90ರ ದಶಕದಲ್ಲಿ ಕಂಪ್ಯೂಟರ್ ಬಳಸಲು ಆರಂಭಿಸಿದವರಿಗೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅಂದರೆ ಗೊತ್ತಿರಲೇಬೇಕು. ಯಾಕೆಂದರೆ ಆ ವರ್ಷದಲ್ಲಿ ಇಂಟರ್ ನೆಟ್ ಬಳಸಿ ಸರ್ಚ್ ಮಾಡಲು ಆರಂಭಿಸಿದ್ದು ಇದೇ ಇಂಟರ್ ನೆಟ್ ಎಕ್ಸ್ ಪ್ಲೋರರ್ ನಿಂದ. ಆದರೆ, ಮುಂದಿನ ವರ್ಷದಿಂದ ಈ ಇಂಟರ್ ನೆಟ್ ಎಕ್ಸ್ ಪ್ಲೋರರ್ ಬರೀ ನೆನಪಾಗಿ ಉಳಿಯಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜೂನ್ 15, 2022ರಂದು ಇಂಟರ್ ನೆಟ್ ಎಕ್ಸ್ ಪ್ಲೋರರ್ ಅನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸತತ 26 ವರ್ಷಗಳ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಗಿದೆ.
1990ರ ದಶಕದಲ್ಲಿ ಬ್ರೌಸರ್ ಗಳ ಜಮಾನದಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್, ಪರ್ಸನಲ್ ಕಂಪ್ಯೂಟರ್ ವಿಭಾಗದಲ್ಲಿ ಪ್ರಾಬಲ್ಯವನ್ನು ಮೆರೆಯಬೇಕು ಎಂದು ನಿರ್ಧರಿಸಿದರು. ಅದರಂತೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅಭಿವೃದ್ಧಿಯನ್ನು 1994ರಲ್ಲಿ ಆರಂಭಿಸಿದ ಮೈಕ್ರೋಸಾಫ್ಟ್ ಸಂಸ್ಥೆ, 1995ರಲ್ಲಿ ವೆಬ್ ಬ್ರೌಸರ್ ಅನ್ನು ಬಿಡುಗಡೆ ಮಾಡಿತು.
ಈ ಇಂಟರ್ ನೆಟ್ ಎಕ್ಸ್ ಪ್ಲೋರರ್’ನ ವೆಬ್ ಬ್ರೌಸರ್‌ನ ಅಭಿವೃದ್ಧಿಯ ರೂವಾರಿ, ಥಾಮಸ್ ರೇರ್‌ಡಾನ್. ಇಂಟರ್ ನೆಟ್ ಎಕ್ಸ್ ಪ್ಲೋರರ್ 1.0 ವರ್ಷನ್ ಅನ್ನು ಥಾಮಸ್ ಸೇರಿ 6 ಜನರಿದ್ದ ತಂಡ ಜಗತ್ತಿಗೆ ಪರಿಚಯಿಸಿತು.
ಇಂಟರ್ ನೆಟ್ ಎಕ್ಸ್ ಪ್ಲೋರರ್ ಮೊದಲ ಆವೃತ್ತಿ ಹಲವು ನ್ಯೂನತೆಗಳನ್ನು ಹೊಂದಿತ್ತು. ಹೀಗಿದ್ದೂ ಮೈಕ್ರೋಸಾಫ್ಟ್ ತನ್ನ ಮಹತ್ವಾಕಾಂಕ್ಷೆಯ ವೆಬ್ ಬ್ರೌಸರ್‌ನ ಅಭಿವೃದ್ಧಿಯನ್ನು ನಿಲ್ಲಿಸಲಿಲ್ಲ. 1996ರಲ್ಲಿ ಎಕ್ಸ್ ಪ್ಲೋರರ್ 3.0 ಬಿಡುಗಡೆಯಾಯಿತು. ಈ ವೆಬ್ ಬ್ರೌಸರ್‌ನ ಎಲ್ಲೆಡೆ ಜನಪ್ರಿಯವಾಗಿ, ಇಂಟರ್ ನೆಟ್ ಬಳಕೆದಾರರ ಫೇವರಿಟ್ ಆಯಿತು. 4.0 ಬಿಡುಗಡೆಯಾಗುತ್ತಿದ್ದಂತೆ ಮೈಕ್ರೋಸಾಫ್ಟ್ ನ ಮೌಲ್ಯ ಗಗನಕ್ಕೇರಿತು.
