ವಾಣಿಜ್ಯ ಜಾಹಿರಾತು

ತಾಳ್ಮೆ ಮತ್ತು ಬುದ್ದಿವಂತಿಕೆ ಇದ್ದವನಿಗೆ ಷೇರು ಮಾರುಕಟ್ಟೆ ಎಂದಿಗೂ ಮೋಸ ಮಾಡುವುದಿಲ್ಲ ಎಂಬುದು ಅನುಭವಿಗಳ ಮಾತು. ಮಾರುಕಟ್ಟೆಯ ಆಗು-ಹೋಗುಗಳನ್ನು ತಿಳಿದುಕೊಂಡು, ಸೂಕ್ತ ಸಮಯದಲ್ಲಿ ಸೂಕ್ತ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿ ನಿರೀಕ್ಷಿತ ಲಾಭ ಸಿಗುವವರೆಗೆ ಕಾದು ಸೂಕ್ತ ಸಮಯದಲ್ಲಿ ಅವುಗಳನ್ನು ಮಾರಾಟ ಮಾಡುವವನಿಗೆ ಷೇರು ಮಾರುಕಟ್ಟೆ ಕೈ ಹಿಡಿಯುತ್ತದೆ.

ದಿಢೀರ್ ಶ್ರೀಮಂತನಾಗಬೇಕೆಂಬ ದುರಾಸೆಯಿಂದ ಹಿಂದೆ ಮುಂದೆ ನೋಡದೆ ಮಾರುಕಟ್ಟೆಗೆ ಧುಮುಕುವವನು ಈ ವ್ಯವಹಾರದಲ್ಲಿ ಯಶಸ್ವಿಯಾಗಲಾರ. ಬೀಜವನ್ನು ಬಿತ್ತಿ ಅದು ಮೊಳಕೆಯೊಡೆದು, ಸಸಿಯಾಗಿ, ಮರವಾಗಿ, ಹೂ ಬಿಟ್ಟು, ಕಾಯಿ ಬಳಿತು ಹಣ್ಣಾಗುವವರೆಗೆ ಹೇಗೆ ಅದನ್ನು ಪಾಲನೆ ಪೋಷಣೆ ಮಾಡಬೇಕೋ ಹಾಗೆಯೆ ನಮ್ಮ ಹೂಡಿಕೆಗಳನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡಬೇಕು. ಒಳ್ಳೆಯ ಫಲ ನೀಡಲು ಒಳ್ಳೆಯ ಬೀಜಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೇ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಲಾಭ ಕಾಣಬೇಕಾದರೆ ಒಳ್ಳೆಯ ಷೇರುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಒಳ್ಳೆಯ ಷೇರುಗಳನ್ನು ಹೇಗೆ ಆಯ್ಕೆ ಮಾಡುವುದು ಎಂದು ಅನೇಕರು ನನ್ನನ್ನು ಕೇಳುತ್ತಿರುತ್ತಾರೆ. ಈ ಸಂಚಿಕೆಯಲ್ಲಿ ದೀರ್ಘ ಕಾಲಕ್ಕೆ ಹೂಡಿಕೆ ಮಾಡಲು ಸೂಕ್ತ ಷೇರುಗಳನ್ನು ಆಯ್ಕೆ ಮಾಡುವಾಗ ಏನೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕೆಂದು ವಿವರಿಸಲಾಗಿದೆ.

ಜಾಗತಿಕ ಆರ್ಥಿಕತೆಯ ಅಂದಾಜು ಇರಲಿ:
ಷೇರುಗಳಲ್ಲಿ ಹೂಡಿಕೆ ಮಾಡುವವರು ಸುದ್ದಿ ಮಾಧ್ಯಮಗಳಲ್ಲಿ ಬರುವ ಜಾಗತಿಕ ಆರ್ಥಿಕತೆಯ ಸುದ್ದಿಗಳ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಯಾಕೆಂದರೆ ಕೆಲವೊಂದು ಜಾಗತಿಕ ವಿದ್ಯಮಾನಗಳು ಷೇರುಮಾರುಕಟ್ಟೆಯ ಮೇಲೆ ನೇರ ಪ್ರಭಾವ / ಪರಿಣಾಮ ಬೀರುತ್ತವೆ. ಉದಾಹರಣೆಗೆ ಇತ್ತೀಚಿಗೆ ಭಾರಿ ಕುಖ್ಯಾತಿ ಪಡೆದ ವಿಷಯವಾದ ರಷ್ಯಾ – ಉಕ್ರೇನ್ ನಡುವಿನ ಯುದ್ಧ, ತತ್ಪರಿಣಾಮವಾಗಿ ಉಂಟಾದ ಇಂಧನ ಬೆಲೆಯ ಹೆಚ್ಚಳ ಮತ್ತು ಅದರಿಂದ ಉಂಟಾದ ಜಾಗತಿಕ ಹಣದುಬ್ಬರ, ಇದನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕುಗಳು ಕೈಗೊಂಡ ಆರ್ಥಿಕ ಶಿಸ್ತು ಕ್ರಮಗಳು ಇವೆಲ್ಲ ದೀರ್ಘ ಕಾಲಕ್ಕೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ.

