ವಾಣಿಜ್ಯ ಜಾಹಿರಾತು

ಮಂಗಳೂರು: ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಎಂಬ ಕಾರಣಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ನ ಹತ್ಯೆ ನಡೆದಿರುವುದು ಖಂಡನೀಯ, ನಾಚಿಗೆಗೇಡು. ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷನ ಹತ್ಯೆ ‌ನಡೆದಿತ್ತು. ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ಪುನರಾವರ್ತನೆ ಆಗುತ್ತದೆ ಎಂದರು.

ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣ. ನಿರಂತರ ಗಲಭೆ ಸೃಷ್ಟಿಸಲು ಹತ್ಯೆ ಮಾಡಿ ಸಮಾಜ ಒಡೆಯಲಾಗುತ್ತಿದೆ. ಜಿಹಾದಿ ಹೆಸರಿನಲ್ಲಿ ಇದನ್ನು ಮಾಡಲಾಗುತ್ತಿದ್ದು, ವಿಶ್ವಾಸ ಕಡಿಮೆ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ಈಗ ‌ಹೊರಗಡೆ ಬರುತ್ತಿದೆ. ದೇಶದಲ್ಲಿ ಅತಂತ್ರ ಸ್ಥಿತಿ ‌ತರಬೇಕು, ಜಿಹಾದಿ ಮಾನಸಿಕತೆ ಬೆಳೆಸಲು ಯತ್ನ ನಡೀತಾ ಇದೆ. ನರೇಂದ್ರ ಮೋದಿ ಸರ್ಕಾರ ಇದನ್ನೆಲ್ಲ ಸಹಿಸಲ್ಲ, ತಡೆ ಹಾಕುತ್ತದೆ. ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅಂಥಹ ವಾತಾವರಣವನ್ನು ನಮ್ಮ ಸರ್ಕಾರವೂ ಮಾಡಲಿದೆ. ತಕ್ಷಣ ಕಠಿಣ ಕ್ರಮ ಆಗಬೇಕು ಎಂದರು.

ಕಾಂಗ್ರೆಸ್ ಈಗ ಮೌನವಾಗಿರುವುದರ ಹಿನ್ನೆಲೆ ಏನು? ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಅನ್ನೋದು ಮುಖ್ಯ. ಈ ಘಟನೆ ದೇಶದಲ್ಲಿ ‌ನಡೆಯಲು‌ ಕಾರಣ ತುಷ್ಟೀಕರಣದ ರಾಜನೀತಿ. ಇಂಥಹ ಘಟನೆ ಖಂಡಿಸ್ತೇನೆ, ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಈಗಾಗಲೇ ಎನ್ ಐಎ ಅನ್ನು ಕಳುಹಿಸಿಕೊಟ್ಟಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಏನಿದು ಘಟನೆ:

ಮೊಹಮ್ಮದ್ ಪೈಗಂಬರ್ ಕುರಿತು ವಿವಾದಿತ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಬೆಂಬಲಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ, ಟೈಲರ್ ಕನ್ಹಯ್ಯಲಾಲ್ ನನ್ನು ರಾಜಸ್ತಾನದ ಉದಯಪುರದಲ್ಲಿ ಇಬ್ಬರು ಮಂಗಳವಾರ ಶಿರಚ್ಛೇದನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಾಜ್ ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಇಬ್ಬರು ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಉದಯಪುರ ಉದ್ವಿಗ್ನಗೊಂಡಿದ್ದು, ಕೋಮು ಸಾಮರಸ್ಯ ಹರಡುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಏಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ಮುಂದಿನ ಆದೇಶದವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಜಸ್ಥಾನದಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಉದಯಪುರದಲ್ಲಿನ ಘಟನೆಯ ಬಗ್ಗೆ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಎನ್ ಐಎ ತಂಡವನ್ನು ಕಳುಹಿಸಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.