ವಾಣಿಜ್ಯ ಜಾಹಿರಾತು

ಶಿವಮೊಗ್ಗ: ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಮಹಾರಾಷ್ಟ್ರ ಮಾದರಿಯನ್ನುಅನುಸರಿಸಲು ರಾಜ್ಯ ಸರ್ಕಾರ ಮೊದಲ ಬಾರಿಗೆ ಚಿಂತನೆ ನಡೆಸಿದೆ. ಅದರಂತೆ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (AAI) ಹಸ್ತಾಂತರಿಸುವ ಬದಲು, ಸರ್ಕಾರವು ಅಂತಹ ವಿಮಾನ ನಿಲ್ದಾಣಗಳನ್ನು ನಿರ್ವಹಿಸಿ ಅವುಗಳಿಂದ ಆದಾಯವನ್ನು ಗಳಿಸುವ ಸಾಧ್ಯತೆಯಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ನಿರ್ವಹಣೆಯ ಮೊದಲ ವಿಮಾನ ನಿಲ್ದಾಣವಾಗಲಿದೆ.

ಸಂಸದ ಬಿ ವೈ ರಾಘವೇಂದ್ರ ಈ ಕುರಿತು ಮಾತನಾಡಿ ಮಹಾರಾಷ್ಟ್ರ ಸರ್ಕಾರವು ನಿರ್ಮಾಣ ಮಾಡಿರುವ ಆರರಿಂದ ಏಳು ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಪ್ರಾಧಿಕಾರವನ್ನು ರಚಿಸಿದ್ದು,  “ನಾವು ಅದೇ ಮಾದರಿಯನ್ನು ಅನುಸರಿಸಲು ಯೋಚಿಸುತ್ತಿದ್ದೇವೆ.  ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ನೆರವಿನಿಂದ ನಿರ್ವಹಿಸುತ್ತಿರುವ ಮೊದಲ ವಿಮಾನ ನಿಲ್ದಾಣವಾಗಿದೆ. ರಾಜ್ಯ ಸರ್ಕಾರ ಒಟ್ಟು ನಿರ್ಮಾಣ ವೆಚ್ಚದಲ್ಲಿ ಶೇ.90ರಷ್ಟು ಮಾತ್ರ ಹೂಡಿಕೆ ಮಾಡಿದೆ. ಹೀಗಾಗಿ, ವಿಮಾನ ನಿಲ್ದಾಣಗಳಿಂದ ಬರುವ ಆದಾಯವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬಯಸುತ್ತಿದೆ ಎಂದು ಅವರು ಹೇಳಿದರು .

ಮಹಾರಾಷ್ಟ್ರ ಸರ್ಕಾರ ತನ್ನ ವಿಮಾನ ನಿಲ್ದಾಣಗಳನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ರಾಜ್ಯದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ ಎಂದು ರಾಘವೇಂದ್ರ ಅವರು ಹೇಳಿದರು. ಮಹಾರಾಷ್ಟ್ರ ಸರ್ಕಾರ 2002 ರಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಮಹಾರಾಷ್ಟ್ರ ಏರ್‌ಪೋರ್ಟ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (MADC) ಸಂಸ್ಥೆ ಸ್ಥಾಪಿಸಿದ್ದು, ಶಿರಡಿ ವಿಮಾನ ನಿಲ್ದಾಣ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಿಗೂ ತಂಡ ಭೇಟಿ ನೀಡಲಿದೆ. ಮಹಾರಾಷ್ಟ್ರ ಮಾದರಿಯನ್ನು ಅಧ್ಯಯನ ಮಾಡಿದ ನಂತರ, ವಿಮಾನ ನಿಲ್ದಾಣವನ್ನು ಎಎಐಗೆ ಹಸ್ತಾಂತರಿಸಬೇಕೇ ಅಥವಾ ಮೂಲಸೌಕರ್ಯ ಇಲಾಖೆಯಿಂದ ನಿರ್ವಹಿಸಬೇಕೇ ಅಥವಾ ಅದನ್ನು ಖಾಸಗೀಕರಣಗೊಳಿಸಬೇಕೇ ಎಂಬ ಬಗ್ಗೆ ರಾಜ್ಯ ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಂದಾಜು 384 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.  ಇದು 3,200 ಮೀಟರ್‌ಗಳ ರನ್‌ವೇಯನ್ನು ಹೊಂದಿದ್ದು,  ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದಲ್ಲಿ ಎರಡನೇ ಅತಿ ಉದ್ದದ ವಿಮಾನ ನಿಲ್ದಾಣವಾಗಿದೆ. ಉಡಾನ್ ಯೋಜನೆಯಡಿ ಶಿವಮೊಗ್ಗದಿಂದ ಬೆಂಗಳೂರು, ಮುಂಬೈ, ಚೆನ್ನೈ, ಮಂಗಳೂರು, ತಿರುಪತಿ, ಹೈದರಾಬಾದ್, ಕೊಚ್ಚಿ, ದೆಹಲಿ ಮತ್ತು ಗೋವಾಕ್ಕೆ ವಿಮಾನ ಹಾರಾಟ ನಡೆಸಲು ಸಂಸದ ಬಿ.ವೈ. ರಾಘವೇಂದ್ರ ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.