ನವ ದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಭಾರತದಲ್ಲಿನ ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಸ್ಥಾನಮಾನದ ಬಗ್ಗೆ ವಿಮರ್ಶಾತ್ಮಕ ಟೀಕೆಗಳನ್ನು ಮಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಭಾರತ ತೀವ್ರವಾಗಿ ತಿರುಗೇಟು ನೀಡಿದೆ.
ಈ ವೇದಿಕೆಯಿಂದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದತ್ತ ಗಮನ ಹರಿಸಿದ್ದು,ಯುದ್ಧವು ಪರಿಹಾರವಲ್ಲ. ಶಾಂತಿಯುತ ಮಾತುಕತೆಯಿಂದ ಮಾತ್ರ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿದ್ದರು. ಇದಕ್ಕೆ ಭಾರತ ದಿಟ್ಟ ಉತ್ತರ ನೀಡಿದ್ದು, ಪಾಕಿಸ್ತಾನದ ಪ್ರಧಾನಿ ತಮ್ಮ ದೇಶದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮರೆಮಾಚಲು ಈ ವೇದಿಕೆಯನ್ನು ಬಹಿರಂಗವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ನ ನೆರೆಹೊರೆಯ ದೇಶದೊಂದಿಗೆ ಶಾಂತಿಯನ್ನು ಬಯಸುವುದಾಗಿ ಹೇಳಿಕೊಳ್ಳುವ ದೇಶವು ಎಂದಿಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ ಹಾಗೂ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ಮೈಂಡ್‌ಗಳಿಗೆ ಆಶ್ರಯ ನೀಡುವುದಿಲ್ಲ ಎಂದು ಭಾರತ ಮಿಷನ್‌ನ ಮೊದಲ ಕಾರ್ಯದರ್ಶಿ ಮಿಜಿಟೊ ವಿನಿಟೊ ಹೇಳಿದ್ದಾರೆ.
ಭಾರತದ ವಿರುದ್ಧ ಟೀಕೆ ಮಾಡುವ ಮೊದಲು ಪಾಕಿಸ್ತಾನ ತನ್ನ ಕರಾಳ ವ್ಯವಹಾರಗಳನ್ನು ವಿವರಿಸಬೇಕು. ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ತಲೆ ಹಾಕುವ ಬದಲು ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ವಿನಿಟೊ ಪಾಕಿಸ್ತಾನಕ್ಕೆ ಸಲಹೆ ನೀಡಿದರು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮುಂದುವರೆದಿದ್ದು ಅಲ್ಪಸಂಖ್ಯಾತ ಸಮುದಾಯದ ಸಾವಿರಾರು ಯುವತಿಯರನ್ನು ಅಪಹರಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ, ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಕುಟುಂಬಗಳ ಹುಡುಗಿಯರನ್ನು ಬಲವಂತವಾಗಿ ಅಪಹರಿಸಿ, ಮದುವೆಯಾಗಿ ನಂತರ ಬಲವಂತವಾಗಿ ಮತಾಂತರಗೊಳಿಸಲಾಗುತ್ತದೆ. ಇದು ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಮೂಲಭೂತ ಸಭ್ಯತೆಯ ಬಗೆಗಿನ ಕಾಳಜಿಯ ವಿಷಯವಾಗಿದೆ ಎಂದು ವಿನಿಟೊ ವಿವರಿಸಿದರು.