2002ರ ವೇಳೆಗೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅಂತರ್ಜಾಲ ಮಾರುಕಟ್ಟೆಯನ್ನು ಶೇ.95ರಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ಆದರೆ, ಇಂಟರ್ ನೆಟ್ ಎಕ್ಸ್ ಪ್ಲೋರರ್ 6.0 ಬಿಡುಗಡೆಯಾದಾಗ ಅದರಲ್ಲಿ ಹಲವು ಸಮಸ್ಯೆಗಳು ಕಂಡುಬಂದವು. ಅಲ್ಲಿಂದ ಇಂಟರ್ ನೆಟ್ ಎಕ್ಸ್ ಪ್ಲೋರರ್ ಜನಪ್ರಿಯತೆ ಕಡಿಮೆಯಾಗುತ್ತಲೇ ಹೋಯಿತು.
2006ರಲ್ಲಿ ಐಇ 7.0 ಬಿಡುಗಡೆಯಾದಾಗ, ವೆಬ್ ಬ್ರೌಸರ್ ಮಾರುಕಟ್ಟೆ ಬೇರೆ ಬ್ರೌಸರ್‌ಗಳಿಗೆ ಹುಡುಕಾಟ ಆರಂಭಿಸಿತ್ತು. 2004ರಲ್ಲಿ ಮೋಝಿಲ್ಲಾ ಫೈರ್‌ಫಾಕ್ಸ್ ಹಾಗೂ 2008ರಲ್ಲಿ ಗೂಗಲ್ ಕ್ರೋಮ್ ಬಿಡುಗಡೆಯಾಯಿತು. ಇದರ ಬೆನ್ನಲ್ಲೇ ಮೊಬೈಲ್ ಆಪರೇಟಿಂಗ್ ತಂತ್ರಾಂಶಗಳಾದ ಆಂಡ್ರೋಯ್ಡ್ ಹಾಗೂ ಸ್ಮಾರ್ಟ್ ಫೋನ್‍ಗಳ ಯುಗದಲ್ಲಿ ಇಂಟರ್ ನೆಟ್ ಎಕ್ಸ್ ಪ್ಲೋರರ್ ಬಳಕೆಯನ್ನು ಮತ್ತಷ್ಟು ಕುಗ್ಗಿಸಿದವು.
ವರ್ಷಗಳು ಕಳೆದಂತೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ನಲ್ಲಿ ಹಲವು ಬದಲಾವಣೆಗಳನ್ನು ಕಂಡರೂ, ಹೆಚ್ಚಿನ ಪ್ರಯೋಜನವಾಗಲಿಲ್ಲ. 2002ರಲ್ಲಿ ಬ್ರೌಸರ್ ಮಾರುಕಟ್ಟೆಯ ಶೇ.95ರಷ್ಟನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಎಕ್ಸ್ ಪ್ಲೋರರ್, 2021ರ ಮಾರ್ಚ್ ವೇಳೆಗೆ ಕೇವಲ 1.7 ಪರ್ಸೆಂಟ್‌ಗೆ ಕುಸಿದಿತ್ತು. ಇದೇ ಕಾರಣಕ್ಕೆ ಮೈಕ್ರೋಸಾಫ್ಟ್ ಸಂಸ್ಥೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಗೆ ಗುಡ್ ಬೈ ಹೇಳಲು ನಿರ್ಧರಿಸಿತು. ಜತೆಗೆ ಮೈಕ್ರೋಸಾಫ್ಟ್ ಸಂಸ್ಥೆ ಎಡ್ಜ್ ಎನ್ನುವ ಹೊಸ ಬ್ರೌಸರ್ ಪರಿಚಯಿಸಿದೆ. ಇಂಟರ್ ನೆಟ್ ಎಕ್ಸ್ ಪ್ಲೋರರ್ ನಲ್ಲಿ ಓಪನ್ ಆಗುತ್ತಿದ್ದ ವೆಬ್‌ಸೈಟ್‌ಗಳೆಲ್ಲವೂ, ಎಡ್ಜ್ ಗೆ ಹೊಂದಿಕೊಳ್ಳಲಿವೆ ಎನ್ನಲಾಗಿದೆ.