ನಟಿ ಖುಷ್ಬೂ ಸುಂದರ್ ಚಿತ್ರರಂಗಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಖುಷ್ಭೂ ತಮ್ಮ ಎಲ್ಲ ವಿಚಾರಗಳನ್ನು ನೇರ ನೇರವಾಗಿ ಹೇಳಿಕೊಳ್ಳುತ್ತಾರೆ . ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿರುವ ಖುಷ್ಭೂ ಈ ವೇಳೆ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ನಟಿ ಖುಷ್ಬೂ.
ಬರ್ಖಾ ದತ್ ಜೊತೆಗೆ ಮಾತನಾಡಿದ ಖುಷ್ಬೂ ತಮಗೆ ಸಣ್ಣ ವಯಸ್ಸಿನಲ್ಲಿ ಆದ ಕಹಿ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ಅದು ಹುಡುಗಿ ಆಗಿರಬಹುದು, ಹುಡುಗನೇ ಆಗಿರಬಹುದು. ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು. ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹೊಡೆಯುವುದು, ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ (ತಂದೆ) ಭಾವಿಸಿದ್ದ. ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು. 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ’ ಎಂದು ಖುಷ್ಬೂ ತಂದೆಯ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಈ ವಿಷಯವನ್ನು ಹೊರಗೆ ಹೇಳಿದರೆ ಕುಟುಂಬದ ಇತರ ಸದಸ್ಯರು ನಿಂದನೆಗೆ ಒಳಗಾಗುತ್ತಾರೆ ಎಂಬ ಭಯ ನನ್ನ ಬಾಯಿಯನ್ನು ಹಲವು ವರ್ಷಗಳವರೆಗೆ ಮುಚ್ಚಿಸಿತು. ನನ್ನ ತಾಯಿ ನನ್ನನ್ನು ನಂಬದಿರಬಹುದು ಎಂದು ಅನಿಸುತ್ತಿತ್ತು. ಏಕೆಂದರೆ ಏನೇ ಆದರೂ ತನ್ನ ಗಂಡ ದೇವರು ಎನ್ನುವ ಮನಸ್ಥಿತಿ ಅವರದ್ದು. 15ನೇ ವಯಸ್ಸಿಗೆ ನಾನು ತಂದೆಯ ವಿರುದ್ಧ ತಿರುಗಿಬಿದ್ದೆ ಎಂದು ಖುಷ್ಬೂ ಹೇಳಿದ್ದಾರೆ.