ವಾಣಿಜ್ಯ ಜಾಹಿರಾತು

ಕಾರ್ಕಳ: ತಾಲೂಕಿನ ನಿಟ್ಟೆಯಲ್ಲಿ ಗ್ರಾಮೀಣ ಭಾರತದ ಏಕೈಕ ಸಾರ್ವಜನಿಕ ವಲಯದ MRF ಕೇಂದ್ರ
ಉದ್ಘಾಟನೆಗೆ ಸಿದ್ಧವಾಗಿದೆ.ಪ್ರತಿ ದಿನ 10 ಟನ್ ಸಾಮರ್ಥ್ಯದ ಘನ ತ್ಯಾಜ್ಯವನ್ನು , ಆಧುನಿಕ ರೀತಿಯಲ್ಲಿ, ಪರಸರಕ್ಕೆ ಹಾನಿಯಾಗದೇ, ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಏಕೈಕ MRF ಕೇಂದ್ರ-  (ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ) , ಉಡುಪಿ ಜಿಲ್ಲಾ ಪಂಚಾಯತ್ ಅನುಷ್ಠಾನ ಮಾಡುತ್ತಿರುವ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದಡಿಯಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಸಿದ್ದವಾಗಿದ್ದು, ಏಪ್ರಿಲ್ 3 ರಂದು ಕಾರ್ಯಾರಂಭ ಮಾಡಲಿದೆ.

ಈ ಕೇಂದ್ರವು ತ್ಯಾಜ್ಯದಿಂದ ಸುಮಾರು 90% ಕ್ಕಿಂತಲೂ ಅಧಿಕ ಸಂಪನ್ಮೂಲವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಮಾನವ ಸಂಪನ್ಮೂಲದ ಸಹಾಯದಿಂದ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಈ ಕೇಂದ್ರವು ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಪರಿಹಾರ ಒದಗಿಸಿ ಪರಿಸರದ ಸಂರಕ್ಷಣೆ ಗೆ ಮಹತ್ತರವಾದ ಕೊಡುಗೆ ನೀಡಬಲ್ಲದು.

ಯೋಜನೆಯ ಉದ್ದೇಶವೇನು?
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಿಮೆ ಮಾನವ ಸಂಪನ್ಮೂಲದ ಬಳಕೆಯಿಂದ ಉತ್ತಮ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸುವುದು.

ತ್ಯಾಜ್ಯವನ್ನು ಕೇಂದ್ರೀಕೃತವಾಗಿ ನಿರ್ವಹಣೆ ಮಾಡುವುದು. ಆ ಮೂಲಕ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ದಕ್ಷತೆಯಿಂದ ಜಾರಿಗೊಳಿಸುವುದು.

ತ್ಯಾಜ್ಯದಿಂದ ಅತೀ ಹೆಚ್ಚಿನ ಸಂಪನ್ಮೂಲವನ್ನು ಪಡೆಯುವುದು ಆ ಮೂಲಕ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡುವುದು.

ಸರಳ ಯಂತ್ರಗಳ ಬಳಕೆಯಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮಾನವ ಸಂಪನ್ಮೂಲದ ದಕ್ಷತೆ ಹೆಚ್ಚಿಸುವುದು.

ಸ್ವಚ್ಛ ಸಂಕೀರ್ಣದಲ್ಲಿ ಉತ್ಪತ್ತಿಯಾಗುವ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯಕ್ಕೆ ವಿಲೇವಾರಿ ಸವಾಲು ಹಾಗೂ ವೆಚ್ಚದಾಯಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಒದಗಿಸುವುದು

ತ್ಯಾಜ್ಯವನ್ನು ಅಧಿಕೃತ ಹಾಗೂ ಅಂತಿಮ ರಿಸೈಕ್ಲಿಂಗ್ ಕೇಂದ್ರಕ್ಕೆ ವಿಲೇವಾರಿ ಮಾಡುವುದು

ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಉತ್ತಮ ಸೌಲಭ್ಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷಾ ಸೌಲಭ್ಯ ಒದಗಿಸುವುದು

