ದಕ್ಷಿಣ ಕನ್ನಡ: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಲ್ಟಿ ಸ್ಟಾರ್ಗಳನ್ನು ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಸೀಮಿತ ಮಾರುಕಟ್ಟೆ ಇರುವ ಕೋಸ್ಟಲ್ ವುಡ್ನಲ್ಲಿ ಇದೇ ಮೊದಲ ಬಾರಿಗೆ ಮಲ್ಟಿ ಸ್ಟಾರ್ಗಳನ್ನಿಟ್ಟುಕೊಂಡು ನಿರ್ಮಾಣವಾಗಿರುವ ಲಾಸ್ಟ್ ಬೆಂಚ್ ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎ ಎಸ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣದ, ಎಂ ಪಿ ಪ್ರಧಾನ್ ನಿರ್ದೇಶನದ ಬಹುನಿರೀಕ್ಷಿತ ‘ವಿಐಪೀಸ್ ಲಾಸ್ಟ್ ಬೆಂಚ್’ ತುಳು ಸಿನಿಮಾ ಇಂದು ತುಳುನಾಡಿನಾದ್ಯಂತ ಬಿಡುಗಡೆಗೊಂಡಿತು. ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, “ಲಾಸ್ಟ್ ಬೆಂಚ್ ಸಿನಿಮಾ ಇಂದು ತುಳುನಾಡಿಗೆ ಅರ್ಪಣೆಯಾಗುತ್ತಿದೆ. ಸಿನಿಮಾ ಯಶಸ್ವಿಯಾಗಿ ತುಳುನಾಡು ಮಾತ್ರವಲ್ಲದೆ ಹೊರರಾಜ್ಯ, ದೇಶದ ಗಡಿಯನ್ನು ದಾಟಿ ಮುನ್ನುಗ್ಗಲಿ. ಇಂದು ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ನಿರ್ಮಾಪಕರು ನಮ್ಮೆಲ್ಲರಿಗೂ ಮನರಂಜನೆ ನೀಡುವ ದೃಷ್ಟಿಯಿಂದ ಆ ಸಾಹಸಕ್ಕೆ ಇಳಿದಿದ್ದಾರೆ. ಅವರ ಕೈ ಬಲಪಡಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತಾನಾಡಿ, ಸಿನಿಮಾ ಮಾಡಲು ಮುಂದೆ ಬಂದಿರುವ ನಿರ್ಮಾಪಕರು ಹಾಗೂ ಕಲಾವಿದರಿಗೆ ಅಭಿನಂದನೆಗಳು. ಈ ಚಿತ್ರ ಯಶಸ್ಸು ದಾಖಲಿಸಲಿ ಎಂದು ಹಾರೈಸಿದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತಾನಾಡಿ, ಇಂದು ಲಾಸ್ಟ್ ಬೆಂಚ್ ಸಿನಿಮಾ ಬಿಡುಗಡೆಯ ಶುಭದಿನವಾಗಿದೆ. ತುಳುನಾಡಿನ ಎಲ್ಲಾ ಜಾತಿಗಳನ್ನು ಒಗ್ಗೂಡಿಸಲು ಕಲೆ ಪೂರಕವಾಗಿದೆ. ತುಳು ಭಾಷೆಗೆ ಸಿನಿಮಾದಿಂದ ಹೆಚ್ಚಿನ ಬಲ ಬರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಜಯಕಿರಣ ಪತ್ರಿಕೆಯ ಮಾಲಕ, ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಕುಳಾಯಿ ಮಾಧವ ಭಂಡಾರಿ, ಕೆ.ಕೆ ಪೇಜಾವರ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಚಿತ್ರ ನಿರ್ಮಾಪಕಿ ಆಶಿಕಾ ಸುವರ್ಣ, ಸಹ ನಿರ್ಮಾಪಕ ಕಿರಣ್ ಶೆಟ್ಟಿ, ಭೋಜರಾಜ ವಾಮಂಜೂರು, ನಿರ್ದೇಶಕ ಪ್ರಧಾನ್ ಎಂ.ಪಿ., ನಟಿ ಆರಾಧ್ಯ ಶೆಟ್ಟಿ, ನವೀನ್ ಚಂದ್ರ ಪೂಜಾರಿ, ಕ್ಯಾಟ್ಕ ಅಧ್ಯಕ್ಷ ಮೋಹನ್ ಕೊಪ್ಪಲ, ನಟರಾದ ವಿನೀತ್ ಕುಮಾರ್, ಪೃಥ್ವಿ ಅಂಬರ್, ಐಸಿರಿ, ಚಿತ್ರ ಹಂಚಿಕೆದಾರ ಸಚಿನ್ ಎ ಎಸ್ ಉಪ್ಪಿನಂಗಡಿ, ಕಾರ್ಯಕಾರಿ ನಿರ್ಮಾಪಕ ಕಿಶೋರ್, ಕೀರ್ತನ್ ಭಂಡಾರಿ, ಸೃಜನ್ ಪೇಜಾವರ ಉಪಸ್ಥಿತರಿದ್ದರು.
