ವಾಣಿಜ್ಯ ಜಾಹಿರಾತು

ಬೇಸಿಗೆ ಕಾಲಕ್ಕೆ ಉತ್ತಮವಾದ ಹಣ್ಣು ಎಂದರೆ ಅದು ಖರ್ಬೂಜ ಹಣ್ಣು. ಇದು ಅಪಾರ ಪ್ರಮಾಣದಲ್ಲಿ ನೀರಿನಾಂಶ ಹೊಂದಿರುವುದರಿಂದ ಬೇಸಿಗೆಯ ಕಾಲದಲ್ಲಿ ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ಖರ್ಬೂಜ ಹಣ್ಣು ಸೇವನೆಯಿಂದ ಆಗುವ ಪ್ರಯೋಜನದ ಬಗ್ಗೆ ತಿಳಿದುಕೊಳ್ಳೋಣ.

ಜೀರ್ಣಕ್ರಿಯೆಗೆ ಉತ್ತಮ

ಜೀರ್ಣಕ್ರಿಯೆ ಸಮಸ್ಯೆ ಇದ್ದವರಿಗೆ ಖರ್ಬೂಜ ಸೇವನೆ ಉತ್ತಮ. ಆಹಾರವು ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗದೆ ಇದ್ದರೆ ಅದರಿಂದ ಅಜೀರ್ಣ ಸಮಸ್ಯೆ ಉಂಟಾಗಿ ಅಸಿಡಿಟಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಂಡುಬರುವುದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ನಿವಾರಣೆ ಮಾಡಿ, ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆ

ಮಲಬದ್ಧತೆ ಸಮಸ್ಯೆ ಎದುರಾದರೆ ಹೆಚ್ಚು ನೀರು ಕುಡಿಯಬೇಕು ಹಾಗೂ ನಾರಿನಾಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಖರ್ಬೂಜ ಹಣ್ಣಿನ ಸೇವನೆ ಮಾಡಿದರೆ ಬಹಳ ಒಳ್ಳೆಯದು. ಇದರಲ್ಲಿ ಹೇರಳವಾಗಿ ನಾರಿನಾಂಶಗಳು ಇರುವುದರಿಂದ, ಇವು ನೈಸರ್ಗಿಕ ವಿರೇಚಕಗಳಾಗಿ ಕೆಲಸ ಮಾಡುವುದರ ಜೊತೆಗೆ, ದೇಹಕ್ಕೆ ಅಗತ್ಯ ಪ್ರಮಾಣದ ನಾರಿನಾಂಶಗಳನ್ನು ಒದಗಿಸುವುದರ ಜೊತೆಗೆ ಮುಂದೆ ಮಲಬದ್ಧತೆ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.

 

ಅಧಿಕ ರಕ್ತದೊತ್ತಡ ನಿಯಂತ್ರಣ

ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಶುರುವಾಗುತ್ತದೆ. ಹೀಗಾಗಿ ಈ ಸಮಸ್ಯೆಗಳ ನಿಯಂತ್ರಣಕ್ಕೆ ಖರ್ಬೂಜ ಹಣ್ಣು ಸೇವನೆ ಉತ್ತಮ. ವಿಶೇಷವಾಗಿ ಖರ್ಬೂಜ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶಗಳು ಯಥೇಚ್ಛ ಪ್ರಮಾಣದಲ್ಲಿ ಕಂಡು ಬರುವುದರಿಂದ, ರಕ್ತದೊತ್ತಡದಂತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.

ಮೂತ್ರಪಿಂಡದ ಸಮಸ್ಯೆಗಳು ದೂರ

ಖರ್ಬೂಜ ಹಣ್ಣು ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶವನ್ನು ಒಳಗೊಂಡಿರುವುದರಿಂದ, ಇದು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಮೂತ್ರಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ.

ಇನ್ನು ಖರ್ಬೂಜ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್‌ ಹೇರಳವಾಗಿ ಸಿಗುವುದರಿಂದ, ಚರ್ಮದ ಹೊಳಪು, ಕಣ್ಣಿನ ಆರೋಗ್ಯ, ಮೂಳೆಗಳ ಬಲ ಇತ್ಯಾದಿ ಆರೋಗ್ಯಕಾರಿ ಅಂಶಗಳು ವೃದ್ಧಿಯಾಗುತ್ತದೆ. ಅಲ್ಲದೇ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಈ ಹಣ್ಣನ್ನು ಮಿತವಾಗಿ ಸೇವನೆ ಮಾಡುವುದರಿಂದ ದೇಹದ ತೂಕ ಇಳಿಸಿಕೊಳ್ಳುವುದರ ಜೊತೆಗೆ, ಬೊಜ್ಜನ್ನು ಕೂಡ ಕರಗಿಸಿಕೊಳ್ಳಬಹುದು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.