ವಾಣಿಜ್ಯ ಜಾಹಿರಾತು

ನವದೆಹಲಿ: ಭಾರತದ ‘ಉಕ್ಕಿನ ಮನುಷ್ಯ’ ಎಂದೇ ಖ್ಯಾತಿ ಘಳಿಸಿದ್ದ ಟಾಟಾ ಸ್ಟೀಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಮ್ಶೆಡ್ ಜೆ. ಇರಾನಿ ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾದರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಟಾಟಾ ಸ್ಟೀಲ್‌ನೊಂದಿಗೆ ಸಂಬಂಧ ಹೊಂದಿದದ್ದ ಜಮ್ಶೆಡ್ ಜೆ. ಇರಾನಿ ಅವರಿಗೆ 85 ವರ್ಷ ವಯಸ್ಸಾಗಿತ್ತು.

43ಕ್ಕೂ ಅಧಿಕ ವರ್ಷಗಳ ಕಾಲ ಟಾಟಾ ಸ್ಟೀಲ್ ನೊಂದಿಗೆ ಸಂಬಂಧ ಹೊಂದಿದ್ದ ಜಮ್ಶೆಡ್ ಜೆ. ಇರಾನಿ 2011ಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾಗಿದ್ದರು.

ಜೂನ್ 2, 1936 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಸೆದ್ ಇರಾನಿ ದಂಪತಿಯ ಮಗನಾಗಿ ಜನಿಸಿದ  ಜಮ್ಶೆಡ್ ಜೆ ಇರಾನಿ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪಡೆದರು. ಜಮ್ಶೆಡ್ ಜೆ ಇರಾನಿ ಅವರು 1963 ರಲ್ಲಿ ಶೆಫೀಲ್ಡ್‌ನಲ್ಲಿ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಜಮ್ಶೆಡ್ ಜೆ ಇರಾನಿ 1968 ರಲ್ಲಿ ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಗೆ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ಸಂಸ್ಥೆಯನ್ನು ಸೇರಿದರು. ಜಮ್ಶೆಡ್ ಜೆ ಇರಾನಿ 1978 ರಲ್ಲಿ ಜನರಲ್ ಸೂಪರಿಂಟೆಂಡೆಂಟ್, 1979 ರಲ್ಲಿ ಜನರಲ್ ಮ್ಯಾನೇಜರ್ ಮತ್ತು 1985 ರಲ್ಲಿ ಟಾಟಾ ಸ್ಟೀಲ್ ಅಧ್ಯಕ್ಷರಾದರು. 1988 ರಲ್ಲಿ ಅವರು ಟಾಟಾ ಸ್ಟೀಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು 1992 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅವರು 2001 ರಲ್ಲಿ ನಿವೃತ್ತರಾದರು.

ಅವರು 1981 ರಲ್ಲಿ ಟಾಟಾ ಸ್ಟೀಲ್ ಮಂಡಳಿಗೆ ಸೇರಿದರು ಮತ್ತು 2001 ರವರೆಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಹೊರತುಪಡಿಸಿ, ಡಾ. ಇರಾನಿ ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಹಲವಾರು ಟಾಟಾ ಸಮೂಹ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಜಮ್ಶೆಡ್ ಜೆ ಇರಾನಿ ಅವರಿಗೆ 2007 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಜೊತೆಗೆ 2008ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿತ್ತು. ಇರಾನಿ ಅವರ ಪತ್ನಿ ಡೈಸಿ ಇರಾನಿ ಮತ್ತು ಅವರ ಮೂವರು ಮಕ್ಕಳಾದ ಜುಬಿನ್, ನಿಲೋಫರ್ ಮತ್ತು ತನಾಜ್ ಅವರನ್ನು ಅಗಲಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.