ವಾಣಿಜ್ಯ ಜಾಹಿರಾತು

ಕಾಪು : ಇಲ್ಲಿನ ಪ್ರಸಿದ್ಧ ಕಾಪು ಮಾರಿಗುಡಿಯ ಸುಗ್ಗಿ ಮಾರಿ ಪೂಜೆ ಇಂದಿನಿಂದ ಆರಂಭಗೊಂಡಿದೆ. ಉಡುಪಿಯಲ್ಲೇ ದೊಡ್ಡ ಜಾತ್ರೆ ಇದಾಗಿದ್ದು, ಐದು ಜಿಲ್ಲೆಯ ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದ ಕುರಿತು ವಿವಾದ ಇದ್ದರೂ, ಈ ಗೊಂದಲಗಳ ನಡುವೆಯೇ ಜಾತ್ರೆ ಆರಂಭವಾಗಿದೆ.

ಕಾಪು ಮಾರಿಗುಡಿಯಲ್ಲಿ ನಡೆಯುವ ಸುಗ್ಗಿ ಮಾರಿ ಪೂಜೆ ವಿಶೇಷವಾದದ್ದು. ಈ ಜಾತ್ರೆಯಲ್ಲಿ ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಹೀಗೆ ಐದು ಜಿಲ್ಲೆಯ ಲಕ್ಷಾಂತರ ಮಂದಿ ಸೇರುತ್ತಾರೆ . ಹೊಸ ಮಾರಿಗುಡಿ, ಹಳೆ ಮಾರಿಗುಡಿ ಹಾಗೂ ಮೂರನೇ ಮಾರಿ ಗುಡಿ ಹೀಗೆ ಮೂರು ಮಾರಿಗುಡಿಗಳಲ್ಲೂ ಏಕಕಾಲದಲ್ಲಿ ಜಾತ್ರೆ ನಡೆಯುತ್ತದೆ. ಕಾಪು ಸುಗ್ಗಿ ಮಾರಿ ಪೂಜೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕಾರ ಮಾಡಿದರೆ ಮನದ ಇಷ್ಟಾರ್ಥ ಈಡೇರುತ್ತೆ ಅನ್ನುವ ನಂಬಿಕೆ ಭಕ್ತರದ್ದು.

ಮುಸ್ಲಿಂ ವ್ಯಾಪಾರಿಗಳಿಗಿಲ್ಲ ಅವಕಾಶ

ಲಕ್ಷಾಂತರ ಜನ ಸೇರುವ ಕಾಪು ಮಾರಿಗುಡಿಯ ಸುಗ್ಗಿ ಮಾರಿ ಪೂಜೆಯಲ್ಲಿ ಈ ಬಾರಿ, ಮುಸ್ಲಿಂ ವ್ಯಾಪಾರಿಗಳು ಪಾಲ್ಗೊಂಡಿಲ್ಲ. ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆ ನೀಡಿತ್ತು. ಹೀಗಾಗಿ ದೇಗುಲದ ಆಡಳಿತ ಸಮಿತಿ ಹೂ ಹಣ್ಣು ಕಾಯಿ ಕೋಳಿ ಹೀಗೆ ಕೋಟ್ಯಾಂತರ ರೂ ವ್ಯವಹಾರ ನಡೆಯುವ ಕಾಪು ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಿದೆ. ಮಾರಿಗುಡಿ ಜಾತ್ರೆಯಲ್ಲಿ ಪ್ರತಿವರ್ಷ ನೂರಾರು ಮುಸ್ಲಿಂ ವ್ಯಾಪಾರಿಗಳು ಕೋಳಿ, ಕುರಿ, ಐಸ್‌ಕ್ರೀಂ, ಜ್ಯೂಸ್‌, ಹೂ ಮಾರಾಟ ಮಳಿಗೆಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದರು. ಈ ವರ್ಷ ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳು ಸ್ಟಾಲ್‌ಗಳನ್ನು ಹಾಕಿದ್ದರು.

ಇಂದು ರಾತ್ರಿ ಉತ್ಸವಗಳು ನೆರವೇರಲಿದ್ದು, ನಾಳೆ ಸಂಜೆಯವರೆಗೂ ಕಾಪು ಮಾರಿಗುಡಿಯ ಸುಗ್ಗಿ ಮಾರಿ ಪೂಜೆ ನಡೆಯಲಿದೆ. ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಜಾತ್ರೆ ವಿಜೃಂಭಣೆಯಿಂದ ನಡೆದಿರಲಿಲ್ಲ.

‘ದಶಕಗಳಿಂದಲೂ ಜಾತ್ರೆ, ಉತ್ಸವ ಸೇರಿದಂತೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಲಾಗಿದೆ. ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕಾಪು ಮಾರಿಗುಡಿ ದೇವಸ್ಥಾನ ಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕರೆ ನೀಡಲಾಗಿದ್ದ ಬಂದ್‌ಗೆ ಬೀದಿ ಬದಿ ಹಾಗೂ ಜಾತ್ರಾ ವ್ಯಾಪಾರಿಗಳು ಬೆಂಬಲ ನೀಡಿರಲಿಲ್ಲ. ಒಕ್ಕೂಟದಲ್ಲಿ ಎಲ್ಲ ಜಾತಿ ಧರ್ಮಗಳಿಗೆ ಸೇರಿದ 1000ಕ್ಕೂ ಹೆಚ್ಚು ವ್ಯಾಪಾರಿಗಳಿದ್ದು, ಅವರಲ್ಲಿ 600ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಕೋಮು ಸಂಘರ್ಷದಿಂದ ಮುಸ್ಲಿಂ ವ್ಯಾಪಾರಿಗಳ ಜೀವನ ಬೀದಿಗೆ ಬರಲಿದೆ’

ಮಹಮ್ಮದ್ ಆರೀಫ್‌ , ಬೀದಿಬದಿ ವ್ಯಾಪಾರಿಗಳ ಹಾಗೂ ಜಾತ್ರೆ ವ್ಯಾಪಾರಿಗಳ ಒಕ್ಕೂಟದ ಕಾರ್ಯದರ್ಶಿ 

 

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.