ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಹಾಲು ಖರೀದಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನದರ 3 ರೂ. ಏರಿಕೆಯಾಗಲಿದೆ ಎಂದು ಕರ್ನಾಟಕ ಹಾಲು ಒಕ್ಕೂಟ ಅಧಿಕೃತ ಮಾಹಿತಿ ನೀಡಿದೆ.
ದೇಶದ ಎಲ್ಲ ಹಾಲು ಉತ್ಪಾದನಾ ಒಕ್ಕೂಟ ಹೊಂದಿರುವ ರಾಜ್ಯಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ 40 ರೂ.ಗಳಿಂದ 50 ರೂ.ವರೆಗೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಹಾಲಿನ ದರ ಪ್ರತಿ ಲೀಟರ್ ಗೆ 37 ರೂಪಾಯಿ ಮಾತ್ರವೇ ಇತ್ತು. ಹೀಗಾಗಿ ಕಳೆದೊಂದು ವರ್ಷದಿಂದ ಹಾಲಿನ ದರದ ಏರಿಕೆಯ ಕುರಿತು ಚರ್ಚೆ ನಡೆಸಲಾಗುತ್ತಿತ್ತು. ಇದೀಗ ಲೀಟರ್ ಗೆ 3ರೂಪಾಯಿಯಂತೆ ಹೆಚ್ಚಳ ಮಾಡಲಾಗಿದೆ.
ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್ ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಯೋಜನೆ ಇದೆ ಎನ್ನಲಾಗುತ್ತಿದೆ.
ಹವಾಮಾನ ವೈಪರೀತ್ಯ ಕಾರಣದಿಂದ ದನ ಕರುಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೇವಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದರ ಜೊತೆ ಕಳೆದ ಕೆಲ ತಿಂಗಳಿನಿಂದ ಧನಗಳಿಗೆ ಚರ್ಮ ಗಂಟು ರೋಗ ಕೂಡ ಬಾಧಿಸುತ್ತಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ
ಪ್ರತಿ ಲೀಟರ್ ಹಾಲಿನ ದರ ಕರ್ನಾಟಕದಲ್ಲಿ 37 ರೂ, ಆಂಧ್ರಪ್ರದೇಶ 55ರೂ, ತಮಿಳುನಾಡು 40 ರೂ ಕೇರಳ 46 ರೂ. ಮಹಾರಾಷ್ಟ್ರ 51 ರೂ. ದೆಹಲಿ 51ರೂ. ಗುಜರಾತ್ 50 ರೂ. ದರವಿದೆ. ಹೊಸ ದರದ ಅನ್ವಯ ಬ್ಲೂ ಪ್ಯಾಕೆಟ್ ಹಾಲಿನ ದರ 37 ರಿಂದ 40 ರೂ. ಹಾಗೂ ಅರೇಂಜ್ ಪ್ಯಾಕೆಟ್ 43 ಯಿಂದ 46 ರೂ.ಗೆ ಏರಿಕೆಯಾಗುತ್ತಿದೆ. ಇನ್ನು ಗ್ರೀನ್ ಪ್ಯಾಕೆಟ್ 44 ರಿಂದ 47 ರೂ. ಆಗಲಿದೆ.