ಇತ್ತೀಚಿನ ದಿನಗಳಲ್ಲಿ ಎಲ್ಲಾ ದೇಶಗಳು ನವೀಕರಿಸಬಹುದಾದ ಇಂಧನಗಳು, ಜಾಗತಿಕ ತಾಪಮಾನ, ಸುಸ್ಥಿರ (Sustainable) ಪ್ರಗತಿ ಮುಂತಾದ ವಿಷಯಗಳಿಗೆ ಹೆಚ್ಚು ಒತ್ತು ಕೊಡುತ್ತಿವೆ. ಹೂಡಿಕೆದಾರರು ಇಂತಹ ಕ್ಷೇತ್ರಗಳಲ್ಲಿ ವ್ಯವಹರಿಸುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.

ಕಂಪನಿಗಳ ಬಗ್ಗೆ ತಿಳಿದುಕೊಳ್ಳಿ :
ಹೂಡಿಕೆ ಮಾಡುವ ಮೊದಲು ನೀವು ಹೂಡಿಕೆ ಮಾಡಲು ಬಯಸುವ ಕಂಪನಿಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯ. ಕಂಪನಿಗಳ ಬಗ್ಗೆ ತಿಳಿದುಕೊಳ್ಳುವಾಗ ಒಂದಷ್ಟು ಪ್ರಶ್ನೆಗಳನ್ನು ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ಕಂಪನಿಯ ಪೂರ್ಣ ಹೆಸರೇನು, ಅದು ಹುಟ್ಟಿದ್ದು ಯಾವಾಗ, ಅದರ ಸಂಸ್ಥಾಪಕರು (Promoters) ಯಾರು, ಪ್ರಸ್ತುತ ಅದರ ಮಾಲೀಕರು ಯಾರು, ಮಾಲೀಕರಿಗೆ ಇದಲ್ಲದೆ ಬೇರೆ ಏನೆಲ್ಲಾ ವ್ಯವಹಾರಗಳಿವೆ, ಕಂಪನಿಯು ಯಾವ ವಸ್ತುಗಳನ್ನು ಉತ್ಪಾದಿಸುತ್ತದೆ ಯಾ ಮಾರುತ್ತದೆ, ಒಟ್ಟು ಮಾರುಕಟ್ಟೆಯಲ್ಲಿ ಈ ಕಂಪನಿಯ ಪಾಲೆಷ್ಟು, ಕಂಪನಿಯ ವಾರ್ಷಿಕ ವ್ಯವಹಾರವೆಷ್ಟು, ಲಾಭದಲ್ಲಿದೆಯೋ ನಷ್ಟದಲ್ಲಿ ಇದೆಯೋ, ಸಾಲ ಎಷ್ಟಿದೆ, ಅಸ್ತಿ ಎಷ್ಟಿದೆ, ಕಂಪನಿಯ ಮುಂದಿನ ಯೋಜನೆಗಳು ಏನು, ಪ್ರಸ್ತುತ ಕಂಪನಿ ಉತ್ಪಾದಿಸುತ್ತಿರುವ ಯಾ ಮಾರುತ್ತಿರುವ ವಸ್ತುಗಳ ಮಹತ್ವವೇನು, ಭವಿಷ್ಯದಲ್ಲಿ ಈ ವಸ್ತುಗಳ ಗತಿ ಏನಾಗಬಹುದು ಇತ್ಯಾದಿ ಇತ್ಯಾದಿ.