ಲಾಸ್ಟ್ ಬೆಂಚ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಸುಳ್ಯದಲ್ಲಿ ಸಂತೋಷ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಅರುಣಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ.
ಕಥಾಹಂದರ: ವಿಐಪೀಸ್ ಲಾಸ್ಟ್ ಬೆಂಚ್ ತುಳುವಿನ ಮೊದಲ ಬಹು ನಾಯಕರಿರುವ ಸಿನಿಮಾವಾಗಿದ್ದು, ಇದು ಮೂರು ಬೇಜವಾಬ್ದಾರಿ ಹುಡುಗರ ಕಾಲೇಜು ಜೀವನದ ಕಥೆಯನ್ನು ಹೊಂದಿದೆ. ಆದರೆ ಅವರು ಅತಿಯಾಗಿ ಪ್ರೀತಿಸುತ್ತಿದ್ದ ಬಾಲಕನಿಂದ ಕಥೆಗೆ ಹೊಸ ತಿರುವು ಸಿಗುತ್ತದೆ.
ಈ ಸಿನಿಮಾವು ಹಾಸ್ಯ ಪ್ರಧಾನವಾಗಿದ್ದರೂ ಸೆಂಟಿಮೆಂಟ್ ಕಥೆಯನ್ನೂ ಹೊಂದಿದೆ. ಒಂದು ಕಥೆ ಹಾಸ್ಯದ ಹೊನಲು, ಮತ್ತೊಂದು ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವಾಗಿರುವ ಈ ಕಥೆಯಲ್ಲಿ ಪ್ರೇಕ್ಷಕರಿಗೆ ಹೊಟ್ಟೆ ತುಂಬಾ ನಗಲು ಬೇಕಾದ ಸಾಕಷ್ಟು ಅವಕಾಶಗಳಿವೆ. ಕೋಸ್ಟಲ್‌ವುಡ್‌ನ ಖ್ಯಾತನಾಮ ಕಲಾವಿದರಾದ ರೂಪೇಶ್ ಶೆಟ್ಟಿ, ಪೃಥ್ವಿ ಅಂಬಾರ್, ವಿನೀತ್ ಕುಮಾರ್ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ರವಿ ರಾಮಕುಂಜ, ರೂಪ ವರ್ಕಾಡಿ, ಪ್ರವೀಣ್ ಮರ್ಕಮೆ, ಅಥರ್ವ ಪ್ರಕಾಶ್, ವಿಸ್ಮಯ ವಿನಾಯಕ, ನಿರೀಕ್ಷಾ ಶೆಟ್ಟಿ, ಆರಾಧ್ಯ ಶೆಟ್ಟಿ, ಅನಿತಾ, ಐಸಿರಿ, ಪ್ರಾರ್ಥನಾ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಐಪೀಸ್ ಲಾಸ್ಟ್ ಬೆಂಚ್ ಸಿನಿಮಾವನ್ನು ಮಂಗಳೂರು ಸುತ್ತಮುತ್ತಲಿನ ಹಲವಾರು ಅತ್ಯಾಕರ್ಷಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.