ಬೆಂಗಳೂರು : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೋಮವಾರ ರಾಜ್ಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ.
ಶುಕ್ರವಾರ ಎನ್‍ಸಿಪಿ ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಹಿನ್ನೆಲೆ ಸೋಮವಾರ ರಾಜ್ಯ ಸಂಸದರು ಕೂಡ ಭೇಟಿಯಾಗಿ ಮಹಾರಾಷ್ಟ್ರದವರು ನಡೆಸುತ್ತಿರುವ ಪುಂಡಾಟಿಕೆಯನ್ನು ಗಮನಕ್ಕೆ ತರಲಿದ್ದಾರೆ. ಇದೇ 14ರಂದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಿಎಂ ಜೊತೆ ಅಮಿತ್ ಶಾ ಅವರು ಗಡಿ ವಿವಾದ ಕುರಿತು ಮಾತುಕತೆ ನಡೆಸಲು ಮುಂದಾಗಿರುವ ಸಂದರ್ಭದಲ್ಲೇ ಸಂಸದರು ಭೇಟಿಯಾಗಲಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ನಿಲುವು ಮತ್ತು ವಾಸ್ತವಾಂಶಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದಿಟ್ಟಿದ್ದೇನೆ. ಅವರು ಮುಂದಿನ ವಾರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವ ಸಾಧ್ಯತೆಯಿದೆ ಎಂದಿದ್ದಾರೆ.
ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ @AmitShah ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಎಲ್ಲಾ ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ನೀಡಿದ್ದೇನೆ. ಸೋಮವಾರದಂದು ನಮ್ಮ ರಾಜ್ಯದ ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿ, ವಿವರವನ್ನು ಸಲ್ಲಿಸಲಿದೆ. pic.twitter.com/m1SfPphVLh
— Basavaraj S Bommai (@BSBommai) December 10, 2022
ಗಡಿ ವಿವಾದ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದಲ್ಲ. ಭಾಷಾವಾರು ರಾಜ್ಯಗಳ ಮರುವಿಂಗಡಣೆ ನಂತರ ಗಡಿ ಸಮಸ್ಯೆಯು 1957ರಲ್ಲಿ ಆರಂಭವಾಗಿತ್ತು. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರವು ಹಕ್ಕು ಸಾಧಿಸಿತು, ಇಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಪ್ರಸ್ತುತ ಕರ್ನಾಟಕದ ಭಾಗವಾಗಿರುವ 814 ಮರಾಠಿ ಮಾತನಾಡುವ ಹಳ್ಳಿ ತನಗೆ ಸೇರಬೇಕೆಂದು ಮಹಾರಾಷ್ಟ್ರ ವಾದಿಸುತ್ತಿದೆ.
ರಾಜ್ಯಗಳ ಮರುವಿಂಗಡಣೆ ಕಾಯ್ದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಪ್ರಕಾರ ಭಾಷಾವಾರು ರೇಖೆಗಳ ಮೇಲೆ ಮಾಡಿದ ಗಡಿರೇಖೆಯನ್ನು ಕರ್ನಾಟಕವು ನಿರ್ವಹಿಸುತ್ತದೆ. ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿದೆ ಎಂಬ ಪ್ರತಿಪಾದನೆಯಂತೆ, ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿ ಸುವರ್ಣ ವಿಧಾನ ಸೌಧವನ್ನು ಬೆಳಗಾವಿಯಲ್ಲಿ ನಿರ್ಮಿಸಿದೆ. ಅಲ್ಲಿ ವಿಧಾನಮಂಡಲದ ಅಧಿವೇಶನವನ್ನು ನಡೆಸಲಾಗುತ್ತದೆ.