾಗಲೇ ಕೊರೊನ ಸಂಖ್ಯೆ ದಿನವೊಂದಕ್ಕೆ ಮೂರು ಲಕ್ಷದ ಗಡಿ ದಾಟಿದ್ದು ಆಮ್ಲಜನಕದ ಅಭಾವ ಇನ್ನಷ್ಟು ಸಾವು ನೋವುಗಳನ್ನು ಉಂಟುಮಾಡುವ ಸಾಧ್ಯತೆ ಇಲ್ಲವೆಂದಲ್ಲ.ಅಗತ್ಯವಿಲ್ಲದ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಮುಂದೂಡುವುದರ ಮೂಲಕ , ಸದಾ ವ್ಯಕ್ತಿ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ , ಮುಖಗವಸು ಧರಿಸುವುದರ ಮೂಲಕ ಕೊರೊನದ ಹರಡುವಿಕೆಯನ್ನು ತಡೆಯುವ ಜವಾಬ್ದಾರಿ ಮಾನವ ಜನಾಂಗದ ಮೇಲಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.