ತ್ಯಾಜ್ಯ ನಿರ್ವಹಣೆಗೆ ಕುರಿತಂತೆ ಉತ್ತಮವಾದ ದತ್ತಾಂಶ/ದಾಖಲೆಗಳ ನಿರ್ವಹಣೆ ಮಾಡುವುದು

ಮರುಬಳಕೆ ಮಾಡಲು ಸಾಧ್ಯವಿಲ್ಲದ ರಿಸೈಕಲಿಂಗ್ ಕಂಪನಿಗಳಿಗೆ ಕಚ್ಛಾವಸ್ತುಗಳಾಗಿ ಪೂರೈಕೆ ಮಾಡುವುದು

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಸರಕಾರ ಮಂಜೂರು ಮಾಡಿದ ಯೋಜನೆಯನ್ನು , ಜಿಲ್ಲಾ ಪಂಚಾಯತ್ ಉಡುಪಿ ಮೇಲ್ವಿಚಾರಣೆಯಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಲಾಗಿರುತ್ತದೆ. ಕಾರ್ಕಳ, ಉಡುಪಿ, ಕಾಪು, ಹೆಬ್ರಿಯ ಸುಮಾರು 42 ಗ್ರಾಮ ಪಂಚಾಯತ್ ಗಳು ಈ ಯೋಜನೆಗೆ ಒಳಪಡುತ್ತವೆ. ಈ ಯೋಜನೆ ಅನುಷ್ಠಾನಕ್ಕೆ ಸಾಹಸ್ ಜೀರೋ ವೇಸ್ಟ್ ಪ್ರೈವೇಟ್ ಲಿಮಿಟೆಡ್ ಇವರು ತಾಂತ್ರಿಕ ಮಾರ್ಗದರ್ಶನ ನೀಡಿದ್ದು, ಮಂಗಳ ರಿಸೋರ್ಟ್ ಮ್ಯಾನೇಜ್ ಮೆಂಟ್, ಮಂಗಳೂರು ಇವರು ಘಟಕದ ನಿರ್ವಹಣೆ ಮಾಡುತ್ತಿದ್ದಾರೆ.

ಕಾರ್ಯನಿರ್ವಹಣೆ?
ಯೋಜನೆ ವ್ಯಾಪ್ತಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಯಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ವಚ್ಛ ಸಂಕೀರ್ಣಕ್ಕೆ ತರಲಾಗುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ತ್ಯಾಜ್ಯವನ್ನು ತೂಕ ಮಾಡಿ ಪ್ಯಾಕ್ ಮಾಡಿ ಇಡಲಾಗುತ್ತದೆ. ಪ್ರತಿವಾರ ಎಮ್.ಆರ್.ಎಫ್ ಕೇಂದ್ರದ ತ್ಯಾಜ್ಯ ಸಂಗ್ರಹಣಾ ವಾಹನವು ಸ್ವಚ್ಛ ಸಂಕೀರ್ಣಗಳಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಎಮ್ .ಆರ್. ಎಫ್ ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಶೇಖರಿಸಲಾಗುತ್ತದೆ. ನಂತರ ಕ್ವನ್ವೆಯರ್ ಬೆಲ್ಟ್ ಸಹಾಯದಿಂದ ಸುಮಾರು 25 ರಿಂದ 30 ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುರ್ನಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.

ಘಟಕದಲ್ಲಿ 30 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 15 ಮಂದಿ ಕನ್ವೆಯರ್ ಲೈನ್ ನಲ್ಲಿ ತ್ಯಾಜ್ಯ ವಿಂಗಡಣೆಯನ್ನು ಮಾಡಲು ನಿಯೋಜಿಸಲಾಗಿದೆ. 4 ಮಂದಿ ಬೈಲಿಂಗ್ ಯಂತ್ರದ ನಿರ್ವಹಣೆಯನ್ನು ಮಾಡುತ್ತಾರೆ. ಒಬ್ಬರು ಲೆಕ್ಕಪತ್ರ ನಿರ್ವಹಣೆಯನ್ನು ಮಾಡುತ್ತಾರೆ, ಇಬ್ಬರು ಸೆಕ್ಯೂರಿಟ್ ಗಾರ್ಡ್ ಹಾಗೂ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿಗಳು ಇದ್ದಾರೆ. ಹಾಗೂ ಘಟಕದ ಮೇಲ್ವಿಚಾರಣೆಗೆ ಇಬ್ಬರು ಮೇಲ್ವಿಚಾರಕರಿದ್ದಾರೆ. ಒಬ್ಬರು ಡ್ರೈವರ್ ಹಾಗೂ ಇಬ್ಬರು ಲೋಡರ್ ಗಳು ಸ್ವಚ್ಛ ಸಂಕೀರ್ಣದಿಂದ ತ್ಯಾಜ್ಯವನ್ನು ಸಂಗ್ರಹಣೆ ಮಾಡುತ್ತಾರೆ.

