ಕಾರ್ಕಳ: ಜಾತ್ರೆಯಲ್ಲಿ ಪಟಾಕಿ ಸಿಡಿದು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆಯಲ್ಲಿ ರಾತ್ರಿ ವೇಳೆ ನಡೆದ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನ ನಡೆಸಲಾಯಿತು. ಈ ವೇಳೆ ದಾಸ್ತಾನು ಇರಿಸಿದ್ದ ಪಟಾಕಿ ರಾಶಿಗೆ ಏಕಾಏಕಿ ಬೆಂಕಿ ಬಿದ್ದ ಪರಿಣಾಮ ಓರ್ವ ವೃದ್ಧ ಸಹಿತ ಮೂವರು ಬಾಲಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಕಿಯಿಂದ ಗಾಯಗೊಂಡ ಬಾಲಕರು ಸುಮಾರು ಅರ್ಧ ಗಂಟೆಗಿಂತಲು ಹೆಚ್ಚು ಕಾಲ ಸ್ಥಳದಲ್ಲೇ ಇದ್ದರೂ ದೇವಸ್ಥಾನದ ಆಡಳಿತ ಮಂಡಳಿಯವರು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನದ ವ್ಯವಸ್ಥೆ ಮಾಡಿಲ್ಲ. ಕೊನೆಗೆ ಗಾಯಾಳು ಬಾಲಕರ ಮನೆ ಮಂದಿಯೇ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ. ಬೃಹತ್ ಜನಸಂಖ್ಯೆ ಸೇರುವ ಜಾತ್ರಾ ಸಮಯದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕೊಠಡಿ ಅಥವಾ ಅಂಬುಲೆನ್ಸ್ ವ್ಯವಸ್ಥೆ ಕೂಡ ಮಾಡದಿರುವುದು ಆಡಳಿತ ಮಂಡಳಿಯ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.