ನವದೆಹಲಿ: ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಸ್ಟ್ಯಾನ್ ಸ್ವಾಮಿ ಮುಂಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸ್ಟ್ಯಾನ್ ಸ್ವಾಮಿ ನಿಧನಕ್ಕೆ ವಿರೋಧ ಪಕ್ಷಗಳು, ಸಾಮಾಜಿಕ ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ‘ಎನ್‍ಐಎ, ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ, ಬಿಜೆಪಿ ಮತ್ತು ನ್ಯಾಯಾಂಗವು ಸ್ಟ್ಯಾನ್ ಸ್ವಾಮಿಯನ್ನು ಕೊಲೆ ಮಾಡಿದೆ’ ಎಂದು ಟ್ವಿಟರ್ ನಲ್ಲಿ ಹಲವು ರಾಜಕೀಯ ಮುಖಂಡರು, ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟ್ಯಾನ್ ಸ್ವಾಮಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದರು. ವೈದ್ಯಕೀಯ ಕಾರಣಗಳಿಗಾಗಿ ಅವರು ಮಧ್ಯಂತರ ಜಾಮೀನುಗಾಗಿ ಕಾಯುತ್ತಿದ್ದರು. ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಜಾಮೀನು ಕೊಡಬಾರದು ಎಂದು ಎನ್‍ಐಎ ವಾದಿಸಿತ್ತು. ಸ್ಟ್ಯಾನ್ ಸ್ವಾಮಿ ಸಾವಿನ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಟ್ವಿಟರ್ ಹಾಗೂ ಫೇಸ್‍ಬುಕ್‍ನಲ್ಲಿ ಸ್ಟ್ಯಾನ್ ಸ್ವಾಮಿ ವಿಚಾರ ಟ್ರೆಂಡ್ ಆಗಿದೆ. ‘84 ವರ್ಷದ ಅನಾರೋಗ್ಯ ಪೀಡಿತ ವ್ಯಕ್ತಿಗೆ ಜಾಮೀನು ನೀಡುವುದನ್ನು ಎನ್‍ಐಎ ನಿರಾಕರಿಸುವ ಮೂಲಕ ಅವರನ್ನು ಕೊಂದಿದೆ.’ ಎಂದು ಟ್ವಿಟರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಸ್ಟ್ಯಾನ್ ಸ್ವಾಮಿ ಯಾರು..?
ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ ಸ್ಟ್ಯಾನ್ ಸ್ವಾಮಿ ಅವರು ಜೆಸ್ವಿತ್ ಸಂಸ್ಥೆಯ ಗುರುವಾಗಿ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು ಹನ್ನೊಂದು ಕಿಲೋ ಮೀಟರ್ ದೂರದ ನಾಮ್ ಕುಮ್ ಎಂಬಲ್ಲಿ ಆದಿವಾಸಿಗಳ ಹಕ್ಕುಸ್ಥಾಪನೆಯ ಕೆಲಸದಲ್ಲಿ ತೊಡಗಿದ್ದರು. ಸ್ಟಾನ್ ಸ್ವಾಮಿ ಬುಡಕಟ್ಟು ಹಕ್ಕುಗಳ ಕಾರ್ಯಕರ್ತರೂ ಆಗಿದ್ದರು.
ಎಲ್ಗಾರ್ ಪ್ರಕರಣವೇನು..?
ಎಲ್ಗಾರ್ ಪರಿಷತ್ ಪ್ರಕರಣವು ಡಿಸೆಂಬರ್ 31, 2017ರಂದು ಪುಣೆಯಲ್ಲಿ ನಡೆದ ಸಮಾವೇಶದಲ್ಲಿ ಕೆಲವು ಕಾರ್ಯಕರ್ತರು ಮಾಡಿದ ದ್ವೇಷಪೂರಿತ ಭಾಷಣಗಳಿಗೆ ಸಂಬಂಧಿಸಿದೆ. ಈ ಭಾಷಣದಿಂದಾಗಿ ಪಶ್ಚಿಮ ಮಹಾರಾಷ್ಟ್ರ ನಗರ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು. ಮಾವೋವಾದಿ ಸಂಪರ್ಕ ಹೊಂದಿರುವ ಜನರು ಈ ಸಮಾವೇಶವನ್ನು ಆಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಸ್ಟ್ಯಾನ್ ಸ್ವಾಮಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆಯು ಕಳೆದ ಅಕ್ಟೋಬರ್ 8ರಂದು ಅವರನ್ನು ಬಂಧಿಸಿ ಮುಂಬೈಗೆ ಕೊಂಡೊಯ್ಯಲಾಗಿತ್ತು. ಅವರು ಬಹಿಷ್ಕೃತ ಮಾವೋವಾದಿ ಸಂಘಟನೆಯೊಂದಿಗೆ ಕೈ ಜೋಡಿಸಿದ್ದಾರೆ ಅನ್ನೋದು ಪ್ರಮುಖ ಆರೋಪವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸ್ಟ್ಯಾನ್ ಸ್ವಾಮಿ ಸ್ವಾಮಿ 2020ರ ಅಕ್ಟೋಬರ್ ತಿಂಗಳಿನಿಂದ ಪೊಲೀಸರ ವಶದಲ್ಲಿದ್ದಾರೆ. ಅವರ ಬಿಡುಗಡೆಗೆ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಸಹ ನಡೆಸಿದ್ದವು.
Maharashtra | Bhima Koregaon accused Stan Swamy passes away in Mumbai's Bhadra Hospital, where he had been admitted. Details awaited.
— ANI (@ANI) July 5, 2021