ಎಫ್ ಆರ್ ಎಫ್ ಘಟಕವು 1000 ಚದರಅಡಿಯ ಕಟ್ಟಡವನ್ನು ಹೊಂದಿದ್ದು, ದಿನವೊಂದಕ್ಕೆ 10 ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿ ತ್ಯಾಜ್ಯ ಶೇಖರಣೆ, ವಿಂಗಡಣೆ ಹಾಗೂ ಬೈಲಿಂಗ್ ಮಾಡುವ ವಿಭಾಗಗಳಿದ್ದು, ಕಛೇರಿ, ಸಕ್ಯೂರಿಟಿ ರೂಮ್, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಸೌಲಭ್ಯವನ್ನು ಹೊಂದಿದೆ. ಕನ್ವೆಯರ್ ಬೆಲ್ಟ್, ಬೈಲಿಂಗ್ ಯಂತ್ರ, ಸ್ಟ್ಯಾಕರ್, ಫೈರ್ ಸೇಫ್ಟಿ ಸೌಲಭ್ಯ, ಜನರೇಟರ್, ಸಿಸಿ ಟಿ,ವಿ, 70 ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ಹಾಗೂ 7 ಟನ್ ಸಾಮರ್ಥ್ಯದ ಟ್ರಕ್ ಮುಂತಾದ ಸೌಲಭ್ಯಗಳಿವೆ.

ಈ ಯೋಜನೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಇಲ್ಲಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಬಿಡುಗಡೆಯಾದ ರೂ.250 ಲಕ್ಷ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. 8.32 ಹಾಗೂ 15 ನೇ ಹಣಕಾಸು ಯೋಜನೆಯಡಿ ರೂ. 28.35 ಗ್ರಾಮ ವಿಕಾಸ ಯೋಜನೆಯಡಿ ರೂ.10.00 ಲಕ್ಷ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ನ ಸ್ವಂತ ಅನುದಾನ ರೂ. 23.00 ಲಕ್ಷ ಅನುದಾನ ಸೇರಿ ಸುಮಾರು ರೂ.60.67 ಲಕ್ಷ ಇತರೇ ಅನುದಾನ ಬಳಸಿಕೊಳ್ಳಲಾಗಿದೆ.

ದೇಶದ ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗಿರುವ ಈ ಎಂ.ಆರ್. ಎಫ್ ಘಟಕದಿಂದ ನಿಟ್ಟೆ ವ್ಯಾಪ್ತಿಯಲ್ಲಿನ 42 ಗ್ರಾಮ ಪಂಚಾಯತ್ ಗಳ ಕಸ ವಿಲೇವಾರಿಗೆ ಪರಿಹಾರ ದೊರೆಯಲಿದೆ. ಈ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶಗಳನ್ನು ನೀಡಿದ್ದು, ಈ ಕೇಂದ್ರದ ಆರಂಭದಿಂದ ಗ್ರಾಮೀಣ ಭಾಗದ ತ್ಯಾಜ್ಯ ವಿಲೇವಾರಿ ಕುರಿತಂತೆ ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲೇ ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ನಿಟ್ಟೆ ಮಾತ್ರವಲ್ಲದೇ ಜಿಲ್ಲೆಯ 80 ಬಡಗಬೆಟ್ಟುನಲ್ಲಿ ಮಿನಿ ಎಂ.ಆರ್.ಎಫ್ ಘಟಕ ಸ್ಥಾಪನೆ ಕುರಿತಂತೆ ಈಗಾಗಲೇ ಡಿ.ಪಿ.ಆರ್ ತಯಾರಿಸಿ ರಾಜ್ಯಕ್ಕೆ ಕಳುಹಿಸಲಾಗಿದೆ. ಇನ್ನೂ 2 ಎಂ.ಆರ್.ಎಫ್ ಗೆ ಜಾಗ ಗುರುತಿಸಿದ್ದು, ಡಿ.ಪಿ.ಆರ್ ತಯಾರಾಗುತ್ತಿದೆ.- ಡಾ.ನವೀನ್ ಭಟ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉಡುಪಿ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.