ಮಾರುಕಟ್ಟೆಯ ಅಧ್ಯಯನ ಮಾಡಿಕೊಳ್ಳಿ:
ಪ್ರತಿ ಷೇರು ಮಾರುಕಟ್ಟೆಯು ಮುಖ್ಯವಾಗಿ ಏರುಮುಖ, ಇಳಿಮುಖ ಮತ್ತು ತಟಸ್ಥ ಎಂಬ ಮೂರು ಹಂತಗಳಲ್ಲಿ ಚಲಿಸುತ್ತಿರುತ್ತವೆ. ಅಂದರೆ ಒಮ್ಮೆ ಷೇರುಗಳ ಬೆಲೆಗಳಲ್ಲಿ ಏರಿಕೆಯಾಗಲು ಪ್ರಾರಂಭವಾದರೆ ಮುಂದಿನ ಕೆಲವು ತಿಂಗಳು ಅಥವಾ ವರ್ಷಗಳ ತನಕ ಏರುತ್ತಲೇ ಇರುತ್ತದೆ (ಸಣ್ಣ ಪುಟ್ಟ ನಷ್ಟಗಳನ್ನು ಹೊರತು ಪಡಿಸಿ). ಇದನ್ನು ಗೂಳಿಯ ಹಿಡಿತ ಅಂತ ಮಾರುಕಟ್ಟೆಯ ಭಾಷೆಯಲ್ಲಿ ಕರೆಯುತ್ತಾರೆ. ಈ ಹಂತ ದಾಟಿದ ಮೇಲೆ ಷೇರುಗಳ ಬೆಲೆಗಳು ನಿರಂತರವಾಗಿ ಇಳಿಯಲಾರಂಭಿಸುತ್ತವೆ. ಈ ಹಂತವು ಕೆಲವು ತಿಂಗಳು ಯಾ ವರ್ಷಗಳ ತನಕ ಇರುತ್ತದೆ. ಇದನ್ನು ಕರಡಿಯ ಹಿಡಿತ ಎಂದು ಕರೆಯಲಾಗುತ್ತದೆ. ಇವೆರಡರ ಮಧ್ಯೆ ಸುಮಾರು ವಾರಗಳ ಕಾಲ ಷೇರುಗಳ ಬೆಲೆಗಳಲ್ಲಿ ಹೆಚ್ಚಿನ ಏರಿಳಿತಗಳಾಗದೆ ತಟಸ್ಥವಾಗಿರುತ್ತದೆ. ಹೂಡಿಕೆದಾರರು ಇದನ್ನು ಗುರುತಿಸಲು ಸಫಲರಾದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಕರಡಿಯನ್ನು ಹಿಡಿಯಿರಿ!:
ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ ಉಂಟಾಗಿ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಯಿತೆಂಬ ಸುದ್ದಿಯನ್ನು ನೀವು ಆಗಾಗ ಸುದ್ದಿ ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಷೇರು ಮಾರುಕಟ್ಟೆ ಕುಸಿದಾಗ ಹಲವರಿಗೆ ನಷ್ಟವಾಯಿತೇನೋ ಸರಿ. ಆದರೆ ದೀರ್ಘ ಕಾಲಿಕ ಹೂಡಿಕೆ ಮಾಡುವವರಿಗೆ ಇದರಿಂದ ಏನು ಸಮಸ್ಯೆ ಆಗುವುದಿಲ್ಲ. ಹೀಗೆ ಕುಸಿತ ಆದಾಗ ನೀವು ಮಾರುಕಟ್ಟೆ ಪ್ರವೇಶ ಮಾಡಲು ಪ್ರಶಸ್ತ ಸಮಯ. ಯಾಕೆಂದರೆ ಆಗ ಷೇರುಗಳ ಬೆಲೆಗಳು ಕಡಿಮೆಯಾಗಿದ್ದು ನಿಮಗೆ ಕಡಿಮೆ ಬೆಲೆಗೆ ಷೇರುಗಳು ಸಿಗುತ್ತವೆ.

ಒಂದಕ್ಕಿಂತ ಹೆಚ್ಚು ಕಂಪೆನಿಗಳಲ್ಲಿ ಹೂಡಿಕೆ ಮಾಡಿ:
ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡುವುದಕ್ಕಿಂತ ಬೇರೆ ಬೇರೆ ಬುಟ್ಟಿಗಳಲ್ಲಿ ಇಟ್ಟರೆ ಹೆಚ್ಚು ಸುರಕ್ಷಿತ ಎನ್ನುವುದು ಹೂಡಿಕೆ ತಜ್ಞರು ಹೇಳುವ ಮಾತು. ಯಾವತ್ತಿಗೂ ಒಂದೇ ಕಂಪನಿಯ ಷೇರುಗಳಲ್ಲಿ ಎಲ್ಲಾ ಹಣವನ್ನು ಹೂಡಿಕೆ ಮಾಡಲೇಬಾರದು. ಒಂದಕ್ಕಿಂತ ಹೆಚ್ಚು ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಒಂದೇ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅಕಸ್ಮಾತ್ ಆ ಕಂಪನಿಗೇನಾದರೂ ಆದರೆ ನಿಮ್ಮ ಅಷ್ಟೂ ಹಣ ಕೊಚ್ಚಿಕೊಂಡು ಹೋಗುತ್ತದೆ. ಬದಲಾಗಿ ಬೇರೆ ಬೇರೆ ಷೇರುಗಳಲ್ಲಿ ವಿನಿಯೋಗಿಸಿದರೆ ಒಂದು ಕಂಪನಿಯಲ್ಲಿ ನಷ್ಟ ಅನುಭವಿಸಿದರೂ ಇನ್ನೊಂದು ಕಂಪನಿಯಲ್ಲಿ ಅದನ್ನು ಸರಿದೂಗಿಸಬಹುದು.

