ವಾಣಿಜ್ಯ ಜಾಹಿರಾತು

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರದ ಮೂಲಕ ವಿತರಿಸುವ ಕುಚಲಕ್ಕಿ ಕಳಪೆ ಮಟ್ಟದ್ದಾಗಿದ್ದು, ಫಲಾನುಭವಿಗಳು ಪಡಿತರ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಪಡಿತರ ಅಕ್ಕಿ ಪಡೆದು ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಚ್ಚು ದರದ ಕೆಂಪು ಕುಚಲಕ್ಕಿ ಖರೀದಿಸುತ್ತಿದ್ದಾರೆ, ಕರಾವಳಿ ಜನತೆಗೆ ಉತ್ತಮ ಗುಣಮಟ್ಟದ ಕುಚಲಕ್ಕಿ ವಿತರಿಸಬೇಕೆಂದು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್.ಅಂಗಾರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬೇಕಾಗುವ ಕುಚಲಕ್ಕಿಯನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ಅಲ್ಲಿನ ಪಡಿತರದಲ್ಲಿ ವಿತರಿಸಬೇಕು. ದ.ಕ. ಜಿಲ್ಲೆಗೆ ಸುಮಾರು 58 ಸಾವಿರ ಕ್ವಿಂಟಾಲ್ ಹಾಗೂ ಉಡುಪಿ ಜಿಲ್ಲೆಗೆ 40 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ ಬೇಕಾಗಿದ್ದು, ಸರಾಸರಿ ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದೆ. ಅಗತ್ಯ ಭತ್ತದ ಬೆಳೆ ಅವಳಿ ಜಿಲ್ಲೆಯಲ್ಲಿ ಲಭ್ಯವಿಲ್ಲದಿರುವುದರಿಂದ ಮೈಸೂರು, ಮಂಡ್ಯ ಮುಂತಾದೆಡೆಯಿಂದ ಜಯ ಮತ್ತು ಇನ್ನಿತರ ಭತ್ತದ ತಳಿಯ ಫಸಲು ಸಂಗ್ರಹಿಸಿ ಕುಚಲಕ್ಕಿ ತಯಾರಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಹಾಗೂ ನಿಯೋಗದಲ್ಲಿದ್ದ ಕರಾವಳಿ ಶಾಸಕರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಶಾಸಕರಾದ ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು ಮತ್ತಿತರರು ಇದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.