ಬೆಂಗಳೂರು: ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಪಾತ್ರ ಮಾಡುತ್ತಿರುವ ಕಿರಣ್ ರಾಜ್ ಮನರಂಜನಾ ಉದ್ಯಮದಲ್ಲಿ ಜನಪ್ರಿಯ ಮುಖವಾಗಿರುವುದರ ಜೊತೆಗೆ, ತನ್ನ ಹಿರಿಮೆಗೆ ಮತ್ತೊಂದು ಗರಿ ಸೇರಿಸಿದ್ದಾರೆ.
ನಟನೆ ಹಾಗೂ ಸಾಮಾಜಿಕ ಕೆಲಸಗಳಿಂದ ಈಗಾಗಲೇ ಕನ್ನಡಿಗರ ಮನೆ-ಮನ ತಲುಪಿರುವ ನಟ ಕಿರಣ್ ರಾಜ್ ಅವರು ಗೂಗಲ್‌ನಲ್ಲಿಯೂ ಟ್ರೆಂಡ್ ಆಗಿದ್ದಾರೆ. ಗೂಗಲ್‌ನಲ್ಲಿ ಟ್ರೆಂಡ್ ಆದ ಮೊದಲ ಕಿರುತೆರೆ ನಟ ಎಂಬ ಹೆಗ್ಗಳಿಕೆಗೆ ಕಿರಣ್ ರಾಜ್ ಭಾಗಿಯಾಗಿದ್ದಾರೆ. ನಟನೆ ಜೊತೆಗೆ ಕಿರಣ್ ರಾಜ್ ಬೇರೆ ಉದ್ಯಮವನ್ನು ಕೂಡ ಮಾಡುತ್ತಿದ್ದಾರೆ.
ಗೂಗಲ್‌ನಲ್ಲಿ ಟ್ರೆಂಡ್ ಆಗಿರುವ ವಿಷಯವನ್ನು ಸ್ವತಃ ಕಿರಣ್ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗೂಗಲ್ ವೆಬ್ ಸೆರ್ಚ್‌ನಲ್ಲಿ ಕನ್ನಡ ಭಾಷೆಯಲ್ಲಿ ಕಿರಣ್ ರಾಜ್ ಟ್ರೆಂಡ್ ಆಗಿದ್ದಾರೆ. ಈ ವಿಷಯ ಕೇಳಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಕಿರಣ್‌ಗೆ ಶುಭಾಶಯ ತಿಳಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಸಿವು ಎಂದ ಅನೇಕರಿಗೆ, ವೃದ್ಧಾಶ್ರಮಗಳಿಗೆ ಕಿರಣ್ ರಾಜ್ ಆಹಾರದ ವ್ಯವಸ್ಥೆ ಮಾಡಿದ್ದರು, ಬೀದಿಯಲ್ಲಿ ಮಲಗುವವರಿಗೆ ಬೆಡ್‌ಶೀಟ್ ನೀಡಿದ್ದರು, ಇತ್ತೀಚೆಗೆ ಆಹಾರ ಉತ್ಸವ ಮಾಡಿ ಮಂಗಳಮುಖಿಯರಿಗೂ ಭೋಜನ ಹಾಕಿದ್ದರು. ಕಿರಣ್ ರಾಜ್ ಅವರು ಗಣೇಶ ಚತುರ್ಥಿಯ ದಿನ ಕರೆದು ಊಟ ಹಾಕಿದ್ದಕ್ಕೆ ಮಂಗಳಮುಖಿಯರು ಭಾವುಕರಾಗಿದ್ದರು.