ನಿಮ್ಮ ಬಗ್ಗೆ ತಿಳಿದುಕೊಳ್ಳಿ :
ಜಾಗತಿಕ ಆರ್ಥಿಕತೆ, ಮಾರುಕಟ್ಟೆಯ ಸ್ಥಿತಿಗತಿ, ಕಂಪನಿಗಳ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಅತ್ಯವಶ್ಯಕವೋ ನಿಮ್ಮನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಅವಶ್ಯಕ. ಷೇರುಗಳ ಬಗ್ಗೆ, ಷೇರು ಮಾರುಕಟ್ಟೆಗಳ ಬಗ್ಗೆ ನಿಮಗಿರುವ ಜ್ಞಾನವೆಷ್ಟು, ಹೂಡಿಕೆ ಮಾಡುವ ಉದ್ದೇಶವೇನು, ಹೂಡಲು ನೀವು ಹೊಂದಿರುವ ಬಂಡವಾಳವೆಷ್ಟು, ನೀವು ಎಷ್ಟರ ಮಟ್ಟಿಗೆ ಅಪಾಯವನ್ನು (Risk) ಭರಿಸಲು ಸಿದ್ಧರಿದ್ದೀರಿ ಮುಂತಾದ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡು ಅವಲೋಕನ ಮಾಡಿಕೊಳ್ಳಿ. ಷೇರು ಮಾರುಕಟ್ಟೆ ಬಗ್ಗೆ ನಿಮಗೆ ಅಷ್ಟೊಂದು ಜ್ಞಾನ ಇಲ್ಲವೆಂದಾದಲ್ಲಿ ಆರಂಭದಲ್ಲಿ ದೊಡ್ಡ ಮೊತ್ತವನ್ನು ವಿನಿಯೋಗಿಸಬೇಡಿ.

ಮೊದಲು ನಿಮ್ಮಲ್ಲಿ ನೀವು ಹೂಡಿಕೆ ಮಾಡಿ ಅಂದರೆ ಹೂಡಿಕೆ ಸಾಮಗ್ರಿಗಳ ಬಗ್ಗೆ, ಷೇರು ಮಾರುಕಟ್ಟೆ ಬಗ್ಗೆ ನಿಮ್ಮ ಜ್ಞಾನವನ್ನು, ಕೌಶಲ್ಯವನ್ನು ವೃದ್ಧಿಸಲು ಹಣ ಮತ್ತು ಸಮಯವನ್ನು ತೊಡಗಿಸಿ. ಹೂಡಿಕೆ ಮಾಡಲು ಸಹಕರಿಸಲು ಅನೇಕ ಏಜೆನ್ಸಿಗಳು ಇವೆ. ಆದರೂ ನಿಮ್ಮ ಹಣವನ್ನು ನೀವೇ ನಿರ್ವಹಣೆ ಮಾಡುವುದು ಒಳಿತು. ಒಂದೊಮ್ಮೆ ನಿಮಗೆ ಮಾರುಕಟ್ಟೆ ಮೇಲೆ ವಿಶ್ವಾಸ ಬಂದರೆ ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ತೊಡಗಿಸಿ ನಿಧಾನವಾಗಿ ಬಂಡವಾಳ ವಿಸ್ತರಿಸುತ್ತಾ ಹೋಗಿ. ಆಸೆಯಿರಲಿ, ದುರಾಸೆ ಬೇಡ. ಆರಂಭದಲ್ಲಿ ಹೇಳಿದಂತೆ ರಾತ್ರೋ ರಾತ್ರಿ ಶ್ರೀಮಂತನಾಗಬೇಕೆಂಬ ಹುಚ್ಚು ಕನಸು ಯಾವತ್ತಿಗೂ ಒಳ್ಳೆಯದಲ್ಲ.

(ಮುಂದುವರೆಯುವುದು)

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.